ಹಾಸನದಲ್ಲಿ ಮತ್ತೊಂದು ಕಾಡಾನೆ ಸೆರೆ, ಮುಂದುವರೆದ ಕಾರ್ಯಾಚರಣೆ
ಹಾಸನ ಕಾಡಾನೆ ಸೆರೆ ಕಾರ್ಯಾಚರಣೆ: ಮಂಗಳವಾರ ಬೇಲೂರು ತಾಲ್ಲೂಕಿನ ಸಿಂಗರವಳ್ಳಿ ಗ್ರಾಮದಲ್ಲಿ ಮತ್ತೊಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಕಳೆದ ಒಂದು ವರ್ಷದಿಂದ ಆಲೂರು ಬೇಲೂರು ಭಾಗದಲ್ಲಿ ಓಡಾಡುತ್ತಾ ಆತಂಕ ಸೃಷ್ಟಿ ಮಾಡಿದ್ದ ಒಂಟಿ ಸಲಗವನ್ನು ಅಧಿಕಾರಿಗಳು ಆಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.
ಹಾಸನ, ಜನವರಿ 17: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜನರಿಗೆ ಕಂಟಕವಾಗಿರುವ ಪುಂಡಾನೆಗಳ (Wild Elephants) ಸೆರೆ ಕಾರ್ಯಾಚರಣೆ ಮುಂದುವರೆದಿದೆ. ಜನವರಿ 13 ರಂದು ಆಲೂರು ತಾಲ್ಲೂಕಿನ ನಲ್ಲೂರು ಬಳಿ ಒಂದು ಆನೆ ಸೆರೆ ಹಿಡಿದು ಸ್ಥಳಾಂತರ ಮಾಡಿದ್ದ ಅರಣ್ಯ ಇಲಾಖೆ (Dorest Department) ಮಂಗಳವಾರ ತಣ್ಣೀರ್ ಹೆಸರಿನ ಮತ್ತೊಂದು ಬೃಹತ್ ಗಾತ್ರದ ಬಲಿಷ್ಠ ಆನೆಯನ್ನು ಸೆರೆಹಿಡಿದಿದೆ. ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಂಟು ಸಾಕಾನೆಗಳ ಟೀಂ ಮತ್ತೊಂದು ಪುಂಡಾನೆಯನ್ನು ಖೆಡ್ಡಾಕ್ಕೆ ಕೆಡವಿದ್ದು ಆಪರೇಷನ್ ಪುಂಡಾನೆ ಕಾರ್ಯಾಚರಣೆ ಮುಂದುವರೆದಿದೆ.
ಡಿಸೆಂಬರ್ 4 ರಂದು ದಸರಾ ಆನೆ ಅರ್ಜುನನ ಸಾವಿನ ಬಳಿಕ ಸ್ಥಗಿತವಾಗಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ಮತ್ತೆ ಆರಂಭ ವಾಗಿದೆ. ಮಂಗಳವಾರ ಬೇಲೂರು ತಾಲ್ಲೂಕಿನ ಸಿಂಗರವಳ್ಳಿ ಗ್ರಾಮದಲ್ಲಿ ಮತ್ತೊಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಕಳೆದ ಒಂದು ವರ್ಷದಿಂದ ಆಲೂರು ಬೇಲೂರು ಭಾಗದಲ್ಲಿ ಓಡಾಡುತ್ತಾ ಆತಂಕ ಸೃಷ್ಟಿ ಮಾಡಿದ್ದ ಒಂಟಿ ಸಲಗವನ್ನು ಅಧಿಕಾರಿಗಳು ಆಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.
ಬೆಳಿಗ್ಗೆ ಕಾರ್ಯಾಚರಣೆ ಆರಂಭವಾದಾಗಿನಿಂದ ಕಾಡಾನೆ ಸರೆ ಕಾರ್ಯಾಚರಣೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಸಲಗವನ್ನು ಮದ್ಯಾಹ್ನದ ವೇಳೆಗೆ ಅಭಿಮನ್ಯು ಅಂಡ್ ಟೀಂ ಖೆಡ್ಡಾಕ್ಕೆ ಕೆಡವಿದೆ.
ಹಾಸನ ಜಿಲ್ಲೆಯಲ್ಲಿ ಸತತ ಎರಡು ದಶಕಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಹಲವು ಸರ್ಕಾರಗಳು ಬದಲಾದರೂ ಸಮಸ್ಯೆ ಮಾತ್ರ ಪರಿಹಾರ ವಾಗಿಲ್ಲ. ಸೋಲಾರ್ ಬೇಲಿ, ಆನೆ ಕಂಡಲ ಯಾವುದು ಕೂಡ ಸಮಸ್ಯೆಗೆ ಉತ್ತರ ನೀಡಿಲ್ಲ. ಹಾಗಾಗಿಯೇ ಜನವಸತಿ ಪ್ರದೇಶದ ಸನಿಹದಲ್ಲಿ ನೆಲೆಸಿರುವ ಎಲ್ಲಾ ಆನೆಗಳನ್ನು ಸ್ಥಳಾಂತರ ಮಾಡಿ ಎಂಬ ಸ್ಥಳೀಯರ ಆಗ್ರಹದ ಮೇರೆಗೆ ನವೆಂಬರ್ 23 ರಿಂದ 9 ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ಆರಂಭ ಮಾಡಲಾಗಿತ್ತು. ಆದರೆ, ಡಿಸೆಂಬರ್ 4 ರಂದು ಕಾರ್ಯಾಚರಣೆ ವೇಳೆ ಕಾಡಾನೆ ಜೊತೆಗೆ ಕಾಳಗದಲ್ಲಿ ದಸರಾ ಆನೆ ಕ್ಯಾಪ್ಟನ್ ಅರ್ಜುನ ಮಡಿದ ಬಳಿಕ ಕಾರ್ಯಾಚರಣೆಯೇ ಸ್ಥಗಿತವಾಗಿತ್ತು.
ಇದನ್ನೂ ಓದಿ: ಹಾಸನ: ಕಾಡಾನೆ ಸೆರೆ ಹಿಡಿದ ಅಭಿಮನ್ಯು ನೇತೃತ್ವದ ಸಾಕಾನೆಗಳ ತಂಡ
ಇದೀಗ ಮತ್ತೆ ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ ಮರು ಆರಂಭವಾಗಿದ್ದು ಮೂರೇ ದಿನದಲ್ಲಿ ಎರಡನೇ ಪುಂಡಾನೆ ಸೆರೆಹಿಡಿಯಲಾಗಿದೆ. ಗುಂಪಿಗೆ ಸೇರದೆ ಆತಂಕ ಸೃಷ್ಟಿ ಮಾಡಿದ್ದ ತಣ್ಣೀರ್ ಹೆಸರಿನ ಕಾಡಾನೆಯನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ