ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರು ಆಗಿದೆ. ಪ್ರಕರಣದ 18 ಆರೋಪಿಗಳಲ್ಲಿ ಎಂಟು ಆರೋಪಿಗಳಿಗೆ ಜಾಮೀನು ದೊರೆತಿದೆ. ಈ ಹಿಂದೆ ನಾಲ್ವರು ಆರೋಪಿಗಳು ಜಾಮೀನು ಪಡೆದಿದ್ದರು. ಆರೋಪಿಗಳಿಗೆ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 17: ಪತ್ರಕರ್ತೆ ಗೌರಿ ಲಂಕೇಶ್ (Gauri Lankesh) ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ (High Court) ಷರತ್ತುಬ್ಧ ಜಾಮೀನು (Bail) ಮಂಜೂರು ಮಾಡಿದೆ. ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ, ಜಾಮೀನು ಪುರಸ್ಕರಿಸಿದೆ.
ಆರೋಪಿಗಳಾದ ಹುಕ್ಕೇರಿಯ ಭರತ್ ಭರತ್ ಜಯವಂತ ಕುರಾನೆ (42), ಮಹಾರಾಷ್ಟ್ರದ ಶ್ರೀಕಾಂತ್ ಪಂಗರ್ಕರ್ (48), ಶಿಕಾರಿಪುರದ ಸುಜಿತ್ ಕುಮಾರ್ (42), ಮಹಾರಾಷ್ಟ್ರದ ಸತಾರದ ಸುಧನ್ವ ಗೊಂಧಲೇಕರ್ (43) ಜಾಮೀನು ಪಡೆದರು.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕೊಲೆಗೂ ಮುನ್ನ 3 ಆರೋಪಿಗಳು ಉತ್ತರ ಬೆಂಗಳೂರಿನಲ್ಲಿ ನೆಲೆಸಿದ್ದರು! ಸಾಕ್ಷ್ಯ ನುಡಿದ ಸ್ಥಳೀಯರು
ಈ ಎಲ್ಲ ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ವಿಚಾರಾಧೀನ ನ್ಯಾಯಾಲಯ ವಿನಾಯಿತಿ ನೀಡದ ಹೊರತು ವಿಚಾರಣೆಯ ಎಲ್ಲ ದಿನ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕು. ಆರೋಪಿಗಳು ಪ್ರಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂಥದ್ದೇ ಆರೋಪದಲ್ಲಿ ಭಾಗಿಯಾಗಬಾರದು ಎಂದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಆರೋಪಿಗಳ ವಿರುದ್ಧ 2017 ರಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳು 2018 ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ