ಉತ್ತರ ಕರ್ನಾಟಕದಲ್ಲಿ ಮುಂಗಾರು ಚುರುಕು: ಕೆರೆಕಟ್ಟೆಗಳು ಭರ್ತಿ, ವಿವಿಧೆಡೆ ಸೇತುವೆ ಮುಳುಗಡೆ
ಉತ್ತರ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು, ಕೆರೆಕಟ್ಟೆಗಳು ಭರ್ತಿಯಾಗಿವೆ. ಸೇತುವೆಗಳು ಮುಳುಗಡೆಯಾಗಿದ್ದು, ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬೆಂಗಳೂರು: ಉತ್ತರ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು, ಕೆರೆಕಟ್ಟೆಗಳು ಭರ್ತಿಯಾಗಿವೆ. ಸೇತುವೆಗಳು ಮುಳುಗಡೆಯಾಗಿದ್ದು, ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಕೆರೆ ಕೋಡಿ ಹರಿಯುತ್ತಿದ್ದು, ರಸ್ತೆ ಮೇಲೆ ನೀರು ನಿಂತಿದೆ. ಕಲಘಟಗಿಯಿಂದ ಗಂಜಿಗಟ್ಟಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಿಟ್ಟದಕೆರೆ ಕೊಡಿ ಹರಿಯುತ್ತಿದ್ದು, ಗ್ರಾಮಕ್ಕೆ ನೀರು ನುಗ್ಗಿದೆ. ಮಳೆ ಅವಾಂತರದಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಧಾರವಾಡದ ಅಳ್ನಾವರ ಪಟ್ಟಣಕ್ಕೆ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಜನತೆಗೆ ಧ್ವನಿವರ್ಧಕದ ಮೂಲಕ ಸೂಚನೆ ನೀಡಲಾಗಿದೆ. ದೇಸಾಯಿ ಚಾಳ, ಕಾಳೆ ಪ್ಲಾಟ್ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಧಾರವಾಡ ಜಿಲ್ಲೆಯ ಬೇಡ್ತಿ ಹಳ್ಳ ಉಕ್ಕಿ ಹರಿಯುತ್ತಿದೆ. ಕಲಘಟಗಿ ಬೆಲವಂತರ ಬಳಿ ಇರುವ ಕೃಷ್ಣನ ದೇವಸ್ಥಾನ ಮುಳುಗಡೆಯಾಗಿದ್ದು, ಹಳ್ಳದ ಅಕ್ಕಪಪಕ್ಕದ ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ಧಾರವಾಡ ಜಿಲ್ಲೆಯ ಅಳ್ನಾವರ ಹುಲಿಕೆರೆಯ ಇಂದಿರಾ ಕೆರೆ ತಡೆಗೋಡೆಯಲ್ಲಿ ಮಣ್ಣುಕುಸಿತದಿಂದ ಬಿರುಕು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ನೀರು ಹೊರ ಹೋಗುತ್ತಿದೆ. ತಡೆಗೋಡೆಯ ಕೆಳಭಾಗದಲ್ಲಿ ಮಣ್ಣು ಕುಸಿದಿದ್ದು, ತಳದಲ್ಲಿ ದೊಡ್ಡ ರಂಧ್ರದ ಮೂಲಕ ನೀರು ಹೊರಗೆ ಬರುತ್ತಿದೆ. ಅಳ್ನಾವರ ಪಟ್ಟಣಕ್ಕೆ ನೀರು ನುಗ್ಗುವ ಆತಂಕ ಕಾಣಿಸಿಕೊಂಡಿದೆ. ಕೆರೆಯ ನೀರು ಅಳ್ನಾವರ ಪಟ್ಟಣದಲ್ಲೇ ಹಾದುಹೋಗಿರುವ ಡವಗಿ ನಾಲಾಗೆ ಬಂದಿದೆ. ಪಟ್ಟಣದ ಕೆಲ ಪ್ರದೇಶಗಳಲ್ಲಿ ನೀರು ಆವರಿಸಿಕೊಳ್ಳುತ್ತಿದೆ.
ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದ ಸಮೀಪವಿರುವ ಬೆಣ್ಣೆಹಳ್ಳದಲ್ಲಿ ಸಿಲುಕಿದ್ದ ಕುರಿಗಾಹಿಗಳನ್ನು ತಹಶೀಲ್ದಾರ್ ನವೀನ್ ಹುಲ್ಲೂರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ, ರಕ್ಷಿಸಲಾಯಿತು.
ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಭಾಗದ ನದಿ ತೀರದ ಹಳ್ಳಿಗಳಲ್ಲಿ ಅಧಿಕಾರಿಗಳು ಡಂಗುರ ಸಾರಿಸಿದ್ದಾರೆ. ಎಲ್ಲ ಪಿಡಿಒ ಮತ್ತು ಗ್ರಾಮ ಲೆಕ್ಕಿಗರಿಗೆ ರಜೆ ತೆಗೆದುಕೊಳ್ಳಬಾರದು ಎಂದು ಸೂಚಿಸಲಾಗಿದೆ.
ಕೃಷ್ಣಾ ನದಿಗೆ ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಸುಮಾರು 3 ಲಕ್ಷ ಕ್ಯೂಸೆಕ್ನಷ್ಟು ನೀರು ಬಿಡುಗಡೆ ಮಾಡುವ ಸಾಧ್ಯತೆಯಿದೆ. ನದಿ ಪಾತ್ರಕ್ಕೆ ತೆರಳದಂತೆ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಡಾ.ಆರ್.ರಾಗಪ್ರಿಯಾ ಸೂಚನೆ ನೀಡಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದರಿಂದ ಶಹಾಪುರ ತಾಲ್ಲೂಕಿನ ಕೊಳ್ಳಾರು ಸೇತುವೆ ಜಲಾವೃತವಾಗುವ ಸಾಧ್ಯತೆಯಿದೆ. ಮುಂಜಾಗ್ರತ ಕ್ರಮವಾಗಿ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಅದೇಶ ಹೊರಡಿಸಲಾಗಿದೆ.
ಹಾವೇರಿ ಜಿಲ್ಲೆಯಲ್ಲಿಯೂ ಮಳೆ ವ್ಯಾಪಕವಾಗಿ ಸುರಿಯುತ್ತಿದ್ದು, ಹಾನಗಲ್ ತಾಲ್ಲೂಕಿನ ಅಕ್ಕಿವಳ್ಳಿ-ಹಾನಗಲ್, ಅರಳೇಶ್ವರ-ಕಾಡಶೆಟ್ಟಿಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆ ಮೇಲೆ ಭರಪೂರ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಕೆರೆಗೆ ಕೋಡಿಯಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ರಟ್ಟಿಹಳ್ಳಿ ತಾಲೂಕಿನ ಎಲಿವಾಳ ಸೇತುವೆ, ಬಡಸಂಗಾಪುರ-ಕುಡುಪಲಿ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆಯ ಅಬ್ಬರ ಮುಂದುವರಿದಿದೆ. ಹೊನ್ನಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ತುಂಬಿಕೊಂಡಿದ್ದು, ಸಂಚಾರ ಸ್ಥಗಿತಗೊಂಡಿದೆ. ಕಾರವಾರದಿಂದ ಅಂಕೋಲಾ, ಯಲ್ಲಾಪುರ, ಹುಬ್ಬಳ್ಳಿ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೆದ್ದಾರಿಯಲ್ಲಿ 1 ಕಿಮೀವರೆಗೆ ನೀರು ನಿಂತಿದೆ. ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ಹೊನ್ನಳ್ಳಿ, ಸುಂಕಸಾಳ, ರಾಮನಗುಳಿ ಸೇರಿ ಹತ್ತಾರು ಗ್ರಾಮಗಳು ಜಲಾವೃತಗೊಂಡಿವೆ. ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸಲಾಗಿದೆ.
ದೋಣಿಗಳ ಮೂಲಕ ಮೂಲಕ ಜನರನ್ನು ಸ್ಥಳೀಯರು ಸ್ಥಳಾಂತರ ಮಾಡಿದ್ದಾರೆ. ಸ್ಥಳಕ್ಕೆ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿದ್ದು, ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಘಟ್ಟದ ಮೇಲ್ಬಾಗದಲ್ಲಿ ಮಳೆ ಹೆಚ್ಚಿದ್ದರಿಂದ ಪ್ರವಾಹಸ್ಥಿತಿ ನಿರ್ಮಾಣವಾಗಿದೆ. ಯಲ್ಲಾಪುರ, ಶಿರಸಿ, ಹಳಿಯಾಳ ಭಾಗದಲ್ಲಿ ಮಳೆಯಬ್ಬರ ಮುಂದುವರಿದಿದೆ. ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಅಂಕೋಲ ತಾಲ್ಲೂಕು ಸುಂಕಸಾಳದ ನವಮಿ, ಐಲ್ಯಾಂಡ್ ಹೊಟೇಲ್‌ನಲ್ಲಿ ಸಿಲುಕಿದ್ದವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಯಿತು. ಗಂಗಾವಳಿ ನದಿ ಉಕ್ಕಿಹರಿದ ಪರಿಣಾಮ ಹೊಟೆಲ್ ದ್ವೀಪವಾಗಿತ್ತು. ಹೊಟೇಲ್‌ನಲ್ಲಿ ಮಹಿಳೆಯರು, ಮಕ್ಕಳು ಸೇರಿ 15 ಮಂದಿ ಸಿಲುಕಿದ್ದರು. ಹೋಟೆಲ್ ಕೆಳ ಅಂತಸ್ತಿನಲ್ಲಿ ನೀರು ತುಂಬಿದ್ದರಿಂದ ಆತಂಕಗೊಂಡಿದ್ದರು. ನೌಕಾನೆಲೆಯ ಹೆಲಿಕಾಪ್ಟರ್ ಮೂಲಕ ಹೊಟೆಲ್ನಲ್ಲಿದ್ದವರನ್ನು ಏರ್‌ಲಿಫ್ಟ್ ಮಾಡಲಾಯಿತು. ಗ್ರಾಹಕರು ಮತ್ತು ಸಿಬ್ಬಂದಿ ಸೇರಿ 15 ಮಂದಿಯನ್ನು ರಕ್ಷಿಸಲಾಯಿತು.
ಶಿರಸಿ, ಸಿದ್ದಾಪುರ ಭಾಗದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಮಟಾ ತಾಲ್ಲೂಕಿನಲ್ಲಿ ಅಘನಾಶಿನಿ ನದಿ ಉಕ್ಕಿ ಹರಿಯುತ್ತಿದೆ. ತಾಲೂಕಿನ ಹೆಗಡೆ, ದೀವಗಿ, ಮಿರ್ಜಾನ್ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ಶಿರಸಿಯ ದೊಡ್ನಳ್ಳಿಯ ಚೆನ್ನಾಪುರ ಕೆರೆಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಹುಸರಿ ಗ್ರಾಮದ ಗಂಗಾಧರ ತಿಮ್ಮಗೌಡ (28) ಮೃತಪಟ್ಟಿದ್ದಾರೆ. ಬೈಕ್ನಲ್ಲಿ ತೆರಳುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಗಂಗಾಧರ ಕೆರೆಗೆ ಬಿದ್ದಿದ್ದ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಡವಳೇಶ್ವರ ಗ್ರಾಮದ ಬಳಿಯ ಘಟಪ್ರಭಾ ಸೇತುವೆ ಜಲಾವೃತವಾಗಿದೆ. ಘಟಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಡವಳೇಶ್ವರ-ಮೂಡಲಗಿ ಭಾಗದ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
(Good Rains in North Karnataka People Face Distress in Dharwad Uttara Kannada Bagalakote)
ಇದನ್ನೂ ಓದಿ: Karnataka Rain: ಮಲೆನಾಡಿನಲ್ಲಿ ಮಳೆ ಅಬ್ಬರ; ಕೊಚ್ಚಿ ಹೋದ ಹೆದ್ದಾರಿ, ಗದ್ದೆಗಳಿಗೆ ನುಗ್ಗಿತು ನದಿ ನೀರು
ಇದನ್ನೂ ಓದಿ: ಭಾರಿ ಮಳೆಯಿಂದ ರಾಜ್ಯದ ಹಲವೆಡೆ ಮನೆ ಕುಸಿತ, ಚಿಕ್ಕಮಗಳೂರಿನಲ್ಲಿ ವೃದ್ಧರೊಬ್ಬರ ಸಾವು; ಸೇತುವೆಗಳು ಜಲಾವೃತ, ಸಂಪರ್ಕ ಕಡಿತ
Published On - 7:01 pm, Fri, 23 July 21