ಬೆಳಗಾವಿ, ಅಕ್ಟೋಬರ್ 23: ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ದ ಸ್ವಾತಂತ್ರ್ಯದ ಕಹಳೆ ಊದಿ ಬ್ರಿಟಿಷ್ ಅಧಿಕಾರಿ ಥ್ಯಾಕ್ರೆಯ ರುಂಡ ಚಂಡಾಡಿ ಇಂದಿಗೆ 200 ವರ್ಷಗಳ ಸಂಭ್ರಮ. ಬ್ರಿಟಿಷ್ ಕಪಿಮುಷ್ಟಿಯಿಂದ ಕಿತ್ತೂರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ವಿಜಯ ಸಾಧಿಸಿದ್ದ ಪ್ರತೀಕವಾಗಿ ಆಚರಿಸುವ ಕಿತ್ತೂರು ಉತ್ಸವಕ್ಕೆ (Kittur Utsav) ಇಂದು ಅದ್ದೂರಿ ಚಾಲನೆ ಸಿಕ್ಕಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಅದ್ದೂರಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದ್ದಾರೆ.
ಕಿತ್ತೂರು ಉತ್ಸವದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಭಾಷಣ ಮಾಡಿದ್ದು, ಈ ಬಾರಿಯೂ 5 ಕೋಟಿ ರೂ. ಕಿತ್ತೂರು ಅಭಿವೃದ್ಧಿಗೆ ನೀಡುತ್ತೇವೆ. ವಿಜಯಪುರದ ರಾಣಿ ಚೆನ್ನಮ್ಮ ಅಧ್ಯಯನ ಕೇಂದ್ರವನ್ನು ಬೆಳಗಾವಿಗೆ ಶಿಫ್ಟ್ ಮಾಡುತ್ತೇವೆ. ಚೆನ್ನಮ್ಮ ಹೆಸರಿನ ಮುಂದೆ ಕಿತ್ತೂರು ಸೇರಿಸಿ ವಿವಿ ಅಂತ ಮಾಡುತ್ತೇವೆ. ಮಾನವ ಸಂಗ್ರಹಾಲಯ ಮಾಡುವ ಠರಾವು ಮಾಡಿದ್ದಾರೆ. ಒಟ್ಟಾರೆ ಕಿತ್ತೂರು ಅಭಿವೃದ್ಧಿ ಮಾಡುವುದಾಗಿ ಸಚಿವ ಸತೀಶ್ ಭರವಸೆ ನೀಡಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಷಣ ಮಾಡಿದ್ದು, ನಿಮ್ಮೆಲ್ಲರ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಇರಲಿ. ಮಹಿಳೆಯರನ್ನ ಆರ್ಥಿಕವಾಗಿ ಸಬಲೀಕರಣಗೊಳಿಸಲು ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದ್ದೇವೆ. ಸರ್ಕಾರ ಮಹಿಳೆಯರ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದೆ ಎಂದು ಹೇಳಿದ್ದಾರೆ.
ನಿಶ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಕೇವಲ ಅಂಚೆ ಚೀಟಿ ಬಿಡುಗಡೆ ಕೊಡುಗೆ ಮಾತ್ರ ಇರಬಾರದು. ಚನ್ನಮ್ಮಳ ಬಗ್ಗೆ ಇಡೀ ರಾಷ್ಟ್ರದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪುಸ್ತಕಗಳಾಲಿ. ಆಯಾ ರಾಜ್ಯದ ಭಾಷೆಗಳಲ್ಲಿಯೇ ಪುಸ್ತಕಗಳು ಹೊರಬರಲಿ. ಅವರ ವಿಚಾರಧಾರೆಗಳು ಎಲ್ಲರೂ ತಿಳಿಯುವಂತಾಗಲಿ. ರಾಜ್ಯ ಸರ್ಕಾರದಿಂದ ಹೆಣ್ಣು ಮಕ್ಕಳ ಮೆಡಿಕಲ್ ಕಾಲೇಜನ್ನು ಕಿತ್ತೂರಿನಲ್ಲಿ ತೆರೆಯಬೇಕು. ಇವೆಲ್ಲವೂ ಸಹ ನಮ್ಮ ಬೇಡಿಕೆ ಅಲ್ಲ ಸಮಾಜದ ಬೇಡಿಯಾಗಿದೆ ಎಂದು ಸಚಿವ ಸತೀಶ್ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕಿತ್ತೂರು ಉತ್ಸವಕ್ಕೆ ಮುಹೂರ್ತ ಫಿಕ್ಸ್: ಶಾಸಕ ಬಾಬಾಸಾಹೇಬ್ ಪಾಟೀಲ್ ಘೋಷಣೆ
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಈ ಬಾರಿ ಸರ್ಕಾರ 5 ಕೋಟಿ ರೂ ಬಿಡುಗಡೆ ಮಾಡಿದೆ. ಕಿತ್ತೂರು ಕೋಟೆ ಆವರಣದಲ್ಲಿ ಹಾಕಿರುವ ಭವ್ಯ ವೇದಿಕೆಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಸಿನಿ ತಾರೆಯರು, ಗಾಯಕ, ಗಾಯಕಿಯರು ಕಾರ್ಯಕ್ರಮಗಳನ್ನು ನೀಡಲಿದ್ದಾರೆ.
ಇಂದು ಖ್ಯಾತ ರ‍್ಯಾಪರ್ ಚಂದನ್ ಶೆಟ್ಟಿ, ನಟ ದಿಗಂತ್, ಹಾಗೂ ನಟಿ ಐಂದ್ರಿತಾ ರೈ ನೇತೃತ್ವದ ತಂಡ ಜನರನ್ನು ರಂಜಿಸಿದ್ದು, ನಾಳೆ ಹಾಗೂ ನಾಡಿದ್ದು ಖ್ಯಾತ ಗಾಯಕರಾದ ಅರ್ಮಾನ್ ಮಲ್ಲಿಕ್ ಹಾಗೂ ವಿಜಯ್ ಪ್ರಕಾಶ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಲಿವೆ.
ಕಿತ್ತೂರು ಉತ್ಸವದಲ್ಲಿ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ ಗ್ರಾಮೀಣ ಕ್ರಿಡೆಗಳನ್ನೂ ಸಹ ಆಯೋಜನೆ ಮಾಡಲಾಗಿದೆ. ಈ ಬಾರಿಯೂ ಸಹ ಅಂತರಾಷ್ಟ್ರೀಯ ಮಹಿಳಾ ಹಾಗೂ ಪುರುಷ ಕುಸ್ತಿಯನ್ನು ಆಯೋಜನೆ ಜಲಕ್ರೀಡೆ ಸೇರಿದಂತೆ ಆಟೋಟ ಹಗ್ಗಜಗ್ಗಾಟದಂತ ಗಂಡು ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ, ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತು: ಸ್ಪೀಕರ್
ಮೊದಲು ಕಾಂಗ್ರೆಸ್ ನಾಯಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಹಾಗೂ ಮಹಾಂತೇಶ್ ಕೌಜಲಗಿ ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಿದರೆ, ಬಳಿಕ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಶಾಸಕ ಅನೀಲ್ ಬೆನಕೆ ಮಹಾಂತೇಶ ದೊಡಗೌಡರ್ ಸೇರಿ ಮತ್ತೊಮ್ಮೆ ಪ್ರತ್ಯೇಕವಾಗಿ ಮಾಲಾರ್ಪಣೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.