ಸ್ಥಗಿತವಾಗುತ್ತಾ ಗ್ಯಾರಂಟಿ ಯೋಜನೆಗಳು? ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಮತ್ತೆ ಶಾಕಿಂಗ್ ಹೇಳಿಕೆ

ಗ್ಯಾರೆಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಲೋಕಸಭೆ ಚುನಾವಣೆಗೆ ಮುನ್ನ ಹೇಳಿಕೆ ನೀಡಿದ್ದ ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಇದೀಗ ಮತ್ತೆ ಅಂಥದ್ದೇ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹಾಗಾದರೆ ಅವರು ಹೇಳಿದ್ದೇನು? ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆಯಾ? ತಿಳಿಯಲು ಮುಂದೆ ಓದಿ.

ಸ್ಥಗಿತವಾಗುತ್ತಾ ಗ್ಯಾರಂಟಿ ಯೋಜನೆಗಳು? ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಮತ್ತೆ ಶಾಕಿಂಗ್ ಹೇಳಿಕೆ
ಕಾಂಗ್ರೆಸ್ ಶಾಸಕ ಬಾಲಕೃಷ್ಣ
Follow us
| Updated By: ಗಣಪತಿ ಶರ್ಮ

Updated on: Jun 08, 2024 | 3:09 PM

ರಾಮನಗರ, ಜೂನ್ 8: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ಬೆಂಬಲಿಸದಿದ್ದರೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ಈ ಹಿಂದೆ ಮಾಗಡಿ (Magadi) ಕಾಂಗ್ರೆಸ್ ಶಾಸಕ ಹೆಚ್​ಸಿ ಬಾಲಕೃಷ್ಣ (HC Balakrishna) ಹೇಳಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ನಂತರ ಆ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ. ಐದು ವರ್ಷಗಳ ಕಾಲ ಮುಂದುವರಿಯಲಿದೆ ಎಂದು ತಿಳಿಸಿದ್ದರು. ಆದರೆ ಇದೀಗ ಬಾಲಕೃಷ್ಣ ಮತ್ತೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನಿಮ್ಮ ಗ್ಯಾರಂಟಿಗಳ ಅಗತ್ಯವಿಲ್ಲ ಎಂದು ಜನ ತೀರ್ಮಾನ ಮಾಡಿದ್ದಾರೆ ಎಂದು ಅವರು ಹೇಳಿರುವುದು ಅನುಮಾನ ಸೃಷ್ಟಿಸಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಸೋಲಿನ ವಿಚಾರವಾಗಿ ಮಾತನಾಡಿದ ಅವರು, ಹೃದಯವಂತ, ಹೊಸ ಮುಖ ಅಂತ ಜನ ಬಿಜೆಪಿಗೆ ಓಟ್ ನೀಡಿದ್ದಾರೆ. ರಾಜಕೀಯದಲ್ಲಿ ಇಂಥ ಸೋಲಿನ ಸಾಕಷ್ಟು ಉದಾಹರಣೆಗಳು ಇವೆ. ಇಂದಿರಾಗಾಂಧಿ, ವಾಜಪೇಯಿಯಂಥವರೇ ಸೋತಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೇ ಎರಡು ಮೂರು ಸುತ್ತುಗಳಲ್ಲಿ ಹಿನ್ನಡೆಯಾಗಿತ್ತು. ಕಳೆದ ಬಾರಿ 5 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಮೋದಿ ಈ ಬಾರಿ 1.5 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಜನ ಯಾವ ಸಂದರ್ಭದಲ್ಲಿ ಯಾವ ತರ ತೀರ್ಪು ನೀಡ್ತಾರೆ ಗೊತ್ತಾಗೊಲ್ಲ. ಜನರ ತೀರ್ಪಿಗೆ ತಲೆಬಾಗುತ್ತೇವೆ ಎಂದರು.

ಗ್ಯಾರಂಟಿ ಯೋಜನೆಗಳು ಕೈ ಹಿಡಿದಿಲ್ಲ: ಬಾಲಕೃಷ್ಣ

ಡಿಕೆ ಸುರೇಶ್ ನಮ್ಮನ್ನು ಗೆಲ್ಲಿಸುವುದರಲ್ಲಿ ಸಫಲರಾಗಿದ್ದರು. ಆದರೆ, ನಾವು ಅವರನ್ನು ಗೆಲ್ಲಿಸುವುದರಲ್ಲಿ ವಿಫಲ ಆಗಿದ್ದೇವೆ. ನಮ್ಮ ಸೋಲಿಗೆ ಅನೇಕ ಕಾರಣಗಳಿವೆ. ಗ್ಯಾರಂಟಿ ಯೋಜನೆಗಳು ಕೈ ಹಿಡಿದಿಲ್ಲ ಎಂಬ ಮನವರಿಕೆ ಆಗಿದೆ. ಬೇರೆ ಯಾವಪಟ್ಟು ಹಾಕಬೇಕಿತ್ತು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡ್ತೇವೆ. ನಿಮ್ಮ ಗ್ಯಾರಂಟಿ ಅವಶ್ಯಕತೆ ಇಲ್ಲ ಅಂತ ಜನ ತೀರ್ಮಾನ ಮಾಡಿದ್ದಾರೆ. ಇದನ್ನ ಮುಂದುವರೆಸಬೇಕೇ ಬೇಡವೇ ಎಂಬುದನ್ನು ತೀರ್ಮಾನ ಮಾಡುವಷ್ಟು ದೊಡ್ಡವ ನಾನಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಂತ್ರಿಮಂಡಲ ಎಲ್ಲಾ ಇದೆ. ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಬಾಲಕೃಷ್ಣ ಹೇಳಿದರು.

ತಾಯಂದಿರು ಕೈಹಿಡಿದಿಲ್ಲ: ಇಕ್ಬಾಲ್ ಹುಸೇನ್

ಗ್ಯಾರಂಟಿ ಕೊಟ್ಟರೂ ನಮ್ಮ ತಾಯಂದಿರು ಕೈ ಹಿಡಿದಿಲ್ಲ. ನಾವು ಈ ಸೋಲು ನಿರೀಕ್ಷೆ ಮಾಡಿರಲಿಲ್ಲ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು. ಕೆಲವೇ ತಿಂಗಳಲ್ಲಿ ಮತದಾರರಿಗೆ ಅರ್ಥ ಆಗಲಿದೆ. ಕನ್ನಡಿಗರ ಪರವಾಗಿ ಧ್ವನಿ ಎತ್ತಿದ್ದು ಡಿಕೆ ಸುರೇಶ್ ಮಾತ್ರ. ಸದನದಲ್ಲಿಯೂ ಕನ್ನಡಿಗರ ಹಕ್ಕಿನ ಬಗ್ಗೆ ಮಾತನಾಡಿದ್ದರು ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹೆಚ್​ಸಿ ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು, ಏನಿದು ಪ್ರಕರಣ?

ಸೋಲಿಗೆ ಬೇರೆ ಏನು ಕಾರಣ ಎಂಬುದನ್ನು ನಾವು ಆತ್ಮವಲೋಕನ ಮಾಡಿಕೊಳ್ತೇವೆ ಎಂದು ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಅವರು ಹೇಳಿದರು.

ರಾಜ್ಯದ ಮತ್ತಷ್ಟುವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ