
ಗದಗ, ಜುಲೈ 02: ಡಾ. ಚಂದ್ರು ಲಮಾಣಿ ಕಾರು ಚಾಲಕ ಸುನೀಲ್ ಲಮಾಣಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶಿರಹಟ್ಟಿ ಶಾಸಕರ ವಿರುದ್ಧವೇ ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. 2025 ಜನವರಿ 9ರಂದು ನೇಣು ಬಿಗಿದುಕೊಂಡು ಚಾಲಕ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಶಾಸಕರ ಅವ್ಯವಹಾರ ಆತನಿಗೆ ಗೊತ್ತಿತ್ತು. ಹೀಗಾಗಿ ಅವನಿಗೆ ಶಾಸಕರು ಬೆದರಿಕೆ ಹಾಕಿದ್ದರು. ಅಲ್ಲದೆ ಕೆಲಸ ಮಾಡಿರುವ ವೇತನವನ್ನು ಕೂಡ ಸರಿಯಾಗಿ ನೀಡಿಲ್ಲ. ಹೀಗಾಗಿ ನಮಗೆ ಸುನೀಲ್ ಸಾವಿಗೆ ಬಗ್ಗೆ ಅನುಮಾನ ಇದೆ. ನಮಗೆ ನ್ಯಾಯ ಸಿಗಬೇಕು ಎಂದು ಮೃತನ ಸಹೋದರ, ತಂದೆ ಮತ್ತು ತಾಯಿ ಆಗ್ರಹಿಸಿದ್ದಾರೆ.
ಪ್ರಕರಣ ಕೆದಕಿದ್ರೆ ನಿಮ್ಮ ದೊಡ್ಡ ಮಗ ಕೂಡ ಬೀದಿ ಹೆಣವಾಗ್ತಾನೆ ಎಂದು ಶಾಸಕ ಚಂದ್ರು ಲಮಾಣಿ ಬೆದರಿಕೆ ಹಾಕಿದ್ದಾರೆ. ಪಿಎಸ್ಐನಿಂದಲೂ ನಮಗೆ ಜೀವ ಬೆದರಿಕೆ ಇದೆ. ಮರಣೋತ್ತರ ಪರೀಕ್ಷೆ ವರದಿ ಕೊಡಲು ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪಿಎಸ್ಐ ಒಂದು ವರ್ಷ ಅಲೆದಾಡಿಸಿದ್ದಾರೆ ಅಂತಲೂ ಮೃತ ಸುನೀಲ್ ಪೋಷಕರು ದೂರಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಾಸಕ ನಿವಾಸದಲ್ಲೇ ಕಾರು ಚಾಲಕ ನಿಗೂಢ ಸಾವು..!
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡ್ ಕಾಲೋನಿಯಲ್ಲಿ ಸುನೀಲ್ ಲಮಾಣಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತಾದರೂ, ನಿಖರ ಕಾರಣ ತಿಳಿದುಬಂದಿರಲಿಲ್ಲ. ಶಾಸಕ ಚಂದ್ರು ಲಮಾಣಿ ನಿವಾಸದಲ್ಲೇ ಸುನಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ಜು ಮೃತ ಸುನಿಲ್ ಶಾಸಕ ಚಂದ್ರು ಅವರ ಸಂಬಂಧಿ ಕೂಡ ಆಗಿದ್ದು, ಮನೆ ಕಟ್ಟುವ ವಿಷಯದಲ್ಲಿ ಸಹೋದರರ ನಡುವೆ ಕಲಹವೇ ಘಟನೆಗೆ ಕಾರಣವಿರಬಹುದು ಎನ್ನಲಾಗಿತ್ತು.
ಸುನೀಲ್ ಲಮಾಣಿ ಆತ್ಮಹತ್ಯೆ ಬಗ್ಗೆ ಕುಟುಂಬಸ್ಥರು ಅಂದೇ ಅನುಮಾನ ವ್ಯಕ್ತಪಡಿಸಿದ್ದರು. ಕುಟುಂಬಸ್ಥರು ಬರುವ ತನಕ ಪೊಲೀಸರು ಕಾಯದೆ, ಅವಸರದಲ್ಲಿ ಶವ ತೆಗೆದಿದ್ದಾರೆ. ಸುನೀಲ್ ಕತ್ತಿನಲ್ಲಿ ರಕ್ತ ಕಾಣಿಸಿದೆ. ಹೀಗಾಗಿ ಯಾರಾದರೂ ಕೊಲೆ ಮಾಡಿರುವ ಅನುಮಾನ ಇದೆ. ಆತ್ಮಹತ್ಯೆ ಮಾಡಿಕೊಂಡರೆ ನಾಲಿಗೆ ಹೊರ ಬರುತ್ತಿತ್ತು. ಉರುಳು ಹಾಕಿಕೊಂಡ ಹಗ್ಗದ ಗುರುತು ಕತ್ತಿನಲ್ಲಿ ಇರ್ತಿತ್ತು. ಆದ್ರೆ ಕತ್ತಿನಲ್ಲಿ ರಕ್ತ ಕಂಡಿದೆ. ಹೀಗಾಗಿ ಸಾವಿನಲ್ಲಿ ಅನುಮಾನ ಇದೆ ಎಂದ ಕುಟುಂಬಸ್ಥರು ಹೇಳಿದ್ದರು. ಈಗ ಆ ಪ್ರಕರಣ ಮತ್ತೊಂದು ತಿರುವು ಪಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:45 am, Thu, 2 July 26