ಸಚಿವ ಎಚ್ ಕೆ ಪಾಟೀಲ್ ಅವರಿಗೆ ಜೀವ ಬೆದರಿಕೆ! ಸಚಿವರನ್ನು ನಿಲ್ಲಿಸಿ AK-47 ನಿಂದ ಗುಂಡಿನ ಮಳೆಗರೆಯಬೇಕು ಎಂದಿದ್ದ ಭೂಪ ಅಂದರ್
ಕರ್ನಾಟಕ ಕಾನೂನು ಸಚಿವ ಎಚ್.ಕೆ. ಪಾಟೀಲ್‌ಗೆ ಫೇಸ್‌ಬುಕ್ ಮೂಲಕ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಗದಗ ಪೊಲೀಸರು ಬಂಧಿಸಿದ್ದಾರೆ. ವೀರಣ್ಣ ಬೀಳಗಿ ಎಂಬಾತ ಸಚಿವರ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ. ದೂರಿನ ಆಧಾರದ ಮೇಲೆ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ನಡೆಸಿದ್ದು, ಆತನನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್‌ಗಳಿಗೆ ಕಾನೂನು ಕ್ರಮ ಅನಿವಾರ್ಯ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಗದಗ, ಡಿಸೆಂಬರ್ 20: ಇತ್ತೀಚಿಗೆ ಸರ್ಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆಯ ಕರೆಗಳು, ಇ-ಮೇಲ್ಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಕರ್ನಾಟಕದ ಕಾನೂನು ಸಚಿವ ಸಚಿವ ಎಚ್.ಕೆ. ಪಾಟೀಲ್‌ಗೆ (H K Patil) ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ ಹಾಕಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಸಚಿವರಿಗೆ ಅವಹೇಳನಕಾರಿ ಪದಗಳಿಂದ ನಿಂದನೆ
ಕೆಲ ದಿನಗಳ ಹಿಂದೆಯಷ್ಟೇ ಮಂಗಳೂರು, ಗದಗ ಸೇರಿದಂತೆ ಹಲವೆಡೆ ಸರ್ಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ಗಳು ಬಂದಿದ್ದವು. ಈ ನಡುವೆ ಕಾನೂನು ಸಚಿವ ಎಚ್.ಕೆ. ಪಾಟೀಲ್‌ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ ಹಾಕಿದ್ದು, ಎಲ್ಲೆಡೆ ಸಂಚಲನ ಮೂಡಿಸಿದೆ. ವೀರಣ್ಣ ಬೀಳಗಿ ಎಂಬಾತ ಪ್ರಚೋದನಕಾರಿ ಪೋಸ್ಟ್ ಹಾಕಿದ್ದು, ಸಚಿವರನ್ನು ಅವಹೇಳನಕಾರಿ ಪದಗಳಿಂದ ಕರೆಯುವ ಜೊತೆಗೆ ಸಚಿವರನ್ನು ನಿಲ್ಲಿಸಿ AK-47 ನಿಂದ ಗುಂಡಿನ ಮಳೆಗರೆಯಬೇಕು ಎಂದಿದ್ದ.
ಸಾರ್ವಜನಿಕ ಸ್ಥಳದಲ್ಲಿ ಹಾನಿ ಮಾಡುವ ಬೆದರಿಕೆ ನೀಡಿದ್ದ. ಈ ವಿಚಾರ ಬೆಳಕಿಗೆ ಬಂದ ತಕ್ಷಣ ಕಾಂಗ್ರೆಸ್ ಮುಖಂಡ ಬಿ.ಬಿ. ಅಸೂಟಿ ಅವರು ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಆಧಾರದಲ್ಲಿ ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ, ಡಿಸೆಂಬರ್ 14ರಂದು ರೋಣ ತಾಲೂಕಿನ ಸೂಡಿ ಗ್ರಾಮದ ನಿವಾಸಿ ವೀರಣ್ಣ ಬೀಳಗಿಯನ್ನು ಬಂಧಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆ ಹಾಕುವವರ ವಿರುದ್ಧ ಕ್ರಮ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹಾಗೂ ಬೆದರಿಕೆ ಉಂಟುಮಾಡುವ ಪೋಸ್ಟ್‌ಗಳಿಗೆ ಕಾನೂನು ಕ್ರಮ ಅನಿವಾರ್ಯವೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇಂತಹ ಪೋಸ್ಟ್‌ಗಳು ಸಾರ್ವಜನಿಕ ಶಾಂತಿ ಹಾಗೂ ಭದ್ರತೆಗೆ ಧಕ್ಕೆಯಾಗುತ್ತವೆ ಎಂದು ತಿಳಿಸಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



