ಹಾಸನ: ಮಳೆಯಿಂದಾಗಿ ಮನೆ ಗೋಡೆ ಕುಸಿದು ಬಾಲಕ ಸಾವು: ಲಕ್ಷಾಂತರ ರೂ. ಮೌಲ್ಯದ ಗುಲಾಬಿ, ಟೊಮ್ಯಾಟೊ ನಾಶ
ಕಳೆದ ನಾಲ್ಕೈದು ದಿನಗಳಿಂದ ಸುರಿದ ಧಾರಾಕಾರ ಮಳೆ ಹಿನ್ನೆಲೆ, ಗುಲಾಬಿ ತೋಟ ನೀರಿನಲ್ಲಿ ಮುಳುಗಡೆಯಾಗಿರುವಂತಹ ಘಟನೆ ನಗರದ ಹೊರವಲಯದ ವಿಜಯನಗರ ಬಳಿ ಕಂಡು ಬಂದಿದೆ.
ಹಾಸನ: ಮಳೆಯಿಂದಾಗಿ ಮನೆ ಗೋಡೆ (wall) ಕುಸಿದು ಬಾಲಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಭುವನಹಳ್ಳಿಯಲ್ಲಿ ನಡೆದಿದೆ. ಪ್ರಜ್ವಲ್(13) ಮೃತ ಬಾಲಕ. ನೆನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಗೋಡೆ ಕುಸಿದು ಅವಾಂತರ ನಡೆದಿದ್ದು, ಗ್ರಾಮದ ತನ್ಮ ಮನೆಯಿಂದ ತಾತನ ಮನೆಯಲ್ಲಿ ಬಾಲಕ ಬಂದು ಮಲಗಿದ್ದು, ಬೆಳಗಿನ ಜಾವ ಏಕಾ ಏಕಿ ಗೋಡೆ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮನೆಯಲ್ಲಿದ್ದ ಮತ್ತೋರ್ವ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅದಿಕಾರಿಗಳ ಭೇಟಿ ನೀಡಿ, ಪರಿಶೀಲನೆ ಮಾಡಿದರು. ನುಗ್ಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ನಿರಂತರ ಮಳೆಯಿಂದಾಗಿ ಗುಲಾಬಿ ತೋಟ ಜಲಾವೃತ
ಕೋಲಾರ: ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಧಾರಾಕಾರ ಮಳೆ ಹಿನ್ನೆಲೆ, ಗುಲಾಬಿ ತೋಟ ನೀರಿನಲ್ಲಿ ಮುಳುಗಡೆಯಾಗಿರುವಂತಹ ಘಟನೆ ನಗರದ ಹೊರವಲಯದ ವಿಜಯನಗರ ಬಳಿ ಕಂಡು ಬಂದಿದೆ. ರಮೇಶ್ ಎಂಬುವರ ಗುಲಾಬಿ ತೋಟ, ನೀರಿನಲ್ಲಿ ಮುಳುಗಡೆಯಾಗಿ ಭಾರೀ ನಷ್ಟ ಆಗಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಭಾರೀ ಲಾಭದ ನಿರೀಕ್ಷೆಯಲ್ಲಿದ್ದ ರೈತ, ಮುಳುಗಡೆಯಿಂದಾಗಿ ಲಕ್ಷಾಂತರ ರೂಪಾಯಿ ಹೂವಿನ ತೋಟ ನಾಶವಾಗಿದೆ. ಅದೇ ರೀತಿಯಾಗಿ ಆರೋಹಳ್ಳಿಯಲ್ಲಿ ಕಳೆದ 4-5 ದಿನಗಳಿಂದ ಭಾರಿ ಮಳೆಯಿಂದಾಗಿ ಲಕ್ಷಾಂತರ ರೂ. ಮೌಲ್ಯದ ಟೊಮ್ಯಾಟೊ ಬೆಳೆ ಹಾನಿ ಯಾಗಿದೆ. ಭಾರಿ ಮಳೆಯಿಂದಾಗಿ ತೋಟದಲ್ಲೇ ಟೊಮ್ಯಾಟೊ ಕೊಳೆಯುತ್ತಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತ ಪರಿಹಾರ ಆಗ್ರಹಿಸಿದರು.
ರಣಮಳೆಗೆ ಅಪಾರ ಹಾನಿ
ಗದಗ: ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅಪಾರ ಹಾನಿಯಾಗಿದ್ದು, ಆ. 1ರಿಂದ 4ರವರೆಗೆ 136 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ನಾಲ್ಕು ದಿನಗಳಲ್ಲಿ ಮಳೆಗೆ 87.3 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಮಳೆಯಿಂದಾಗಿ ಹೆಸರು, ಗೋವಿನಜೋಳ, ಶೇಂಗಾ, ಸೂರ್ಯಕಾಂತಿ ಸೇರಿದಂತೆ 76,657 ಹೆಕ್ಟೇರ್ ತೋಟಗಾರಿಕಾ ಬೆಳೆ, 13.96 ಕಿ.ಮೀ ರಸ್ತೆಗಳು ಮತ್ತು 20 ಸೇತುವೆಗಳು ಹಾನಿಯಾಗಿವೆ.
ಮಳೆಯ ಅಬ್ಬರಕ್ಕೆ ತುಂಬಿ ಹರಿಯುತ್ತಿರುವ ಜಲಾಶಯ
ತುಮಕೂರು: ಮಳೆಯ ಅಬ್ಬರಕ್ಕೆ ಜಲಾಶಯ ಕೆರೆ ಕುಂಟೆಗಳು ತುಂಬಿ ತುಳುಕುತ್ತಿದ್ದು, ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಜಲಾಶಯ ತುಂಬಿ ಹರಿಯುತ್ತಿವೆ. ಜಿಲ್ಲೆಯ ಎರಡು ತಾಲೂಕಿಗೆ ಜೀವನಾಡಿಯಾಗಿರುವ ಕೊರಟಗೆರೆ ತಾಲೂಕಿನ ತೀತಾ ಜಲಾಶಯ ಅತಿ ರಭಸವಾಗಿ ಹರಿಯುತ್ತಿದೆ. ಆಂಧ್ರದವರೆಗೂ ಜಲಾಶಯ ನೀರು ಹರಿಯುತ್ತಿದ್ದು, ಒಂದೆಡೆ ರೈತರಲ್ಲಿ ಸಂತಸ, ಮತ್ತೊಂದು ಕಡೆ ಗ್ರಾಮಗಳು ಜಲಾವೃತ ಆಗುವ ಆತಂಕ ಎದುರಾಗಿದೆ.
ಮನೆಗಳಿಗೆ ನುಗ್ಗಿದ ಮಳೆ ನೀರು
ಚಿಕ್ಕಮಗಳೂರು: ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿರುವಂತಹ ಘಟನೆ ಜಿಲ್ಲೆಯ ಕಡೂರು ತಾಲೂಕಿನ ನಿಡುವಳ್ಳಿ ಗ್ರಾಮದಲ್ಲಿ ನಡೆದಿದೆ. ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ದಿಢೀರ್ ಮಳೆಯಿಂದಾಗಿ ಮನೆಯಲ್ಲಿದ್ದ ದವಸ ಧಾನ್ಯಗಳು ಹಾನಿಯಾಗಿವೆ. ಭಾರಿ ಮಳೆಯಿಂದ ರಾತ್ರಿಯಿಡೀ ಜನರ ಪರದಾಡಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ನೀರು ನುಗ್ಗಿದೆ. ಅಧಿಕಾರಿಗಳ ಸೂಚನೆ ಮೇರೆಗೆ ಮುಖ್ಯ ರಸ್ತೆಯನ್ನೇ ಜನರು ತುಂಡರಿಸಿದ್ದಾರೆ.
Published On - 11:06 am, Fri, 5 August 22