ಬೆಂಗಳೂರು (ಮೇ.1): ಹಾಸನ (Hassan) ಅಶ್ಲೀಲ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ(Prajwal Revanna )ಮತದಾನದ ದಿನವೇ ಭಾರತ ಬಿಟ್ಟು ವಿದೇಶಕ್ಕೆ ತೆರಳಿದ್ದಾರೆ. ಏಪ್ರಿಲ್ 26 ರಂದು ಮತದಾನ ಮುಗಿಯುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ದಿಧೀರ್ ಹಾಸನದಿಂದ ಬೆಂಗಳೂರಿಗೆ (Bengaluru) ಆಗಮಿಸಿ ಇಲ್ಲಿಂದ ನೇರವಾಗಿ ಜರ್ಮನಿಗೆ ಹಾರಿದ್ದಾರೆ. ಏಕಾಏಕಿ ಜರ್ಮಿನಿಗೆ ಹೋಗಲು ಅದೇಗೆ ವೀಸಾ ಸಿಕ್ತು? ಎನ್ನುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೀಗ ಪ್ರಜ್ವಲ್ ದಿಢೀರ್ ಜರ್ಮನಿಗೆ ಹೋಗಿದ್ದೇಗೆ ಎನ್ನುವುಕ್ಕೆ ಉತ್ತರ ಸಿಕ್ಕಿದೆ. ಪ್ರಜ್ವಲ್, ರಾಜತಾಂತ್ರಿಕ (Diplomatic Passport) ಪಾಸ್‌ಪೋರ್ಟ್ ಮೇಲೆಯೇ ಜರ್ಮನಿಗೆ ಹೋಗಿದ್ದಾರೆ. ಇದೀಗ ಈ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅನ್ನೇ ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಪತ್ರ ಬರೆದಿದ್ದಾರೆ.
ಡಿಪ್ಲೊಮ್ಯಾಟಿಕ್ ಅಥವಾ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಟೈಪ್ ಡಿ (Type D) ಪಾಸ್ ಪೋರ್ಟ್ ಎಂದೂ ಕರೆಯುತ್ತಾರೆ. ಭಾರತೀಯ ರಾಜತಾಂತ್ರಿಕರು, ಸರ್ಕಾರಿ ಅಧಿಕಾರಿಗಳು ಹಾಗೂ ಭಾರತ ಸರ್ಕಾರದ ಪರ ಪ್ರತಿನಿಧಿಸುವ ವ್ಯಕ್ತಿಗಳಿಗೆ ಇದನ್ನು ನೀಡಲಾಗುತ್ತದೆ. ಭಾರತ ಸರ್ಕಾರದ ಪರ ಅಧಿಕೃತ ವಿದೇಶ ಪ್ರಯಾಣದ ಸಂದರ್ಭ ಬಳಸುತ್ತಾರೆ. ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ 28 ಪುಟಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್ ಕಡು ನೀಲಿ ಕವರ್ ಅನ್ನು ಹೊಂದಿದ್ದರೆ, ಇದು ಮರೂನ್ ಬಣ್ಣದಲ್ಲಿ ಇರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್ ವಯಸ್ಕರಿಗೆ 10 ವರ್ಷ ಹಾಗೂ ಅಪ್ರಾಪ್ತರಿಗೆ 5 ವರ್ಷ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ 5 ಅಥವಾ ಕಡಿಮೆ ಅವಧಿಗೆ ಬಿಡುಗಡೆಯಾಗುತ್ತದೆ.
ಈ ಪಾಸ್‌ಪೋರ್ಟ್ ಇರುವವರಿಗೆ ಹಲವು ದೇಶಗಳು ವೀಸಾ ವಿಸ್ತರಿಸುತ್ತವೆ. ವೀಸಾ ಮನ್ನಾ ಸೌಲಭ್ಯವೂ ಸಿಗಬಹುದು. ಅಧಿಕೃತ ಪ್ರವಾಸ ಕಾರ್ಯಕ್ರಮಗಳು ಸುಗಮವಾಗುತ್ತದೆ. ಭಾರತೀಯ ರಾಯಭಾರ ಕಚೇರಿಯ ಸಂಪರ್ಕ ಸೌಲಭ್ಯಗಳು ಸಿಗುತ್ತವೆ. ಇದರ ಆಧಾರದ ಮೇಲೆ ಪ್ರಜ್ವಲ್ ರೇವಣ್ಣ ದಿಢೀರ್ ಜರ್ಮನಿಗೆ ಹಾರಲು ಸಹಾಯಕವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್: ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ, ಪತ್ರದಲ್ಲೇನಿದೆ?
ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ವ್ಯಕ್ತಿಗಳಿಗೆ ಅವರ ಅಧಿಕೃತ ಹುದ್ದೆ ಮತ್ತು ಸರ್ಕಾರದ ಒಳಗಡೆ ಅವರ ಪಾತ್ರದ ಆಧಾರದ ಮೇಲೆ ನೀಡಲಾಗುತ್ತದೆ. ಸಾಮಾನ್ಯ ಸಾರ್ವಜನಿಕರ ಬಳಕೆಗೆ ವಿತರಿಸುವುದಿಲ್ಲ. ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳ ವಿತರಣೆ ಮತ್ತು ಬಳಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿಯಂತ್ರಿಸುತ್ತದೆ ಮತ್ತು ನಿರ್ದಿಷ್ಟ ನಿಯಮಗಳು ಮತ್ತು ಮಾರ್ಗಸೂಚಿಗೆ ಒಳಪಟ್ಟಿರುತ್ತದೆ.
ಇದೇ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಸಿಎಂ ಪತ್ರ
ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ಆಧಾರದ ಮೇಲೆ ಜರ್ಮನಿಗೆ ಹೋಗಿದ್ದಾರೆ. ಹೀಗಾಗಿ ಇದೇ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಮಹಿಳಾ ದೌರ್ಜನ್ಯದಂತಹ ಗುರುತರ ಆರೋಪ ಹೊತ್ತಿರುವ ಹಾಲಿ ಸಂಸದ ಹಾಗೂ ಎನ್‌ಡಿಎ ಮೈತ್ರಿಕೂಟದ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿದೆ. ಈ ನಡುವೆ ಆರೋಪಿಯು ರಾಜತಾಂತ್ರಿಕ ಪಾಸ್‌ಪೋರ್ಟನ್ನು ಬಳಕೆ ಮಾಡಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. ಎಸ್.ಐ.ಟಿ ಯು ತನಿಖೆಯನ್ನು ಮುಂದುವರೆಸಬೇಕಾದರೆ ಆರೋಪಿಯ ವಿಚಾರಣೆ ನಡೆಸುವ ಅಗತ್ಯವಿದೆ. ಹಾಗಾಗಿ ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯಗಳು ತಕ್ಷಣ ಕಾರ್ಯಪ್ರವೃತ್ತವಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್ ಹಿಂಪಡೆಯುವ ಜೊತೆಗೆ ಅಂತಾರಾಷ್ಟ್ರೀಯ ಪೊಲೀಸ್ ಏಜೆನ್ಸಿಗಳನ್ನು ಬಳಸಿಕೊಂಡು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರನ್ನು ಮರಳಿ ಭಾರತಕ್ಕೆ ಕರೆತರಲು ನೆರವಾಗಬೇಕು ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ: ಪ್ರಜ್ವಲ್ ರೇವಣ್ಣನ ನಡೆ, ಮನಸ್ಥಿತಿಗೆ ಲೈಂಗಿಕ-ಮಾನಸಿಕ ತಜ್ಞರೇ ಶಾಕ್
ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ಗೆ ಅಂತಾರಾಷ್ಟ್ರೀಯ ಕಾನೂನಿನ ಮಾನ್ಯತೆ ಇರುತ್ತದೆ. ಇದನ್ನು ಹೊಂದಿರುವವರು ಗಣ್ಯ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ ಅವರು ಯಾವ ದೇಶದಲ್ಲಿದ್ದರೂ ಆತಿಥೇಯ ರಾಷ್ಟ್ರಗಳಲ್ಲಿ ಬಂಧನ ಮಾಡುವುದು, ವಶಕ್ಕೆ ತೆಗೆದುಕೊಳ್ಳುವಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಅಂತಹ ವ್ಯಕ್ತಿಯ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅನ್ನು ರದ್ದು ಮಾಡಿ, ಕ್ರಮಕ್ಕೆ ಆ ರಾಷ್ಟ್ರಗಳಿಗೆ ಮನವಿ ಮಾಡಿದಲ್ಲಿ ಬಂಧನ ಸಾಧ್ಯವಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಮೋದಿಗೆ ಪತ್ರ ಬರೆದಿದ್ದು, ಇದೀಗ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪ್ರಜ್ವಲ್ ಭವಿಷ್ಯ ನಿಂತಿದೆ. ಇನ್ನು ಸಿಎಂ ಪತ್ರಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.