ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನ ಅಮ್ಮನಹಟ್ಟಿಯ ಗಂಗಾ ಮಾಲಿಕಾ ದೇವಿ ದೇವಸ್ಥಾನದ ಜಾತ್ರೆಯನ್ನ ನಿಷೇಧಿಸಲಾಗಿದೆ. ಇದೇ ಮಾರ್ಚ್ 22 ಮತ್ತು 23 ರಂದು ಜಾತ್ರೆ ನಿಗದಿಯಾಗಿತ್ತು. ಆದ್ರೆ, ಇದೀಗ ವಿಧಾನಸಭಾ ಚುನಾವಣೆಗೆ(Karnataka assembly Election) ಮುಂಚಿತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಾತ್ರೆಗೆ ನಿಷೇಧ ಹೇರಲಾಗಿದೆ. ಇನ್ನು ದೇವಾಲಯದ ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಕೆಲವು ಅಹಿತಕರ ಘಟನೆಗಳು ನಡೆದಿದ್ದು, ಈ ಸಂಬಂಧ ಹಿಂಸಾಚಾರ ಸೃಷ್ಟಿಸಿದ ಕೆಲವು ವ್ಯಕ್ತಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇದೀಗ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಈ ಜಾತ್ರೆಯನ್ನ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಪೊಲೀಸರು ಮತ್ತು ಸಂಬಂಧಪಟ್ಟ ಇತರ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಜಾತ್ರೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅರ್ಚನಾ ಅವರು ಹೇಳಿದರು. ಅರಸೀಕೆರೆ ವಿಧಾನಸಭಾ ಚುನಾವಣೆಯ ಮತಗಟ್ಟೆ 112ನ್ನು ದಾಸಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗುತ್ತಿದ್ದು, ಅಮ್ಮನಹಟ್ಟಿ ಗ್ರಾಮವು ಮತಗಟ್ಟೆ ವ್ಯಾಪ್ತಿಗೆ ಬರಲಿದೆ. ಹೀಗಾಗಿ ಇದನ್ನು ಸೂಕ್ಮ ಮತಗಟ್ಟೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಹಾಸನದಲ್ಲಿ ತಾರಕಕ್ಕೇರಿದ ಜೆಡಿಎಸ್ ಟಿಕೆಟ್ ಫೈಟ್: ರೇವಣ್ಣ ನಡೆಯಿಂದ ಬೇಸರ ವ್ಯಕ್ತಪಡಿಸಿದ ಹೆಚ್ಡಿ ಕುಮಾರಸ್ವಾಮಿ
ನಾಲ್ಕು ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅರಸೀಕೆರೆ ಪೊಲೀಸರು ನಾಲ್ಕು ಕಡೆ ಚೆಕ್‌ಪೋಸ್ಟ್ ಸ್ಥಾಪಿಸಿದ್ದಾರೆ. ಪೊಲೀಸರು ಸಂಚರಿಸುವ ವಾಹನಗಳ ತಪಾಸಣೆಗೆ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಿದ್ದು, ವಾಹನಗಳ ತಪಾಸಣೆ ಆರಂಭಿಸಿದ್ದಾರೆ. ಹಾಗಾಗಿ ಇದುವರೆಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ