ಅವರಿಬ್ಬರೂ ಎರಡನೆಯ ಮದುವೆಯಾಗಿದ್ದರು: ಆದರೆ ಗೃಹಿಣಿ ಮಲಗಿದ್ದಲ್ಲೇ ಉಸಿರು ಚೆಲ್ಲಿದರು, ಪತಿಯ ಬಗ್ಗೆ ಎದ್ದಿದೆ ಅನುಮಾನ
ಉಮೇಶ ಹಿರೇಮಠ-ಸುನಿತಾ ಹಿರೇಮಠ ತಮ್ಮ ಜೀವನದಲ್ಲಿ 2ನೆಯ ಇನಿಂಗ್ಸ್ ಆರಂಭಿಸಿದ್ದರು. ಉಮೇಶ-ಸುನೀತಾ ಇಬ್ಬರೂ ಇದಕ್ಕೂ ಮುನ್ನ ಬೇರೆ ಬೇರೆ ಮದುವೆಯಾಗಿದ್ದವರೇ. ಆದರೆ ಮೊನ್ನೆ ಜನವರಿ 7ರಂದು ಮನೆಯಲ್ಲಿ ಮಲಗಿದ್ದಲ್ಲೇ ಉಸಿರು ಚೆಲ್ಲಿದ್ದಾರೆ ಸುನೀತಾ.
ಆ ಜೋಡಿ ಹಿಂದಿನ ಕಹಿ ಘಟನೆ ಮರೆತು ಹೊಸ ಜೀವನಕ್ಕೆ ಕಾಲಿಟ್ಟಿದ್ರು. ಇನ್ನಾದ್ರೂ ಸುಂದರ, ಸುಖ ಸಂಸಾರ ನಡೆಸುವ ಹತ್ತಾರು ಕನಸು ಕಂಡಿದ್ರು. ಆದ್ರೆ, ಆತ (Husband) ಮಾತ್ರ ತನ್ನ ಹಳೇ ಚಾಳಿ ಬಿಟ್ಟಿರಲಿಲ್ಲ. ಮದುವೆಯಾದ ಕೆಲವೇ ತಿಂಗಳ ಕಾಲ ಸುಖಸಂಸಾರ ನಡೆಸಿದ್ದ ಆ ಜೋಡಿಯ ಜೀವನದಲ್ಲಿ ಆ ಮೇಲೆ ನಡೆದಿದ್ದು ಮಾತ್ರ ಅಲ್ಲೋಲಕಲ್ಲೋಲ. ಹೆಂಡತಿಗೆ ನಿತ್ಯವೂ ಚಿತ್ರಹಿಂಸೆ ನೀಡ್ತಾಯಿದ್ದನಂತೆ. ಆದ್ರೆ ಆ ಗೃಹಿಣಿ ಮಲಗಿದ್ದಲ್ಲೇ ಉಸಿರು ನಿಲ್ಲಿಸಿದ್ದು, ಒಂದು ವಾರ ಕಳೆದ್ರೂ ಗೃಹಿಣಿ ಸಾವಿನ ರಹಸ್ಯ ಹೊರ ಬಂದಿರಲಿಲ್ಲ. ಅಷ್ಟಕ್ಕೂ ಮಹಿಳೆ ಸಾವನ್ನಪ್ಪಿದ್ದಾದ್ರೂ ಹೇಗೆ? ನೋಡಿ ಈ ಸ್ಟೋರಿ. ಮಲಗಿದ್ದಲ್ಲೇ ಉಸಿರು ಚೆಲ್ಲಿದ್ದ ಗೃಹಿಣಿ (Wife). ಗೃಹಿಣಿಯ ಸಾವಿನ ಸುತ್ತ (Death) ಅನುಮಾನಗಳ ಹುತ್ತ…! ಸಾವನ್ನಪ್ಪಿ ಒಂದು ವಾರ ಕಳೆದ್ರೂ ಕಾರಣ ಇನ್ನೂ ನಿಗೂಢವಿತ್ತು! ಸಾವಿನ ಸತ್ಯ ಭೇದಿಸಲು ಎಫ್ಎಸ್ಎಲ್ ವರದಿ ಮೊರೆ ಹೋದ ಪೊಲೀಸ್ ಅಧಿಕಾರಿಗಳು…! ಇದು ಸಹಜ ಸಾವಲ್ಲ ಕೊಲೆ ಅಂತ ಕುಟುಂಬಸ್ಥರು ಆರೋಪ…!
ಅಂದು ಜನವರಿ 7ರ ಬೆಳಗ್ಗೆ ಆ ಊರಿನಲ್ಲಿ ಮಹಿಳೆಯೊಬ್ಬರ ಸಾವು ಭಾರಿ ಸದ್ದು ಮಾಡಿತ್ತು. ಇದು ಕೊಲೆಯೋ.. ಸಹಜ ಸಾವೋ ಅನ್ನೋ ಗುಸುಗುಸು ನಡೆದಿತ್ತು. ಆದ್ರೆ, ಮೃತ ಗೃಹಿಣಿ ಕುಟುಂಬಸ್ಥರು ಮಾತ್ರ ಇದು ಸಹಜ ಸಾವಲ್ಲ.. ಕೊಲೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಹೌದು ಈ ಘಟನೆ ನಡೆದಿದ್ದು ಗದಗ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ವಿರುಪಾಪೂರ ಗ್ರಾಮದಲ್ಲಿ.
2021 ಜನವರಿ 08 ರಂದು ಉಮೇಶ ಹಿರೇಮಠ ಹಾಗೂ ಸುನಿತಾ ಹಿರೇಮಠ ಎನ್ನುವರು ತಮ್ಮ ಜೀವನದಲ್ಲಿ ಎರಡನೆಯ ಇನಿಂಗ್ಸ್ ಆರಂಭ ಮಾಡಿದ್ದರು. ಉಮೇಶ ಹಾಗೂ ಸುನೀತಾ ಇಬ್ಬರೂ ಇದಕ್ಕೂ ಮುನ್ನ ಬೇರೆ ಬೇರೆ ಮದುವೆಯಾಗಿದ್ದವರೇ. ಆದ್ರೆ, ಇಬ್ಬರಿಗೂ ದಾಂಪತ್ಯ ಜೀವನ ಸರಿಬರಲಿಲ್ಲ ಎನ್ನುವ ಕಾರಣಕ್ಕಾಗಿ ಮೊದಲಾ ಮದುವೆಗಳು ಮುರಿದು ಬಿದ್ದಿದ್ದವು.
ನಂತ್ರ ಎರಡನೆಯ ಮದುವೆಯಾಗಿದ್ರು. ಈಗಲಾದ್ರು ಚೆನ್ನಾಗಿ ಜೀವನ ಮಾಡಬೇಕು ಎಂದು ನೂರಾರು ಕನಸು ಕಂಡಿದ್ದಳು ಸುನೀತಾ. ಆದ್ರೆ, ಉಮೇಶ ಹಿರೇಮಠ ಮಾತ್ರ ತನ್ನ ಹಳೇ ಚಾಳಿ ಮಾತ್ರ ಮುಂದುವರೆಸಿದ್ದನಂತೆ. ಕೊಪ್ಪಳ ಜಿಲ್ಲೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಉದ್ಯೋಗ ಮಾಡುತ್ತಿರುವ ಉಮೇಶ್ ಪರಸ್ತ್ರೀಯರ ವ್ಯಾಮೋಹ ಹಾಗೂ ಕಳ್ಳ ಸಂಬಂಧವನ್ನ ಇಟ್ಟುಕೊಂಡಿದ್ದನಂತೆ. ಹಾಗಂತ ಪರಸ್ತ್ರೀ ಜೊತೆ ಸಂಬಂಧ ಇಟ್ಕೊಂಡ್ರೆ ತಾಳಿ ಕಟ್ಟಿದ ಹೆಂಡತಿ ಸುಮ್ಮನೇ ಇರುತ್ತಾಳಾ ಹೇಳಿ. ಇದನ್ನೇ ಪತ್ನಿ ಪ್ರಶ್ನೆ ಮಾಡಿದ್ದಕ್ಕೆ ಕಿರಾತಕ ಉಮೇಶ್ ಅವಳನ್ನೇ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಹಿಳೆ ಸಾವನ್ನಪ್ಪಿದ ಘಟನೆ ನಡೆದು ಒಂದು ವಾರ ಕಳೆದ್ರೂ ಮಹಿಳೆ ನಿಗೂಢ ಸಾವಿನ ರಹಸ್ಯ ಮಾತ್ರ ಇನ್ನೂ ಬಯಲಾಗಿಲ್ಲ. ಪೊಲೀಸ್ರಿಗೂ ಈ ಕೇಸ್ ಗೊಂದಲಕ್ಕೆ ದೂಡಿದೆ. ವಿರಾಪಾಪೂರ ಗ್ರಾಮದ ಉಮೇಶ ಹಿರೇಮಠ ಅವ್ರ ಮನೆಯಲ್ಲಿ ಸುನೀತಾ ಮಲಗಿಕೊಂಡಾಗ, ಅನುಮಾನಸ್ಪಾದ ರೀತಿಯಲ್ಲಿ ಶವ ಪತ್ತೆಯಾಗಿದೆ. ಸುನೀತಾಳ ಮೈಮೇಲೆ ಗಾಯದ ಗುರುತುಗಳಿವೆ. ಹೀಗಾಗಿ ಕೊಲೆ ಮಾಡಲಾಗಿದೆ ಎಂಬುದು ಮೃತ ಸುನೀತಾಳ ಕುಟುಂಬ ಆರೋಪ/ವಾದವಾಗಿದೆ.
ಸುನೀತಾಳ ಮೇಲೆ ಉಮೇಶ ಹಿರೇಮಠ ಸಂಶಯ ಪಡ್ತಾ ಇದ್ದನಂತೆ. ಅವಳನ್ನು ಮನೆಯಿಂದ ಹೊರಗಡೆ ಹೋಗದೆ ನೋಡಿಕೊಳ್ತಾ ಇದ್ದನಂತೆ. ಪಕ್ಕದ ಮನೆಯ ಮಹಿಳೆಯರ ಜೊತೆಗೆ ಮಾತನಾಡಿದರೂ ಸಂಶಯ ಪಡ್ತಾಯಿದ್ದನಂತೆ ಅವನು. ಸುನಿತಾಳನ್ನು ಹೊಡಿಬಡಿ ಮಾಡಿ ಕಿರುಕುಳ ನೀಡುತ್ತಿದ್ದಾರೆ ಅಂತ ದೂರು ನೀಡಿದ್ದಾರೆ. ಹೀಗಾಗಿ ಸಾವು ಆಗಿರಬಹದು. ಸಾವಿನ ರೀತಿ ನೋಡಿದರೆ ಸಂಶಯವಿದೆ ಅಂತ ದೂರು ನೀಡಿದ್ದಾರೆ. ಮುಂಡರಗಿ ಪೊಲೀಸ್ರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಮರಣೋತ್ತರ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ರಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ಗದಗ ಎಸ್ಪಿ ಬಾಬಾಸಾಹೇಬ್ ನೇಮಗೌಡ ಹೇಳಿದ್ದಾರೆ.
ಮೊದಲ ಮದುವೆಯಲ್ಲಾದ ತಪ್ಪುಗಳನ್ನು ತಿದ್ದಿಕೊಂಡು ಜೀವನ ಮಾಡಬೇಕು ಎಂದು ಇಬ್ಬರೂ ಒಪ್ಪಿಕೊಂಡು ಎರಡನೆಯ ಮದುವೆಯಾಗಿದ್ದರು. ಆದ್ರೆ ಎರಡನೆಯ ಇನ್ನಿಂಗ್ಸ್ ನಲ್ಲಿಯೂ ಅದೇ ತಪ್ಪು ಮಾಡಿದನಾ ಉಮೇಶ ಹಿರೇಮಠ? ತನ್ನ ಪತ್ನಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನಂತೆ. ಮುಂಡರಗಿ ಪೊಲೀಸರ ತನಿಖೆಯಿಂದ ಇದು ಕೊಲೆಯೋ.. ಸಹಜ ಸಾವೋ ಅನ್ನೋ ಸತ್ಯ ಹೊರಬೇಕಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ