₹4 ಲಕ್ಷ ಮೌಲ್ಯದ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ
ತುಮಕೂರು ಜಿಲ್ಲೆ ಮಧುಗಿರಿ ಅಬಕಾರಿ ಅಧಿಕಾರಿಗಳಿಂದ ₹4 ಲಕ್ಷ ಮೌಲ್ಯದ ಮದ್ಯ ನಾಶಪಡಿಸಲಾಗಿದೆ. 220 ಕೇಸ್ಗಳಲ್ಲಿ ವಶಕ್ಕೆ ಪಡೆದಿದ್ದ ಅಕ್ರಮ ಮದ್ಯ ನಾಶ ಮಾಡಲಾಗಿದೆ. 824.510 ಲೀ. ಮದ್ಯ, 42.940 ಲೀಟರ್ ಬಿಯರ್ ಕೋರ್ಟ್ ಆದೇಶ ಮೆರೆಗೆ ಅಧಿಕಾರಿಗಳು ನಾಶಪಡಿಸಿದ್ದಾರೆ.
ಫೈನಾನ್ಶಿಯರ್ ಕಿರುಕುಳಕ್ಕೆ ಬೇಸತ್ತು ಕ್ರೂಸರ್ ವಾಹನಕ್ಕೆ ಬೆಂಕಿ
ಫೈನಾನ್ಶಿಯರ್ ಕಿರುಕುಳಕ್ಕೆ ಬೇಸತ್ತು ಕ್ರೂಸರ್ ವಾಹನಕ್ಕೆ ವಾಹನದ ಮಾಲೀಕನೇ ಬೆಂಕಿ ಇಟ್ಟ ಘಟನೆ ಕೊಪ್ಪಳ ನಗರದ ಬಸ್ ನಿಲ್ದಾಣದ ಮುಂದೆ ನಡೆದಿದೆ. ಮಾಲೀಕ ಸುಭಾಷ್‌ಚಂದ್ರ ನಡು ರಸ್ತೆಯಲ್ಲೇ ಕ್ರೂಸರ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಫೈನಾನ್ಸ್ ಹಣ ಕಟ್ಟಲಾಗದೆ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಅಗ್ನಿಶಾಮಕದಳ ಸಿಬ್ಬಂದಿ ನಂದಿಸಿದ್ದಾರೆ.
ಮಂಜುಳಾ ದಾನಸೂರ ಎಂಬುವವರ ಹೆಸರಿನಲ್ಲಿರುವ ವಾಹನವು ಬಾಗಲಕೋಟೆ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿತ್ತು. ವಾಹನ ಖರೀದಿಗೆ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಸಾಲ ಮಾಡಲಾಗಿತ್ತು. ಸಾಲ ಮರು ಪಾವತಿ ಮಾಡದಿದ್ದಕ್ಕೆ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗೋಮಾಳದಲ್ಲಿ ಅಡಕೆ ಗಿಡಗಳನ್ನು ನೆಟ್ಟ ಹಿನ್ನೆಲೆ ಗಲಾಟೆ
ಗೋಮಾಳದಲ್ಲಿ ಅಡಕೆ ಗಿಡಗಳನ್ನು ನೆಟ್ಟ ಹಿನ್ನೆಲೆ ಗಲಾಟೆ ಮಾಡಿ ಗಲಾಟೆ ವೇಳೆ 24 ಅಡಕೆ ಗಿಡ ನಾಶಪಡಿಸಿದ ಘಟನೆ ನಡೆದಿದೆ. ಪಕ್ಕದ ಜಮೀನಿನ ಮಾಲೀಕ ಸಿ. ನಟರಾಜ್‌ನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕೊಡಗಿಬೊಮ್ಮನಹಳ್ಳಿಯಲ್ಲಿ ಕೃತ್ಯ ಎಸಗಲಾಗಿದೆ. ನಟರಾಜು ಎಂಬುವರಿಗೆ ಸೇರಿದ ಅಡಕೆ ಗಿಡಗಳನ್ನು ನಾಶ ಮಾಡಲಾಗಿದೆ.
ಇಮಾಂಪುರ ಬಳಿ ಕಲ್ಲಿನ ಕ್ವಾರಿಯಲ್ಲಿ ಯುವಕನ ಶವ ಪತ್ತೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಇಮಾಂಪುರ ಗ್ರಾಮದ ಬಳಿ ಕಲ್ಲಿನ ಕ್ವಾರಿಯಲ್ಲಿ ಯುವಕನ ಶವ ಪತ್ತೆಯಾದ ದುರ್ಘಟನೆ ನಡೆದಿದೆ. ಚಳ್ಳಕೆರೆಯ ನರಹರಿ ಬಡಾವಣೆಯ ಚೇತನ್ (26) ಸಾವನ್ನಪ್ಪಿದ್ದಾರೆ. ಕಲ್ಲಿನ ಕ್ವಾರಿಯ ನೀರಿನಲ್ಲಿ ಮುಳುಗಿ ಚೇತನ್ ಮೃತಪಟ್ಟಿರುವ ಬಗ್ಗೆ ತಿಳಿದುಬಂದಿದೆ. ಡಿಪ್ಲೊಮಾ ಓದಿದ್ದ ಚೇತನ್ಗೆ ಕೆಲಸ ಸಿಗದಿದ್ದರಿಂದ ಬೇಸರ ಉಂಟಾಗಿತ್ತು. ಬೇಸರದಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಮಾಹಿತಿ ಲಭ್ಯವಾಗಿದೆ. ಮೃತ ಯುವಕ ಚೇತನ್ ತಂದೆ ಮಹಾಂತೇಶ್ ಮಾಹಿತಿ ನೀಡಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇತರ ಅಪರಾಧ ಸುದ್ದಿಗಳು
ಉತ್ತರ ಕನ್ನಡ: ಕಾರವಾರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ವೇಳೆ ಯುವತಿ ರಕ್ಷಣೆ ಮಾಡಲಾಗಿದೆ. ಲಾಡ್ಜ್ ನಡೆಸುತ್ತಿದ್ದ ಸತೀಶ್ ರಾಣೆ ಹಾಗೂ ಮಾಲೀಕ ವರ್ಣೇಕರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಪೊಲೀಸರು ಕಳುಹಿಸಿದ್ದಾರೆ.
ಉಡುಪಿ: ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಹೆಪೆಜಾರಿನಲ್ಲಿ ವಾಹನ ತಪಾಸಣೆ ವೇಳೆ ಪೊಲೀಸರ ಮೇಲೆ ಚಾಲಕ ವಾಹನ ನುಗ್ಗಿಸಿದ ಘಟನೆ ನಡೆದಿದೆ. ಈ ವೇಳೆ, ಪೊಲೀಸರು ರಸ್ತೆಯಿಂದ ಪಕ್ಕಕ್ಕೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ. ಬೈಕ್ ಸವಾರ ಸೈಯದ್ ಜುಹಾದ್ ಎಂಬಾತನ ಬಂಧನವಾಗಿದೆ. ಕಾರು ಚಾಲಕ ಪರಾರಿಯಾಗಿದ್ದಾನೆ. ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಾರ್ಕಳ ಭಾಗದಲ್ಲಿ ಗೋವುಗಳ ಕಳ್ಳರ ಹಾವಳಿ ಹೆಚ್ಚಾದ ಹಿನ್ನೆಲೆ ತಪಾಸಣೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಬೆಂಗಳೂರು: ಅನುಮತಿ ಇಲ್ಲದೆ ಬನ್ನೇರುಘಟ್ಟದ ಸಫಾರಿ ಪ್ರದೇಶಕ್ಕೆ ಪ್ರವೇಶಿಸಿದ್ದ ಪೀಣ್ಯ ನಿವಾಸಿ ಮಂಜುನಾಥ್‌ನನ್ನು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಗೇಟ್ ಬಳಿ ಯಾರೂ ಇರಲಿಲ್ಲ ಹೀಗಾಗಿ ಕಾಡಿನೊಳಗೆ ತೆರಳಿದ್ದೆ ಎಂದಿರುವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ 12 ವರ್ಷಗಳ ಹಿಂದೆ ನಡೆದ ಬಳ್ಳಾರಿ ಮಾಜಿ ಕಾರ್ಪೊರೇಟರ್ ಪದ್ಮಾವತಿ ಕೊಲೆ ಪ್ರಕರಣ
ಇದನ್ನೂ ಓದಿ: ಬನಶಂಕರಿಯಲ್ಲಿ ವ್ಯಕ್ತಿ ಕೊಲೆ! ಮೂಟೆ ಕಟ್ಟಿ ಕೆರೆಗೆ ಶವ ಎಸೆದ ದುಷ್ಕರ್ಮಿಗಳು