ಶಿರಾಡಿಘಾಟ್: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಡಿಸಿ ಆದೇಶ
ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಕಾರು, ಜೀಪು, ಟೆಂಪೊ, ಮಿನಿ ವ್ಯಾನ್ ಆಂಬುಲೆನ್ಸ್ ಏಕಮುಖವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ.

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿ 75 ಬಂದ್ ಮಾಡಲಾಗಿತ್ತು. ಸದ್ಯ ಶಿರಾಡಿಘಾಟ್(Shiradi Ghat)ನ ಪರ್ಯಾಯ ಮಾರ್ಗದಲ್ಲಿ ಲಘು ವಾಹನಗಳು ಸಂಚರಿಸಲು ಅವಕಾಶ ನೀಡಿ ಹಾಸನ ಡಿಸಿ ಆರ್ ಗಿರೀಶ್(R Girish) ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಕಾರು, ಜೀಪು, ಟೆಂಪೊ, ಮಿನಿ ವ್ಯಾನ್ ಆಂಬುಲೆನ್ಸ್ ಏಕಮುಖವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಸಕಲೇಶಪುರ, ಆನೆ ಮಹಲ್, ಕ್ಯಾನಹಳಹಳ್ಳಿ, ಚಿನ್ನಹಳ್ಳಿ, ಕಡಗರಹಳ್ಳಿ ಮಾರ್ಗದಲ್ಲಿ ಮಾರನಹಳ್ಳಿ ತಲುಪಿ ಮಂಗಳೂರಿಗೆ ಹೋಗಲು ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಹೋಗೋ ಕಾರು, ಜೀಪು, ಟೆಂಪೊ, ಮಿನಿ ವ್ಯಾನ್ ಗಳು ಮಾರನಹಳ್ಳಿಯಿಂದ ಕಾಡುಮನೆ, ಕಾರ್ಲೆ ಕೂಡಿಗೆ, ಆನೆಮಹಲ್ ಸಕಲೇಶಪುರ ಮಾರ್ಗದ ಮೂಲಕ ಬೆಂಗಳೂರಿಗೆ ಹೋಗಬಹುದು. ಲಘು ವಾಹನಗಳಿಗೆ ಶಿರಾಡಿಘಾಟ್ ನಲ್ಲೇ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್, ಜುಲೈ 15 ರಂದು ಶಿರಾಡಿಘಾಟ್ ನಲ್ಲಿ ಸಂಚಾರ ನಿರ್ಬಂಧ ಹೊರಡಿಸಿದ್ದರು. ಸದ್ಯ ಈಗ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಶಿರಾಡಿಘಾಟ್ ನಲ್ಲೇ ಪರ್ಯಾಯ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದಾರೆ. ಶಿರಾಡಿಘಾಟ್ ಬಂದ್ ಮಾರ್ಗಸೂಚಿ ಬದಲಿಸಿ ಆದೇಶಿಸಿದ್ದಾರೆ. ಎರಡೂ ಕಡೆಯಿಂದ ಯಾವುದೇ ಸಮಸ್ಯೆ ಆಗದಂತೆ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಹತ್ತು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಇದರಿಂದ ನದಿ ತೊರೆಗಳೆಲ್ಲಾ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದೆ. ಪಶ್ಚಿಮಘಟ್ಟದ ತಪ್ಪು ಶೀರಾಡಿಘಾಟ್ನಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿಯುತ್ತಿದ್ದು, ಅತಿಯಾದ ಶೀತದಿಂದ ಜುಲೈ 10ರಂದು ಹಾಸನದಿಂದ ಮಂಗಳೂರಿಗೆ ತೆರಳೋ ಮಾರ್ಗದ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ಸಣ್ಣ ಪ್ರಮಾಣದ ಭೂ ಕುಸಿತವಾಗಿತ್ತು. ತಕ್ಷಣ ಇದನ್ನ ದುರಸ್ಥಿ ಮಾಡೋ ಪ್ರಯತ್ನ ನಡೆದರೂ ಅತಿಯಾದ ಮಳೆಯಿಂದ ಮಾಡಿದ ಪ್ರಯತ್ನ ಫಲ ನೀಡದೆ ಇದು ಕೊಚ್ಚಿಹೋಗಿತ್ತು. ಜುಲೈ 14ರ ಬೆಳಿಗ್ಗೆ 10 ಗಂಟೆ ಸುಮಾರಿಗೆ ದೋಣಿಗಲ್ ಸಮೀಪ ಭೂ ಕುಸಿತವಾಗಿ ತಕ್ಷಣ ಸ್ಥಳಕ್ಕೆ ಬೇಟಿಕೊಟ್ಟ ಸಕಲೇಶಪುರ ಉಪ ವಿಭಾಗ ಅಧಿಕಾರಿ ಪ್ರತೀಕ್ ಬಯಾಲ್ ಈ ಭಾಗದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿರೋದಾಗಿ ಘೋಷಣೆ ಮಾಡಿದ್ದರು.
ಕೇವಲ ಲಘುವಾಹನಗಳಿಗೆ ಮಾತ್ರ ಅವಕಾಶ ಎಂದು ಹೇಳೊ ಜೊತೆಗೆ ಸರದಿಯಲ್ಲಿ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಲಾಯ್ತು. ಸಂಜೆ ವೇಳೆಗೆ ಈ ಆದೇಶ ಮಾರ್ಪಾಡು ಮಾಡಿದ ಜಿಲ್ಲಾಧಿಕಾರಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಹಾಗೂ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದರು. ಇದಾಗಿ ಒಂದು ದಿನ ಕಳೆಯೋ ಮುನ್ನವೇ ಇದೇ ಸ್ಥಳದಲ್ಲಿ ಮತ್ತೊಂದು ಬದಿಯ ರಾಜ್ಯಹೆದ್ದಾರಿಯಲ್ಲಿ ಕುಸಿತವಾಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿ ಇದೀಗ ಶಿರಾಡಿ ಮಾರ್ಗದಲ್ಲಿ ಲಘು ಹಾಗು ಭಾರೀ ವಾಹನಗಳೆಲ್ಲವನ್ನು ಕೂಡ ನಿಷೇಧ ಮಾಡಲಾಗಿತ್ತು. ಸದ್ಯ ಇಂದು ಮತ್ತೆ ಶಿರಾಡಿಘಾಟ್ ಬಂದ್ ಮಾರ್ಗಸೂಚಿ ಬದಲಿಸಿ ಆದೇಶ ಹೊರಡಿಸಲಾಗಿದೆ.




