ಗದಗ: ಗಾವಾಯಿಗಳ ಊರಲ್ಲಿ ನಿಂತ ಸಂಗೀತ ಸುಧೆ, ಕಲಾವಿದರಿಗೆ ಹಣ ಕೊಡದಷ್ಟು ಬಡವಾಯ್ತೆ ಸರ್ಕಾರ?

ಗದಗ ಬೆಟಗೇರಿ‌ ಅಂದಾಕ್ಷಣ ನೆನಪಿಗೆ ಬರುವುದು, ಸಂಗೀತ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ. ಪಂಡಿತ ಪಂಚಾಕ್ಷರಿ ಹಾಗೂ ಪುಟ್ಟರಾಜ ಗವಾಯಿಗಳು ಲಕ್ಷಾಂತರ ಮಕ್ಕಳಿಗೆ ಸಂಗೀತ ವಿದ್ಯೆಯನ್ನ ಧಾರೆಯೆರಿದಿರುವದು ಇತಿಹಾಸವೇ ಸರಿ. ಆದರೆ, ಇದೀಗ ಸರ್ಕಾರದ ನಿರ್ಲಕ್ಷಕ್ಕೆ ಗದಗನಲ್ಲಿ ಸಂಗೀತ ಸುಧೆ ನಿಂತಿದೆ.

ಗದಗ: ಗಾವಾಯಿಗಳ ಊರಲ್ಲಿ ನಿಂತ ಸಂಗೀತ ಸುಧೆ, ಕಲಾವಿದರಿಗೆ ಹಣ ಕೊಡದಷ್ಟು ಬಡವಾಯ್ತೆ ಸರ್ಕಾರ?
ಗಾವಾಯಿಗಳ ಊರಲ್ಲಿ ನಿಂತ ಸಂಗೀತ ಸುಧೆ, ಕಲಾವಿದರಿಗೆ ಹಣ ಕೊಡದಷ್ಟು ಬಡವಾಯ್ತೆ ಸರ್ಕಾರ?
Follow us
| Updated By: ವಿವೇಕ ಬಿರಾದಾರ

Updated on: Jul 14, 2024 | 3:01 PM

ಗದಗ, ಜುಲೈ 14: ಸಂಗೀತದ ತವರೂರು. ಕಲಾವಿದರನ್ನು ತಯಾರು‌ ಮಾಡುವ ಕಾರ್ಖಾನೆ ಇದ್ದಂತೆ. ಇಲ್ಲಿನ ಪ್ರತಿ ಮನೆಯಲ್ಲೂ ಸಂಗೀತ (Music) ಆರಾಧಕ ಇರುತ್ತಾನೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಹೆಚ್​ಕೆ ಪಾಟೀಲರ (HK Patil) ಸ್ವ ಆಸಕ್ತಿ ಮೇರೆಗೆ, ಉದ್ಯಾನವನದಲ್ಲಿ ಉದಯರಾಗ‌, ಸಂಧ್ಯಾರಾಗ (Udayaraga, Sandhyaraga) ಅನ್ನೋ‌ ಸಂಗೀತ ಸಂಭ್ರಮ‌ ನಡೆಸಲಾಗ್ತಿತ್ತು. ಆದರೆ, ಅನುದಾನ ನೀಡದಿದ್ದಕ್ಕೆ, ಇದೀಗ ಸಂಧ್ಯಾರಾಗ ಹಾಗೂ ಉದಯರಾಗಗಳ ಆಲಾಪ ನಿಂತು ಹೋಗಿದ್ದು,‌ ಕಾರ್ಯಕ್ರಮ ನೀಡಿದ ಕಲಾವಿದರ ಲಕ್ಷಾಂತರ ಗೌರವಧನ ನೀಡದೆ ಸತಾಯಿಸುತ್ತಿದ್ದು, ಉಸ್ತುವಾರಿ ಸಚಿವರು, ಅಧಿಕಾರಿಗಳ ವಿರುದ್ಧ ಕಲಾವಿದರು ಆಕ್ರೋಶ ಹೊರಹಾಕಿದ್ದಾರೆ.

ಎಲೆಮರೆ ಕಾಯಿಯಂತಿರುವ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಒದಗಿಸುವದರ ಜತೆಗೆ, ಬಡಕಲಾವಿದರಿಗೆ ಆರ್ಥಿಕ ಸಹಕಾರ ಸಿಗಲಿ, ‌ಅನ್ನೋ ಉದ್ದೇಶದಿಂದ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಾವುದೇ ಅನುದಾನ ಇಲ್ದಿದ್ದರೂ ‌ಪ್ರತಿ ಭಾನುವಾರ‌ ಉದ್ಯಾನವನದಲ್ಲಿ ಉದಯರಾಗ, ಸಂಧ್ಯಾರಾಗ ಅನ್ನೋ ಕಾರ್ಯಕ್ರಮ ಪ್ರಾರಂಭಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲರ ವಿಶೇಷ ಆಸಕ್ತಿ ಮೇರೆಗೆ ಜಿಲ್ಲಾಡಳಿತ ವರ್ಷದ ಹಿಂದೆ ಕಾರ್ಯಕ್ರಮ ಉದ್ಘಾಟಿಸಿತ್ತು.

ಸತತ ಒಂದು ವರ್ಷಗಳ ಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆ ಮುಂದುವರಿಸಿಕೊಂಡು ಬಂದಿತ್ತು. ಆದರೆ ಒಂದು ವರ್ಷಗಳ ಕಾಲ ಕಾರ್ಯಕ್ರಮ‌ ನೀಡಿದ ಯಾವೊಬ್ಬ ಕಲಾವಿದರಿಗೂ ಈವರೆಗೂ ಗೌರವಧನ ಪಾವತಿಯಾಗಿಲ್ಲ. ಮುಖ್ಯ ಕಲಾವಿದರು ಸಹಕಲವಿದರಿಗೆ ಸಾವಿರಾರು ರೂಪಾಯಿ ಗೌರವಧನ ಕೈಯಿಂದ ನೀಡಿ ಕಾರ್ಯಕ್ರಮ ನೀಡಿದ್ದಾರೆ. ಆದರೆ, ಈ ಕಲಾವಿದರಿಗೆ ಜಿಲ್ಲಾಡಳಿತ ಗೌರವ ಸಂಭಾವನೆ ನೀಡದೆ ಸತಾಯಿಸುತ್ತಿದೆ. ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲರು ಮೌನವಾಗಿದ್ದಾರೆ. ಇದು ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಯಕ್ರಮ ನೀಡಿದ ಗೌರವಧನ ನೀಡಬೇಕು ಅಂತ ಕಲಾವಿದರು ಒತ್ತಾಯಿಸಿದ್ದಾರೆ.

ಉದಯರಾಗ, ಸಂಧ್ಯಾರಾಗ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಹೀಗಾಗಿ ಈ ಕಾರ್ಯಕ್ರಮ ನಮಗೆ ಸಂಬಂಧವೇ ಇಲ್ಲ ಅಂತ ಇಲಾಖೆ ಹೇಳುತ್ತಿದೆ. ನೂರಾರು ಕಲಾವಿದರು ಕಾರ್ಯಕ್ರಮ ನೀಡಿದ್ದಾರೆ. ಹೀಗಾಗಿ 8 ಲಕ್ಷಕ್ಕೂ ಅಧಿಕ ಗೌರವಧನ ಬಾಕಿ ಉಳಿದಿದ್ದು, ಕೂಡಲೇ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಗೌರವಧನ ಕೊಡಿಸುವ ಮೂಲಕ ಕಲಾವಿದಾರನ್ನು ಸಂಕಷ್ಟದಿಂದ ಕಾಪಾಡಬೇಕು ಎಂದ ಸಂಗೀತ ಕಲಾವಿದೆ ಪೂಜಾ ಬೇವೂರ ಮನವಿ ಮಾಡಿದ್ದಾರೆ.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೂ ಮುನ್ನವೇ ಸ್ಥಗಿತಕೊಂಡಿದ್ದ ಈ ಕಾರ್ಯಕ್ರಮ ನೀತಿ‌ ಸಂಹಿತೆ ಮುಗಿದ ನಂತರವೂ ಪ್ರಾರಂಭಗೊಂಡಿಲ್ಲ. ಕಾರ್ಯಕ್ರಮ ಆರಂಭ ಆರಂಭವಾಗುವುದಿರಲಿ, ಈ ಹಿಂದೆ ನೀಡಿದ್ದ ಕಾರ್ಯಕ್ರಮಗಳ ಗೌರವ ಧನವನ್ನಾದರೂ ಪಾವತಿ ಮಾಡಿ ಎಂದು ಕಲಾವಿದರು ಅಳಲು ತೋಡಿಕೊಂಡಿದ್ದಾರೆ. ಈ ಕುರಿತು, ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು‌, ಕೇಂದ್ರ ಕಚೇರಿಗೂ ಅನುದಾನದ ಬೇಡಿಕೆ ಪತ್ರ ಕಳುಹಿಸಲಾಗಿದೆ. ಆದರೆ ಈ ರೀತಿಯ ಕಾರ್ಯಕ್ರಮಕ್ಕೆ ಯಾವುದೆ ನಿರ್ದಿಷ್ಟ ಯೋಜನೆ ಇಲ್ಲ, ಅನುದಾನವನ್ನೂ ಇಟ್ಟಿಲ್ಲ ಅಂತ ಕೇಂದ್ರ ಕಚೇರಿ ಹಿಂಬರಹ ಕಳಿಸಿದೆ.‌ ಇದರಿಂದ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕತಿ ಇಲಾಖೆ ಮತ್ತಷ್ಟು ಮುಜುಗುರಕ್ಕೀಡಾಗಿದ್ದು, ಮುಂದಿನ ಮಾರ್ಗಕ್ಕಾಗಿ, ಸಚಿವ ಹೆಚ್.ಕೆ.ಪಾಟೀಲರತ್ತ ಇಲಾಖೆಗಳು ಬೊಟ್ಟು ಮಾಡಿವೆ. ಇದು ಗದಗ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಗ್ಯಾರಂಟಿಗಳ ಅಲೆಗಳಲ್ಲಿ ಮುಳಗಿರುವ ಕಾಂಗ್ರೆಸ್ ಸರ್ಕಾರ, ಯಾವುದೇ ಅಭಿವೃದ್ಧಿ ಯೋಜನೆ ಕೈಗೊಳ್ಳುತ್ತಿಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ. ಅಂತಹದರಲ್ಲಿ ಸಣ್ಣಪುಟ್ಟ ಕಲಾವಿದರಿಗೂ ಗೌರವ ಸಂಭಾವನೆ ಪಾವತಿಯಾಗದೆ ಇರುವುದು, ಅಭಿವೃದ್ಧಿ‌ ಶೂನ್ಯ ‌ಸರ್ಕಾರ ಅನ್ನೋ‌ ಮಾತಿಗೆ ಪುಷ್ಟಿ ನೀಡಿದಂತಾಗಿದೆ. ಅದೇನೆ ಇರಲಿ, ಇಲಾಖೆಯಲ್ಲಿ ಯೋಜನೆ ಇದೆಯೋ ಇಲ್ಲವೋ‌ ಅಂತ,‌ ಮೊದಲೇ ಯೋಚಿಸಿ, ಕಲಾವಿದರಿಗೆ ಕಾರ್ಯಕ್ರಮ ನೀಡಬೇಕಿತ್ತು.‌ ಕಾರ್ಯಕ್ರಮ ನೀಡಿದ ಮೇಲೆ,‌ ಕಲಾವಿದರಿಗೆ ಸಂಭಾವನೆ ನೀಡದೇ ಇರುವುದು ಯಾವ ನ್ಯಾಯ ಅನ್ನುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ