ಗದಗ, ಜ.08: ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಹಿನ್ನೆಲೆ ಹುಟ್ಟಹಬ್ಬದ ಶುಭಾಶಯ ಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ (Electrocution) ಮೂವರು ಅಭಿಮಾನಿಗಳು ಮೃತಪಟ್ಟ (Death) ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಹನಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಮೃತ ಯುವಕರು. ಇನ್ನು ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ.
ಸ್ಯಾಂಡಲ್ ವುಡ್ನ ರಾಕಿ ಬಾಗ್, ನಟ ಯಶ್ ಅವರ ಹುಟ್ಟುಹಬ್ಬ ಹಿನ್ನಲೆ ನೀಲಗಿರಿ ತೋಪಿಗೆ ಬ್ಯಾನರ್ ಕಟ್ಟಿ ಮೇಲೆತ್ತುವಾಗ ವಿದ್ಯುತ್ ತಗುಲಿ ಸೂರಣಗಿ ಗ್ರಾಮದ ಮೂವರು ಯುವಕರು ಧಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಇಷ್ಟದ ನಟನ ಹುಟ್ಟುಹಬ್ಬವನ್ನು ಗ್ರಾಮದಲ್ಲಿ ಭರ್ಜರಿಯಾಗಿ ಮಾಡಬೇಕೆಂದು ತಡರಾತ್ರಿ ನಟ ಯಶ್ನ ಹುಟ್ಟುಹಬ್ಬದ ಬ್ಯಾನರ್ ಕಟ್ಟಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಇನ್ನು ಘಟನೆಯಲ್ಲಿ ಗಾಯಗೊಂಡ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ವಿದ್ಯುತ್ ತಗಲುತ್ತಿದ್ದಂತೆ ಕೂಗಾಟ ಚಿರಾಟ ಕೇಳಿ ಬಂದಿದ್ದು ಘಟನೆಯ ಲೈವ್ ವಿಡಿಯೋ ದೃಶ್ಯ ನೋಡಿದ್ರೆ ಎದೆಝಲ್ ಎನ್ನುವಂತಿದೆ.
ಇನ್ನು ನಟ ಯಶ್ ಬರ್ತ್ಡೇ ಕಟೌಟ್ ಕಟ್ಟುವಾಗ ದುರಂತ ಸಂಭವಿಸಿ ಆಸ್ಪತ್ರೆ ಸೇರಿರುವ ಗಾಯಾಳುಗಳನ್ನು ಮಾತನಾಡಿಸಲು ಶಾಸಕ ಚಂದ್ರು ಲಮಾಣಿ ಅವರು ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಹಾಗೂ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ; ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ದುರ್ವರ್ತನೆ
ಈ ಘಟನೆ ಸಂಬಂಧ ಗದಗಕ್ಕೆ ಹೋದಾಗ ಕುಟುಂಬಸ್ಥರ ಭೇಟಿಯಾಗಿ ಸಾಂತ್ವನ ಹೇಳ್ತೇನೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಘಟನೆ ಸಂಬಂಧ ಜಿಲ್ಲಾಧಿಕಾರಿ, ಎಸ್ಪಿಯಿಂದಲೇ ಮಾಹಿತಿ ಪಡೆದುಕೊಂಡಿದ್ದೇನೆ. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದರು.
ಇನ್ನು ಲಕ್ಷ್ಮೇಶ್ವರ ಆಸ್ಪತ್ರೆಗೆ ಗದಗ ಎಸ್ಪಿ ಬಿ.ಎಸ್.ನೇಮಗೌಡ ಭೇಟಿ ನೀಡಿ ಗಂಭೀರ ಗಾಯಗೊಂಡ ಮೂವರ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಒಂಬತ್ತು ಜನ ಕಟೌಟ್ ಕಟ್ಟುವಾಗ ಘಟನೆ ನಡೆದಿದೆ. ಎಲ್ಲರೂ ಅಭಿಮಾನಿಗಳೇ ಇದ್ರು. ಕಬ್ಬಿಣದ ಫ್ರೇಮ್ ಇರೋದ್ರಿಂದ ಮೇಲೆತ್ತುವಾಗ ವಿದ್ಯುತ್ ತಂತಿ ತಗುಲಿ ದುರಂತ ನಡೆದಿದೆ. ಮೂವರು ಯುವಕರು ಸಾವನ್ನಪ್ಪಿದ್ದಾರೆ. ಮೂವರಿಗೆ ಗಾಯವಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದರು.
ಇನ್ನು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ನಟ ಯಶ್ ಬರಬೇಕೆಂದು ಮೃತ ಯುವಕರ ಸ್ನೇಹಿತ ಪಟ್ಟುಹಿಡಿದಿದ್ದಾನೆ. ಯಶ್ ನಮ್ಮೂರಿಗೆ ಬರಬೇಕು, ಬಂದು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು ಎಂದು ಪ್ರಕಾಶ ಮ್ಯಾಗೇರಿ ಒತ್ತಾಯಿಸಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಕೃಷ್ಣಪ್ಪನ ಕೊಪ್ಪಲು ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನಪಟ್ಟಣ ಮೂಲದ ಅಮಾನುಲ್ಲಾ ಖಾನ್(60) ಮುನಾವರ್(50) ಮೃತ ದುರ್ದೈವಿಗಳು. ಅಪರಿಚಿತ ವಾಹನವೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ ತಹಶೀಲ್ದಾರ್ ಕಿರುಕುಳ ಆರೋಪ ಕೇಳಿ ಬಂದಿದ್ದು ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಲ್ಲಹಳ್ಳಿ ನಾಡಕಚೇರಿಯಲ್ಲಿ ನಡೆದಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ವಿಕಲಚೇತನ ಪರಮೇಶ್ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿ ಉಪ ತಹಶೀಲ್ದಾರ್ ಶಿವಕುಮಾರ್ ವಿರುದ್ದ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಿರುಕುಳ ಆರೋಪ ಮಾಡಿ ವಿಷ ಕುಡಿದು ವಿಕಲಚೇತನ ಪರಮೇಶ್ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಪರಮೇಶ್ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪರಮೇಶ್ ಮೃತಪಟ್ಟಿದ್ದಾರೆ. ವಿಕಲಚೇತನನಾಗಿದ್ದರೂ ಕನಿಕರ ತೋರಿಸದೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ನನ್ನ ಸಾವಿಗೆ ಉಪ ತಹಶೀಲ್ದಾರ್ ಶಿವಕುಮಾರ್ ಕಾರಣ ಎಂದು ಡೆತ್ ನೋಟ್ನಲ್ಲಿ ಬರೆಯಲಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:28 am, Mon, 8 January 24