ಗದಗದಲ್ಲಿ ಇನ್ನೂ ನಿಂತಿಲ್ಲ ಯೂರಿಯಾ ಕೊರತೆ ಗೋಳು: ಗೊಬ್ಬರ ಸಿಗದೇ ಕೊಳೆಯುತ್ತಿವೆ ಬೆಳೆಗಳು
ಆ ಮಕ್ಕಳದ್ದು ಶಾಲೆಗೆ ಹೋಗಿ ಪಾಠ ಕೇಳುವ ವಯಸ್ಸು. ಆದರೆ, ಶಾಲೆ ಬಿಟ್ಟು ಕೃಷಿ ಚಟುವಟಿಕೆ ಬೆನ್ನತ್ತುವ ಸ್ಥಿತಿ ಬಂದಿದೆ. ಇದಕ್ಕೆ ಕಾರಣ ಯೂರಿಯಾ ಗೊಬ್ಬರದ ಕೊರತೆ. ಒಬ್ಬರಿಗೆ ಒಂದೇ ಚೀಲ ಗೊಬ್ಬರ ಎಂಬ ಅಂಗಡಿ ಮಾಲೀಕರ ಕಾನೂನಿಗೆ ರೈತರ ಮಕ್ಕಳು ಶಾಲೆಬಿಟ್ಟು ಬೀದಿಗೆ ಬರುವಂತಾಗಿದೆ. ರೈತರು ಮಕ್ಕಳನ್ನು ಶಾಲೆಗೆ ಕಳುಹಿಸದೇ ಗೊಬ್ಬರ ಖರೀದಿಗೆ ಕರೆದುಕೊಂಡು ಬಂದಿದ್ದಾರೆ.

ಗದಗ, ಆಗಸ್ಟ್ 6: ಯೂರಿಯಾ (Urea) ಗೊಬ್ಬರಕ್ಕಾಗಿ ಶಾಲೆಬಿಟ್ಟು ರೈತರ ಮಕ್ಕಳ ಸರದಿ ಸಾಲು. ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದುಕೊಂಡು, ‘ನಾವೂ ರೈತರ ಮಕ್ಕಳು, ನಮಗೊಂದು ಯೂರಿಯಾ ಗೊಬ್ಬರ ಕೊಡಿ’ ಎಂದು ಸಾಲಿನಲ್ಲಿ ನಿಂತಿರುವ ಮಕ್ಕಳು. ನಸುಕಿನ ನಾಲ್ಕು ಗಂಟೆಗೇ ಬಂದ ಮಕ್ಕಳು, ರೈತರು, ಅನ್ನ, ನೀರು, ನಿದ್ದೆ ಇಲ್ಲದೇ ಗೊಬ್ಬರಕ್ಕಾಗಿ ಪರದಾಡುತ್ತಿರುವುದು. ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ (Gadag) ಜಿಲ್ಲೆಯಲ್ಲಿ. ಗದಗ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಗೋಳಾಟ ಇನ್ನೂ ನಿಂತಿಲ್ಲ. ಸರ್ಕಾರ ಗೊಬ್ಬರ ಕೊರತೆ ಇಲ್ಲ ಎನ್ನುತ್ತಿದೆ. ಆದರೆ, ರೈತರಿಗೆ ಮಾತ್ರ ಗೊಬ್ಬರ ಸಿಗುತ್ತಿಲ್ಲ.
ಗದಗ ಜಿಲ್ಲೆಯಲ್ಲಿ ಮಳೆ ಇನ್ನೂ ನಿಂತಿಲ್ಲ. ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಗೋವಿನ ಜೋಳ ಕೊಳೆಯುತ್ತಿದೆ. ಸಕಾಲಕ್ಕೆ ಯೂರಿಯಾ ಹಾಕದಿದ್ದರೆ ಬೆಳೆ ಸಂಪೂರ್ಣ ಹಾನಿಯಾಗಲಿದೆ. ಹೀಗಾಗಿ ಅನ್ನದಾತರು ಗೊಬ್ಬರಕ್ಕಾಗಿ ಅನ್ನ, ನೀರು, ನಿದ್ದೆ ಬಿಟ್ಟು ಹಗಲು, ರಾತ್ರಿ ಕಾಯುತ್ತಿದ್ದಾರೆ. ಆದರೆ, ರೈತರಿಗೆ ಗೊಬ್ಬರ ಸಿಗ್ತಿಲ್ಲ. ಅದರಲ್ಲೂ ಗದಗನ ಎಸ್ವಿ ಹಲವಾಗಲಿ ಆ್ಯಂಡ್ ಸನ್ಸ್ ಗೊಬ್ಬರ ಅಂಗಡಿಯಲ್ಲಿ ಒಬ್ಬರಿಗೆ ಒಂದೇ ಚೀಲ ನಿಯಮ ಮಾಡಿದ್ದಾರೆ. ಹೀಗಾಗಿ ರೈತರು ಗೊಬ್ಬರ ಖರೀದಿಗೆ ತಮ್ಮ ಮಕ್ಕಳ ಶಿಕ್ಷಣ ಬಿಡಿಸಿಕೊಂಡು ಬಂದು ಗೊಬ್ಬರಕ್ಕೆ ಕ್ಯೂ ನಿಲ್ಲಿಸಿದ್ದಾರೆ.
ಯೂರಿಯಾ ಗೊಬ್ಬರಕ್ಕಾಗಿ ಮಕ್ಕಳ ಶಿಕ್ಷಣಕ್ಕೆ ಕೊಡಲಿಪೆಟ್ಟು ಬಿದ್ದಿದೆ. 8, 9 ಹಾಗೂ SSLC ಮಕ್ಕಳು ಶಾಲೆ ಬಿಟ್ಟು ಸರದಿಯಲ್ಲಿ ನಿಂತಿದ್ದಾರೆ. ರೈತರ ಮಕ್ಕಳು ಶಿಕ್ಷಣ ಬಿಟ್ಟು ಬೀದಿಗೆ ಬಂದಿದ್ದು, ವ್ಯಾಪಕ ಅಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕರ್ನಾಟಕದಿಂದ ಅಕ್ರಮವಾಗಿ 15 ಟನ್ ಯೂರಿಯಾ ಕೇರಳಕ್ಕೆ ಸಾಗಾಟ!
ಗೊಬ್ಬರ ಸಾಕಷ್ಟು ಸ್ಟಾಕ್ ಇದ್ದರೂ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ನಗರದಲ್ಲೇ ಗೊಬ್ಬರಕ್ಕಾಗಿ ಇಷ್ಟೊಂದು ರಾದ್ಧಾಂತ ನಡೆದರೂ ಜಿಲ್ಲಾಡಳಿತ, ಕೃಷಿ ಇಲಾಖೆ ಕ್ಯಾರೇ ಅನ್ನುತ್ತಿಲ್ಲ. ರೈತರ ಮಕ್ಕಳು ಶಿಕ್ಷಣ ಬಿಟ್ಟು ಗೊಬ್ಬರಕ್ಕಾಗಿ ಕಾಯುತ್ತಿರುವ ದೃಶ್ಯಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.







