ಬೆಂಗಳೂರು: ಅನ್ನದಾತರ ಕಷ್ಟ ಒಂದಾ ಎರಡಾ.. ಎಷ್ಟೋ ಸಲ ಕೈಗೆ ಬಂದ ಬೆಳೆ ಕೊಯ್ಲು ಮಾಡೋದ್ರೊಳಗೆ ಸಂಪೂರ್ಣ ಭೂಮಿ ಪಾಲಾಗಿರುತ್ತೆ. ಇನ್ನು ಕೆಲವು ಸಲ ಬೆಲೆ ಇಲ್ಲದೆ ರೈತರೇ ಬೆಳೆಯನ್ನ ನಾಶ ಮಾಡ್ತಾರೆ. ಆದ್ರೀಗ ಕೊರೊನಾ ಎಳೆದ ಬರೆ ವಾಸಿಯಾಗೋ ಮೊದ್ಲೇ ರಾಜ್ಯದ ರೈತರಿಗೆ ಮಿಡತೆ ಹಾವಳಿಯ ಭೀತಿ ಶುರುವಾಗಿದೆ.
ಕೊರೊನಾ ಭಯ ಹೆಜ್ಜೆ ಹೆಜ್ಜೆಗೂ ಕಾಡ್ತಿದೆ. ಪ್ರತಿಯೊಬ್ಬರಿಗೂ ಆತಂಕವನ್ನ ಹೆಚ್ಚಿಸಿದೆ. ಮಹಾಮಾರಿಯ ಸಾವಿನ ಸುಳಿಯಿಂದ ತಪ್ಪಿಸಿಕೊಳ್ಳೋದೇ ಸಾಹಸದ ವಿಷಯವಾಗಿದೆ. ಇದ್ರ ನಡ್ವೆಯೇ ರಾಜ್ಯದ ಜನರಿಗೆ ಹೊಸದೊಂದು ಟೆನ್ಷನ್ ಶುರುವಾಗಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ! ಕೊರೊನಾ ಕಾಟದ ನಡ್ವೆ ಉತ್ತರಭಾರತದಲ್ಲಿ ಮಿಡತೆ ಹಾವಳಿ ಹೆಚ್ಚಾಗಿರೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೀಗ ಮಹಾರಾಷ್ಟ್ರದ ಮೂಲಕ ರಾಜ್ಯಕ್ಕೆ ಮಿಡತೆ ಹಾವಳಿ ಕಾಲಿಡೋ ಆತಂಕ ಶುರುವಾಗಿದೆ. ಉತ್ತರ ಭಾರತದಲ್ಲಿ ಬೆಳೆಗಳನ್ನ ನಾಶ ಮಾಡಿ ಮಹಾರಾಷ್ಟ್ರದೆಡೆಗೆ ಧಾವಿಸಿರೋ ಮಿಡತೆಗಳು ರಾಜ್ಯಕ್ಕೂ ಬರೋ ಸಾಧ್ಯತೆಗಳಿವೆ. ಹೀಗಾಗಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಬೀದರ್, ಕಲಬುರಗಿ, ಬೆಳಗಾವಿಯಲ್ಲೂ ಮಿಡತೆ ಹಾವಳಿಯ ಭಯ ಆವರಿಸಿದೆ.
ಕೋಲಾರ ಜಿಲ್ಲೆಗೆ ಕಾಲಿಟ್ಟ ಮಿಡತೆಗಳ ದಂಡು!
ಹೌದು, ಕೋಲಾರ ಜಿಲ್ಲೆಗೆ ಮಿಡತೆಗಳು ಕಾಲಿಟ್ಟಿದ್ದು, ರೈತರ ಆತಂಕ ಹೆಚ್ಚಾಗಿದೆ. ಕೋಲಾರ ತಾಲೂಕಿನ ದಿಂಬ ಹಾಗೂ ದೊಡ್ಡಹಸಾಳ ಬಳಿ ಮಿಡತೆಗಳು ಗುಂಪು ಗುಂಪಾಗಿ ಕಾಣಿಸಿಕೊಂಡಿವೆ. ಯಕ್ಕದ ಗಿಡಗಳನ್ನ ತಿಂದು ಹಾಕಿರೋ ಮಿಡತೆಗಳ ಬಗ್ಗೆ ಗ್ರಾಮಸ್ಥರು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ. ಬಳಿಕ ಇವೆಲ್ಲಾ ಸಾಮಾನ್ಯ ಮಿಡತೆಗಳು ಕೇವಲ ಯಕ್ಕದ ಗಿಡಗಳನ್ನ ತಿನ್ನುತ್ತವೆ. ರೈತರು ಆತಂಕಪಡೋ ಅಗತ್ಯವಿಲ್ಲ ಅಂದ್ರು. ನಂತ್ರ ಮಿಡತೆಗಳನ್ನ ಸ್ಥಳೀಯರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ರು.
ಇನ್ನು ಕಲಬುರಗಿ, ಬೀದರ್ ಹಾಗೂ ಬೆಳಗಾವಿಗೂ ಮಿಡತೆ ಹಾವಳಿ ಭೀತಿ ಶುರುವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಸಭೆ ನಡೆಸಿ, ರೈತರಿಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಮಾಹಿತಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಮಿಡತೆ ಬಂದ್ರೆ ಏನ್ ಮಾಡ್ಬೇಕು.. ಯಾವೆಲ್ಲಾ ಔಷಧಿ ಸಿಂಪಡಣೆ ಮಾಡ್ಬೇಕು ಅಂತ ವಿವರಿಸಿದ್ದಾರೆ.
ಇಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಮೀಟಿಂಗ್: ಇನ್ನು, ಉತ್ತರ ಭಾರತದ ರಾಜ್ಯಗಳಲ್ಲಿ ಮಿಡತೆ ಹಾವಳಿ ಹೆಚ್ಚಾಗಿರುವ ಕಾರಣ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಇಂದು ಬೆಂಗಳೂರಿನಲ್ಲಿ ಮಿಡತೆ ಹಾವಳಿ ತಡೆ ಸಂಬಂಧ ಸಭೆ ನಡೆಸಲಿದ್ದಾರೆ.
ಒಟ್ನಲ್ಲಿ ಕೊರೊನಾ ಸಂಕಷ್ಟದ ಕಾಲದಲ್ಲಿ ರೈತರ ಬದುಕು ಈಗಾಗ್ಲೇ ಮೂರಾಬಟ್ಟೆಯಾಗಿದೆ. ಇದ್ರ ನಡ್ವೆ ಮಿಡತೆ ಹಾವಳಿ ಭೀತಿ ಕಾಡ್ತಿರೋದು ಎಲ್ಲರನ್ನ ಚಿಂತೆಗೀಡು ಮಾಡಿದೆ.