ಪಾರ್ಕಿನಲ್ಲಿ ಕುಳಿತ ವಿಡಿಯೋ ವೈರಲ್ ಮಾಡಿದ ಮಹಿಳೆ, ಮನನೊಂದು ದುರಂತ ಅಂತ್ಯಕಂಡ ಯುವಕ
ಇಂದಿನ ಯುವ ಜನತೆ ತಾವೂ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಬೇಕು ಎಂದು ಬಗೆ ಬಗೆ ಹಲವಾರು ವೀಡಿಯೋ ಮಾಡಿ ಹರಿಬಿಡುತ್ತಾರೆ. ಅದರಂತೆ ಯುವಕನೋರ್ವ ತನ್ನ ಗೆಳತಿ ಜೊತೆ ಪಾರ್ಕ್ ನಲ್ಲಿ ಕುಳಿತು ಮಾತನಾಡುತ್ತಿದ್ದನ್ನು ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ. ಇದರಿಂದ ಮನನೊಂದು ಯುವಕ ದುರಂತ ಸಾವುಕಂಡಿದ್ದಾನೆ.

ಹಾಸನ, ಸೆಪ್ಟೆಂಬರ್ 19 : ಪಾರ್ಕ್‌ನಲ್ಲಿ ಯುವತಿಯ ಕೈ ಹಿಡಿದು ಕುಳಿತಿದ್ದಂತ ದೃಶ್ಯವನ್ನು ಯಾರೋ ವಿಡಿಯೋ ಮಾಡಿ, ತಪ್ಪಾಗಿ ಬಿಂಬಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಟ್ಟರೆಂದು ಮನನೊಂದು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ. ಅಂತಿಮ ವರ್ಷದ ಬಿ.ಎ ವಿದ್ಯಾರ್ಥಿ ಪವನ್ ಕೆ. (21) ಆತ್ಮಹತ್ಯೆಗೆ ಶರಣಾದ ಯುವಕ. ಪವನ್ ಪಾರ್ಕಿನಲ್ಲಿ ಯುವತಿಯೋರ್ವಳ ಕೈ ಹಿಡಿದು ಕುಳಿತುಕೊಂಡಿದ್ದ, ಇದನ್ನೇ ವಿಡಿಯೋ ಮಾಡಿದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಿರಿಬಿಟ್ಟಿದ್ದಾಳೆ. ಇದರಿಂದ ಮನನೊಂದ ಪವನ್ ನೇಣಿಗೆ ಶರಣಾಗಿದ್ದಾನೆ. ಇದ್ದ ಒಬ್ಬನೇ ಮಗನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಏನಿದೆ ಆ ವೈರಲ್ ವೀಡಿಯೋದಲ್ಲಿ?
ಕೇವಲ 30 ಸೆಕೆಂಡುಗಳ ಇನಸ್ಟಾಗ್ರಾಮ್ ರೀಲ್ಸ್ ಇನ್ನೂ ಬಾಳಿ ಬದುಕ ಬೇಕಾಗಿದ್ದ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಪವನ್(21) ಎಂಬ ಯುವಕನನ್ನ ಬಲಿ ಪಡೆದಿದೆ. ‘ಹಾಯ್ ಫ್ರೆಂಡ್ಸ್, ಮಕ್ಕಳು ಆಟವಾಡೋ ಜಾಗದಲ್ಲಿ ಇವರು ಇಂತಹ ಕರ್ಮಕಾಂಡ ಮಾಡುತ್ತಿದ್ದಾರಲ್ಲ, ಒಂದು ಹೆಣ್ಣು ಗಂಡು ಹೇಗಿರಬೇಕು ಎನ್ನೋದು ಗೊತ್ತಿಲ್ವಾ? ಸಾರ್ವಜನಿಕ ಸ್ಥಳದಲ್ಲಿ ಹೀಗೆ ಮಾಡೋರಿಗೆ ಏನು ಮಾಡಬೇಕು? ಅಪ್ಪ ಅಮ್ಮ ಏಕೆ ಇವರನ್ನು ಓದಲು ಕಳುಹಿಸುತ್ತಾರೆ? ಹೀಗೆ ಹೇಳಿಕೊಂಡು ಕಾಲೇಜು ವಿದ್ಯಾರ್ಥಿಗಳು ಪಾರ್ಕ್ ನಲ್ಲಿ ಕೂತಿದ್ದ ವೀಡಿಯೋವೊಂದನ್ನ ಮಾಡಿದ್ದ ಮಹಿಳೆಯೊಬ್ಬರು chinnivasi8 ಎನ್ನುವ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ರೀಲ್ಸ್ ಮಾಡಿದವರ ನಿರೀಕ್ಷೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಮೆಂಟ್ಗಳು ಹಾಗೂ ವ್ಯೂವ್ ಕೂಡ ಬಂದಿದೆ. ಆದರೆ ಸ್ನೇಹಿತೆ ಕೈ ಹಿಡಿದು ಆತ್ಮೀಯತೆಯಿಂದ ಮಾತನಾಡುತ್ತಿದ್ದ ಯುವಕನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದ ವೀಡಿಯೋ ಪವನ್ ಸ್ನೇಹಿತರ ಕೈ ಸೇರಿದೆ. ಅವರು ಪವನ್ಗೆ ವಿಷಯ ತಿಳಿಸಿದಾಗ ತನ್ನೊಟ್ಟಿಗಿದ್ದ ಹುಡುಗಿಗೆ ಸಮಸ್ಯೆಯಾಗಬಾರದೆಂದು ಆ ವೀಡಿಯೋ ಡಿಲೀಟ್ ಮಾಡಿಸಲು ಪ್ರಯತ್ನ ಪಟ್ಟಿದ್ದಾನೆ. ಅದು ಸಾಧ್ಯವಾಗದಿದ್ದಾಗ ನೆನ್ನೆ ಕಾಲೇಜು ಮುಗಿಸಿ ಮನೆಗೆ ಹೋದವನು ಮನೆಯ ಕೊಟ್ಟಿಗೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಎರಡು ವರ್ಷಗಳ ಹಿಂದೆ ಹೃದಯಾಘಾತದಿಂದ ಆತನ ತಂದೆ ಸಾವನ್ನಪ್ಪಿದ್ದರು. ಈಗ ಮನೆಯ ಜವಾಬ್ದಾರಿ ಹೊರಬೇಕಿದ್ದ ಈ ಯುವಕನೂ ಉಸಿರುಚೆಲ್ಲಿದ್ದಾನೆ.
ವೈರಲ್ ವೀಡಿಯೋದ ಅಸಲಿಯತ್ತೇನು?
ಹಾಸನ ತಾಲ್ಲೂಕಿನ ಕಲ್ಲಹಳ್ಳೀ ಗ್ರಾಮದ ಪವನ್ , ಮೊಸಳೆಹೊಸಳ್ಳಿ ಪದವಿಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ಪದವಿ ಕಲಿಯುತ್ತಿದ್ದ. ಕಳೆದ ಬುಧವಾರ, ಸೆಪ್ಟೆಂಬರ್ 17 ರಂದು ಸ್ನೇಹಿತೆರೊಟ್ಟಿಗೆ ಹಾಸನಕ್ಕೆ ಬಂದಿದ್ದ. ಪವನ್ ಮತ್ತು ಆತನ ಸ್ನೇಹಿತರು ಹಾಸನದ ಪಾರ್ಕ್ ಒಂದರಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಸ್ನೇಹಿತೆಯ ಕೈ ಹಿಡಿದು ಆಪ್ತವಾಗಿ ಮಾತನಾಡಿದ್ದ ಅಷ್ಟೇ . ಇದನ್ನೇ ದೊಡ್ಡ ತಪ್ಪು ಎಂಬಂತೆ ಬಿಂಬಿಸಿ ವೀಡಿಯೊ ಮಾಡಿ,ಅದಕ್ಕೆ ವಾಯ್ಸ್ ಡಬ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಎಲ್ಲೆಡೆ ವೈರಲ್ ಆಗಲು ಕಾರಣವಾಗಿದೆ. ವಿಚಾರ ತಿಳಿದ ಪವನ್ ಆ ವೀಡಿಯೋ ಡಿಲೀಟ್ ಮಾಡಿಸಲು ಪ್ರಯತ್ನ ಮಾಡಿದ್ದಾನೆ. ಆದರೆ ಅದು ಸಾಧ್ಯವಾಗಿಲ್ಲ. ನೆನ್ನೆ ಕಾಲೇಜು ಮುಗಿಸಿ ಮನೆಗೆ ಬಂದವನೇ ನೇಣಿಗೆ ಕೊರಳೊಡ್ಡಿದ್ದಾನೆ. ಮಗನ ಮೇಲೆ ನೂರಾರು ಕನಸು ಕಟ್ಟಿ ಕೂಲಿ ಮಾಡಿ ಮಗನಿಗೆ ಪದವಿ ಶಿಕ್ಷಣ ಕೊಡಿಸುತ್ತಿದ್ದ ತಾಯಿ ,ಮಗ ಶಿಕ್ಷಣ ಪಡೆದು ತನಗೆ ಆಸರೆ ಆಗುತ್ತಾನೆ ಎಂದು ಆಸೆ ಇಟ್ಟುಕೊಂಡಿದ್ದರು. ಈ ಘಟನೆ ಬಗ್ಗೆ ಕುಟುಂಬದ ಸದಸ್ಯರು ಗೊರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು , ಕ್ರಮಕ್ಕೆ ಆಗ್ರಹಿಸಿದ್ದಾರೆ. ಘಟನೆಗೆ ಕಾರಣವಾದವರ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



