ಗೃಹಲಕ್ಷ್ಮಿ, ಅನ್ನಭಾಗ್ಯ ಹಣವೇನು ತಿಂಗಳ ಸಂಬಳ ಅಲ್ವಲ್ಲಾ: ಸಚಿವ ಜಾರ್ಜ್ ಉಡಾಫೆ ಉತ್ತರ

|

Updated on: Feb 19, 2025 | 6:59 AM

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಬಗ್ಗೆ ಸಚಿವ ಕೆಜೆ ಜಾರ್ಜ್ ಉಡಾಫೆಯ ಮಾತುಗಳನ್ನಾಡಿರುವುದು ವಿರೋಧಕ್ಕೆ ಗುರಿಯಾಗಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿ, ಅದೇನು ತಿಂಗಳ ಸಂಬಳ ಅಲ್ಲವಲ್ಲಾ ಎಂದು ಅವರು ಹೇಳಿರುವುದು ವಿವಾದಕ್ಕೆ ಗುರಿಯಾಗಿದೆ.

ಬೆಂಗಳೂರು, ಫೆಬ್ರವರಿ 19: ಕಳೆದ ಎರಡ್ಮೂರು ತಿಂಗಳುಗಳಿಂದ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿಲ್ಲ. ಇದಕ್ಕೆ ರಾಜ್ಯದಾದ್ಯಂತ ಮಹಿಳೆಯರು, ಫಲಾನುಭವಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ, ‘ಅದೇನು ತಿಂಗಳ ಸಂಬಳ ಅಲ್ವಲ್ಲಾ’ ಎಂದು ಸಚಿವ ಕೆಜೆ ಜಾರ್ಜ್ ಉಡಾಫೆ ಉತ್ತರ ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ದುಡ್ಡು ಬಂದಿಲ್ಲ ಎಂದು ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸಚಿವರು ಮಾತ್ರ ಉಡಾಫೆ ಉತ್ತರ ಕೊಟ್ಟಿದ್ದಾರೆ. ಪ್ರತಿ ತಿಂಗಳೂ ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ವರ್ಗಾವಣೆ ಮಾಡುತ್ತೇವೆ ಎಂದು ಚುನಾವಣೆಯ ವೇಳೆ ಮಾತು ಕೊಟ್ಟು ಅಧಿಕ್ಕಾರಕ್ಕೇರಿದ್ದರು. ಆದರೆ ಈಗ, ಗೃಹಲಕ್ಷ್ಮಿ ಹಣ ತಿಂಗಳ ತಿಂಗಳ ಸಂಬಳ ಅಲ್ವಲ್ಲಾ ಎಂದು ಜಾರ್ಜ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

‘ಗೃಹಲಕ್ಷ್ಮಿ ಹಣ ತಿಂಗಳು ಬರುವ ಸಂಬಳ ಅಲ್ಲವೇ ಅಲ್ಲ. ಆದರೆ, ಎರಡ್ಮೂರು ತಿಂಗಳಿಗೊಮ್ಮೆ, ನಮಗೆ ಇಷ್ಟ ಬಂದಾಗ ಕೊಡುತ್ತೇವೆ ಎಂದು ಹೇಳಿದ್ದರೆ ಮನೆ ಯಜಮಾನಿಯರು ಯಾರೂ ನಿಮ್ಮನ್ನ ಕೇಳುತ್ತಲೇ ಇರಲಿಲ್ಲ’ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹಲಕ್ಷ್ಮಿ ದುಡ್ಡಿಂದ ಫ್ರಿಡ್ಜ್ ತೆಗೆದುಕೊಂಡರು, ಬೈಕ್ ತೆಗೆದುಕೊಂಡರು, ಹೋಳಿಗೆ ಊಟ ಹಾಕಿಸಿದರು ಎಂದು ರಾಜ್ಯ ಸರ್ಕಾರ ಬೆನ್ನು ತಟ್ಟಿಕೊಂಡಿತ್ತು. ಆದರೆ ಈಗ 3 ತಿಂಗಳಿಂದ ಸರಿಯಾಗಿ ಹಣ ಹಾಕದೇ ಸತಾಯಿಸುತ್ತಿದ್ದಾರೆ. ನಮಗೆ ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಮಹಿಳೆಯರು ಆಗ್ರಹಿಸಿದ್ದಾರೆ.

ಮಹಿಳೆಯರ ಆಕ್ರೋಶದ ನುಡಿಗಳ ವಿಡಿಯೋ ಇಲ್ಲಿದೆ ನೋಡಿ


ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯದ ಹಣ ಬಾಕಿ ಉಳಿಸಿಕೊಂಡಿರುವುದು ವಿಪಕ್ಷಗಳಿಗೆ ಅಸ್ತ್ರವಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದೀರಿ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕೂಲಿ ನಾಲಿ ಮಾಡಿಕೊಂಡಿದ್ದ ಜನರಿಗೆ ಸಿದ್ದರಾಮಯ್ಯ ಸರ್ಕಾರ ಮೋಸ ಮಾಡಿದೆ: ಚಿತ್ರದುರ್ಗದ ಮಹಿಳೆಯರು

ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಶೀಘ್ರದಲ್ಲೇ ಹಣ ಜಮೆ ಆಗುತ್ತದೆ ಎಂದಿದ್ದಾರೆ. ವಿಧಾನಸಭೆ ಚುನಾವಣೆಗೂ ಮೊದಲೇ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗ್ಯಾರಂಟಿಗಳ ಬಗ್ಗೆ ಅಬ್ಬರದ ಪ್ರಚಾರ ಮಾಡಿದ್ದರು. ಮನೆ ಯಜಮಾನಿಯರ ಖಾತೆಗೆ ತಿಂಗಳಿಗೆ ಎರಡು ಸಾವಿರ ರೂ. ಟಕ್ ಅಂತಾ ವರ್ಗಾವಣೆಯಾಗಲಿದ್ದಾರೆ ಎಂದಿದ್ದರು. ಆದರೆ ಈಗ ಮೂರ್ನಾಲ್ಕು ತಿಂಗಳು ಕಳೆದರೂ 2 ಸಾವಿರ ಬಾರದಿರುವುದು ಮಹಿಳೆಯರು ಕಣ್ಣು ಕೆಂಪಾಗಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ