Ganeshotsav 2022: ಚಾಮರಾಜಪೇಟೆ ಈದ್ಗಾ ಮೈದಾನದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್
ವಿವಾದಿತ ಸ್ಥಳ ಚಾಮರಾಜಪೇಟೆ ಮೈದಾನದ ಸುತ್ತಲೂ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ರೂಟ್ ಮಾರ್ಚ್ ಕೂಡ ನಡೆಸಲಾಗಿದೆ.
ಬೆಂಗಳೂರು: ವಿವಾದಾತ್ಮಕ ಸ್ಥಳ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುತ್ತೇವೆ ಎಂದು ಹಿಂದೂ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಪಟ್ಟು ಹಿಡಿದಿದ್ದು, ಇತ್ತ ಮುಸ್ಲಿಂ ಸಂಘಟನೆಗಳು ಬಿಡುವುದಿಲ್ಲ ಎಂದು ಹೇಳಿಕೊಂಡಿದೆ. ಅಲ್ಲದೆ ಪ್ರಕರಣವು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈದಾನದ ಸುತ್ತಲೂ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.
ಮೈದಾನದ ಸುತ್ತಲೂ ಯಾವುದೇ ದುಷ್ಕೃತ್ಯಗಳು ನಡೆಯದಂತೆ ಪೊಲೀಸ್ ಸರ್ಪಗಾವಲು ಮಾಡಲಾಗಿದ್ದು, ಭದ್ರತೆಗಾಗಿ 10ಕ್ಕೂ ಹೆಚ್ಚು ಕೆಎಸ್‌ಆರ್‌ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಅಲ್ಲದೆ ಇಬ್ಬರು ಡಿಸಿಪಿ, 21 ಎಸಿಪಿ, 50 ಇನ್ಸ್‌ಪೆಕ್ಟರ್, 130 ಪಿಎಸ್‌ಐಗಳು 126 ಪಿಎಸ್‌ಐಗಳು 900 ಪೊಲೀಸ್ ಸಿಬ್ಬಂದಿಗಳನ್ನು ಹಾಗೂ 120 ಆರ್ಎಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಗಿದ್ದು, ಚಾಮರಾಜಪೇಟೆಯ ಮೈದಾನ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ಭದ್ರತೆ ವಹಿಸಲಾಗಿದೆ. ಎರಡು ಎಕರೆ ಮೈದಾನದ 4 ದಿಕ್ಕಿನಲ್ಲೂ ಬ್ಯಾರಿಕೇಡ್ ಹಾಕಿ 1 ಕಡೆ ಮಾತ್ರ ಮೈದಾನಕ್ಕೆ ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಚಾಮರಾಜಪೇಟೆ ಮೈದಾನವು ಸಾರ್ವಜನಿಕರ ಆಟದ ಮೈದಾನ ಎಂದು ಹಿಂದೂ ಸಂಘಟನೆಗಳು, ನಾಗರಿಕ ಒಕ್ಕೂಟವು ಹೇಳುತ್ತಿದ್ದರೆ, ಇತ್ತ ಮುಸ್ಲಿಂ ಸಂಘಟನೆಗಳು ಅದು ವಕ್ಫ್ ಆಸ್ತಿ, ಅದು ಈದ್ಗಾ ಮೈದಾನ ಎಂದು ಹೇಳಿಕೊಳ್ಳುತ್ತಿದೆ. ಎರಡೂ ಕಡೆಗಳ ಚಟಾಪಟಿಗೆ ಆರಂಭದಲ್ಲಿ ಎಂಟ್ರಿಕೊಟ್ಟ ಬಿಬಿಎಂಪಿ, ಮೈದಾನವು ತನ್ನ ಆಸ್ತಿ ಎಂದು ಘೋಷಿಸಿತ್ತು. ನಂತರ ಸರ್ಕಾರಕ್ಕೆ ಸೇರಿದ ಆಸ್ತಿ ಎಂದು ಹೇಳಿ ವಿವಾದದಿಂದ ಹಿಂದೆ ಸರಿದಿತ್ತು. ಈ ಬೆಳವಣಿಯ ನಂತರ ಕಂದಾಯ ಇಲಾಖೆಯ ನೇತೃತ್ವದಲ್ಲಿ ಮೊದಲ ಬಾರಿ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದಂದು ಧ್ವಜರಾರೋಹನ ನೆರವೇರಿಸಲಾಗಿದೆ.
ಇದರ ಬೆನ್ನಲ್ಲೆ ಮೈದಾನದಲ್ಲಿ ಗಣಪತಿ ಹಬ್ಬವನ್ನು ಆಚರಿಸುವ ಪ್ರಸ್ತಾಪ ಜೋರಾಗಿಯೇ ಕೇಳಿಬಂತು. ಈ ನಿಟ್ಟಿನಲ್ಲಿ ಹೈಕೋರ್ಟ್ಗೂ ಅರ್ಜಿ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಗಣೇಶೋತ್ಸವಕ್ಕೆ ಒಪ್ಪಿಗೆ ಸೂಚಿಸಿತ್ತು. ಈ ಆದೇಶವು ಸುಪ್ರೀಂಕೋರ್ಟ್ ಮೆಟ್ಟಿಲೂ ಏರಿತ್ತು. ಅದರಂತೆ ವಿಚಾರಣೆ ನಡೆಸಿದ ಕೋರ್ಟ್, ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರ ಸಂಬಂಧ ಯಥಾಸ್ಥಿತಿ ಎರಡೂ ಪಕ್ಷಗಳೂ ಕಾಯ್ದುಕೊಳ್ಳಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅಲ್ಲದೆ ಹೈಕೋರ್ಟ್ನಲ್ಲಿ ಮತ್ತೆ ಹೊಸದಾಗಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿದಂತೆ ಮಾಲೀಕತ್ವ ವಿವಾದವಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:27 am, Wed, 31 August 22