ಗದಗ ಎಸ್ಎಸ್ಕೆ ಕಮಿಟಿಯಲ್ಲಿ ಭಾರಿ ಹಗರಣ ಆರೋಪ! ಸಮಾಜ ಮುಖಂಡರಿಗೆ ಧಮ್ಕಿ ಹಾಕಿದ ವಿಡಿಯೋ ವೈರಲ್
ಸ್ವಯಂಘೋಷಿತವಾಗಿ ಅಧ್ಯಕ್ಷ ಶ್ರೀಕಾಂತ ಖಟವಟೆ, ಉಪಾಧ್ಯಕ್ಷ ಪ್ರಕಾಶ್ ಬಾಕಳೆ ಅನಧಿಕೃತವಾಗಿ ಮುಂದುವರೆದಿದ್ದಾರೆ ಅಂತ ಮುಖಂಡರು ಆರೋಪಿಸಿದ್ದಾರೆ. ಅಲ್ಲದೇ ಸಮಾಜದ ಆರೂಢಾಮಠದ ಭವನ ನಿರ್ಮಾಣದಲ್ಲಿ ಕೋಟ್ಯಾಂತರ ಅವ್ಯವಹಾರ ಮಾಡಿದ್ದಾರೆ ಅಂತ ಹೇಳುತ್ತಿದ್ದಾರೆ.
ಗದಗ: ಎಸ್ಎಸ್ಕೆ (SSK) ಸಮಾಜ ಪಂಚ ಕಮಿಟಿಯಲ್ಲಿ ಭಾರಿ ಹಗರಣ ನಡೆದಿರುವ ಆರೋಪ ಕೇಳಿಬಂದಿದೆ. ಅಲ್ಲದೆ ಲೆಕ್ಕವನ್ನು ಕೇಳಿದ ಕಮಿಟಿ ಸದಸ್ಯರಿಗೆ ಟ್ರಸ್ಟ್ನ ಉಪಾಧ್ಯಕ್ಷ ಪ್ರಕಾಶ್ ಬಾಕಳೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪತಿ ಪ್ರಕಾಶ್ ಬಾಕಳೆ ಧಮ್ಕಿ ಹಾಕಿದ ವಿಡಿಯೋ ವೈರಲ್ ಆಗಿದ್ದು, ಶಹರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗದಗ (Gadag) ಜಿಲ್ಲೆಯಲ್ಲಿ ಎಸ್ಎಸ್ಕೆ ಸಮಾಜ ಬಹುದೊಡ್ಡ ಸಮಾಜ. ಹೀಗಾಗಿ ಸಮಾಜ ಹಿರಿಯರು ಸೇರಿ ಎಸ್ಎಸ್ಕೆ ಸಮಾಜ ಪಂಚ ಅಂತ ಕಮೀಟಿ ಸ್ಥಾಪನೆ ಮಾಡಿದ್ದಾರೆ.
ಇದರಡಿ ಕೋಟ್ಯಾಂತರ ಮೌಲ್ಯದ ಆಸ್ತಿ ಇದೆ. ಹೀಗಾಗಿ ಎಸ್ಎಸ್ಕೆ ಸಮಾಜ ಪಂಚ ಕಮೀಟಿ ಅಧ್ಯಕ್ಷ ಆಗೋಕೆ ಮುಂದೆ ಬರುತ್ತಾರೆ. ಆದರೆ ಸಮಾಜದ ಪ್ರಭಾವಿಗಳಿಗೆ ಅಧಿಕಾರ ನೀಡಿದರೆ ಸಮಾಜ ಅಭಿವೃದ್ಧಿ ಆಗುತ್ತೆಂದು ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಕಾಂತ್ ಖಟವಟೆ, ಮಾಜಿ ನಗರಸಭೆ ಉಪಾಧ್ಯಕ್ಷ ಪ್ರಕಾಶ್ ಬಾಕಳೆಗೆ ಅಧಿಕಾರ ನೀಡಿದ್ದಾರೆ. ಆದರೆ ಇದೀಗ ಇವರ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
18 ಕಮಿಟಿ ಸದಸ್ಯರು ರಾಜೀನಾಮೆ: ಸಮಾಜದ ಕೋಟ್ಯಾಂತರ ಹಣ ನುಂಗಿದ್ದಾರೆ ಅಂತ ಸಮಾಜ ಮುಖಂಡರು ಆರೋಪಿಸಿದ್ದಾರೆ. ಜಗದಂಬಾ ದೇವಸ್ಥಾನದ ಕೆಜಿಗಟ್ಟಲೇ ಬಂಗಾರ ಹಾಗೂ ಆದಾಯದ ಲೆಕ್ಕ, ಮಂಗಲ ಕಾರ್ಯಾಲಯಗಳ ಆದಾಯದ ಲೆಕ್ಕ ಸೇರಿ ವಿವಿಧ ಆಸ್ತಿಗಳಿಂದ ಬರುವ ಕೋಟ್ಯಾಂತರ ಆದಾಯದ ಬಗ್ಗೆ ಹಲವು ವರ್ಷಗಳಿಂದ ಸಮಾಜಕ್ಕೆ ಲೆಕ್ಕವೇ ಕೊಟ್ಟಿಲ್ಲ. ಈ ವಿಷಯಕ್ಕೆ ಎಸ್ಎಸ್ಕೆ ಸಮಾಜ ಪಂಚ ಕಮೀಟಿ ಜಗಳ ಈಗ ಬೀದಿಗೆ ಬಂದಿದೆ. ಸಮಾಜ ಜಗಳದ ಹಿನ್ನಲೆಯಲ್ಲಿ ಈಗಾಗಲೇ 18 ಕಮಿಟಿ ಸದಸ್ಯರು ರಾಜೀನಾಮೆ ನೀಡಿದ್ದಾರಂತೆ.
ಸ್ವಯಂಘೋಷಿತವಾಗಿ ಅಧ್ಯಕ್ಷ ಶ್ರೀಕಾಂತ ಖಟವಟೆ, ಉಪಾಧ್ಯಕ್ಷ ಪ್ರಕಾಶ್ ಬಾಕಳೆ ಅನಧಿಕೃತವಾಗಿ ಮುಂದುವರೆದಿದ್ದಾರೆ ಅಂತ ಮುಖಂಡರು ಆರೋಪಿಸಿದ್ದಾರೆ. ಅಲ್ಲದೇ ಸಮಾಜದ ಆರೂಢಾಮಠದ ಭವನ ನಿರ್ಮಾಣದಲ್ಲಿ ಕೋಟ್ಯಾಂತರ ಅವ್ಯವಹಾರ ಮಾಡಿದ್ದಾರೆ ಅಂತ ಹೇಳುತ್ತಿದ್ದಾರೆ. ಜನವರಿ 28 ರಂದು ಜಗದಂಬಾ ದೇವಸ್ಥಾನದಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸಮಾಜದ ಮುಖಂಡರಾದ ವಿನೋದ್ ಸಿದ್ಲಿಂಗ್, ಫಕೀರಸಾ ಭಾಂಡಗೆ ಸೇರಿ ಹಲವು ಜನರು ಲೆಕ್ಕ ಕೇಳಿದ್ದಾರೆ. ಈ ಉಪಾಧ್ಯಕ್ಷ ಪ್ರಕಾಶ್ ಬಾಕಳೆ ಏಕಾಏಕಿ ರೊಚ್ಚಿಗೆದ್ದು, ಸಮಾಜದ ಇತರ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಗೂಂಡಾಗಿರಿ ಮಾಡಿದ್ದಾರೆ ಅಂತ ಸಮಾಜದ ಮುಖಂಡ ವಿನೋದ ಸಿದ್ಲಿಂಗ್ ಆರೋಪಿಸಿದ್ದಾರೆ.
ಪ್ರಾಮಾಣಿಕರೇ ಆಗಿದ್ದರೆ ಸಮಾಜದ ಮುಂದೆ ಲೆಕ್ಕ ಇಡಲಿ. ಅದು ಬಿಟ್ಟು ಲೆಕ್ಕ ಕೇಳಲು ಬಂದವರ ಮೇಲೆ ದಬ್ಬಾಳಿಕೆ, ಗೂಂಡಾಗಿರಿ ಮಾಡಿದರೆ ಹೆದರಲ್ಲ ಅಂತ ಸಮಾಜದ ಮುಖಂಡರು ತಿರುಗೇಟು ನೀಡಿದ್ದಾರೆ. ನಮ್ಮ ಜೀವಕ್ಕೆ ಅಪಾಯವಾದರೆ ಶ್ರೀಕಾಂತ್ ಖಟವಟೆ ಹಾಗೂ ಪ್ರಕಾಶ್ ಬಾಕಳೆ ಕಾರಣ ಅಂತ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೋಟ್ಯಾಂತರ ಅವ್ಯವಹಾರ ಬಗ್ಗೆ ತನಿಖೆ ಮಾಡಬೇಕು ಅಂತ ಡಿಸಿ, ಡಿಆರ್ ಸೇರಿ ಸಂಬಂಧಪಟ್ಟ ಅಧಿಕಾರಿಗಳ ದೂರು ನೀಡಲಾಗಿದೆ ಅಂತ ಎಸ್ಎಸ್ಕೆ ಸಮಾಜ ಪಂಚ ಕಮೀಟ್ ಸದಸ್ಯ ಫಕೀರಸಾ ಭಾಂಡಗೆ ಹೇಳಿದ್ದಾರೆ.
ತನಿಖೆ ಆದೇಶಕ್ಕೆ ಒತ್ತಾಯ: ಅಧ್ಯಕ್ಷ ಶ್ರೀಕಾಂತ್ ಖಟವಟೆ ಈ ಹಿಂದೆ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಗಿದ್ದರು. ಉಪಾಧ್ಯಕ್ಷ ಪ್ರಕಾಶ್ ಬಾಕಳೆ ನಗರಸಭೆ ಉಪಾಧ್ಯಕ್ಷಆಗಿದ್ದರು. ಅಲ್ಲೂ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಈಗ ಸಮಾಜದ ಹಣವೂ ಸಾಲುತ್ತಿಲ್ಲ ಅಂತ ಎಸ್ಎಸ್ಕೆ ಸಮಾಜದ ಮುಖಂಡರು ಕಿಡಿಕಾರಿದ್ದಾರೆ. ಸರ್ಕಾರ ಎಸ್ಎಸ್ಕೆ ಸಮಾಜ ಪಂಚ ಕಮೀಟಿಯಲ್ಲಿ ಆದ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶ ಮಾಡಬೇಕು ಅಂತ ಸಮಾಜ ಮುಖಂಡರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ
ಅಂಗಲಾಚಿದ್ದರೂ ಬೈಕ್ ಟೋಯಿಂಗ್ ಮಾಡಿದ್ದ ಪ್ರಕರಣದ ತನಿಖೆಗೆ ಆದೇಶ, 4 ಲಕ್ಷ ಮೌಲ್ಯದ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ
ಸಿಎಂ ಇಬ್ರಾಹಿಂಗೆ ಕೈತಪ್ಪಿದ ಪರಿಷತ್ ವಿಪಕ್ಷ ನಾಯಕ ಸ್ಥಾನ: ಮುಸ್ಲಿಂ ಸಮುದಾಯದ ನಾಯಕರ ಅಸಮಾಧಾನ
Published On - 5:31 pm, Sun, 30 January 22