ಉಡುಪಿ, ಜೂನ್ 08: ಬಡತನ ನಿರ್ಮೂಲನೆಗೆ ಗ್ಯಾರಂಟಿ ಯೋಜನೆ (guarantee scheme) ಜಾರಿ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಗ್ಯಾರಂಟಿ ರಾಜಕೀಯ ಉದ್ದೇಶಕ್ಕಲ್ಲ ಎಂದು ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ (G. Parameshwara) ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರಿಗೆ ಗ್ಯಾರಂಟಿ ತಲುಪಿದೆ, ಎಲ್ಲಾ ಯೋಜನೆ ಅನುಷ್ಠಾನ ಆಗಿದೆ. ಪಟ್ಟಣ ಪ್ರದೇಶದಲ್ಲಿ ಗ್ಯಾರಂಟಿ ಅವಶ್ಯಕತೆ ಇದೆಯೋ ಇಲ್ವೋ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ನಾನು ಈ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಬಹಳಷ್ಟು ಕಡೆ ಸೋತಿದ್ದೇವೆ. ಸೋಲಿನ ಆತ್ಮಾವಲೋಕನ ಮಾಡಬೇಕಿದೆ. ಏಕೆ ಸೋತಿದ್ದೇವೆ, ಎಲ್ಲಿ ಎಡವಿದ್ದೇವೆ ಎಂಬ ಚರ್ಚೆ ಆಗಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸುವುದೇ ಒಳ್ಳೆಯದು: ಜನರಿಗೆ ಇಷ್ಟ ಆಗಿಲ್ಲ ಎಂದ ಎಂ.ಲಕ್ಷ್ಮಣ್
ನಿನ್ನೆಯ ಸಭೆಯಲ್ಲಿ ಸಚಿವರಿಗೆ ರಾಹುಲ್ ಗಾಂಧಿ ತರಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಏಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಣೆ ಮಾಡಿ ಅಂತಾ ತಿಳಿಸಿದ್ದಾರೆ. ನನ್ನನ್ನೂ ಸೇರಿ ಯಾವ ಜಿಲ್ಲೆಗಳಲ್ಲಿ ಹಿನ್ನಡೆಯಾಗಿದೆ ಅಂತಾ ವಿಶ್ಲೇಷಣೆ ಕೇಳಿದ್ದಾರೆ. ರಾಹುಲ್ ಕೊಟ್ಟ ಸೂಚನೆಗೆ ಬದ್ಧರಾಗಿದ್ದೇವೆ, ಹಾಗೆ ನಡೆದುಕೊಳ್ತೇವೆ ಎಂದರು.
ಮಂಗಳೂರಿನಲ್ಲಿ ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜ ಪ್ರತಿಕ್ರಿಯಿಸಿದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆ ಇಲ್ಲ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಗ್ಯಾರಂಟಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ಥಗಿತವಾಗುತ್ತಾ ಗ್ಯಾರಂಟಿ ಯೋಜನೆಗಳು? ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಮತ್ತೆ ಶಾಕಿಂಗ್ ಹೇಳಿಕೆ
ಗ್ಯಾರಂಟಿ ಯೋಜನೆ ವಿಧಾನಸಭೆ ಚುನಾವಣೆಯಲ್ಲಿ ಜನರಿಗೆ ಕೊಟ್ಟ ವಾಗ್ದಾನ. ಯಾರಿಗೆ ಸಿಕ್ಕಿಲ್ಲವೋ ಅವರಿಗೆ ಹುಡುಕಿ ಕೊಡಲು ಗ್ಯಾರಂಟಿ ಸಮಿತಿ ರಚನೆ ಮಾಡಿದ್ದೇವೆ. ಮುಂದೆ ಗ್ಯಾರಂಟಿ ಆಫೀಸ್ ಸಹ ಓಪನ್ ಆಗುತ್ತೆ. ಅರ್ಹರು ದಕ್ಷಿಣ ಕನ್ನಡ ಜಿ.ಪಂ ಕಚೇರಿಯ ಗ್ಯಾರಂಟಿ ಆಫೀಸ್‌ಗೆ ಬರಬಹುದು. ಮನವಿ ಸಲ್ಲಿಸಿದರೆ ತಕ್ಷಣ ಸಮಸ್ಯೆ ಪರಿಹಾರ ಮಾಡಿಕೊಡಲಾಗುತ್ತೆ ಎಂದಿದ್ದಾರೆ.
ಬಿಜೆಪಿಯವರಿಗೆ ಹೊಟ್ಟೆ ಕಿಚ್ಚು, ಹೀಗಾಗಿ ಅಪಪ್ರಚಾರ ಮಾಡ್ತಿದ್ದಾರೆ. ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆಂಬ ಅಪಪ್ರಚಾರ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.