ಹಾಸನಾಂಬೆ ದರ್ಶನ ವಿಚಾರಕ್ಕೆ ಡಿಸಿ ಕಚೇರಿ- ಪೊಲೀಸ್ ಅಧಿಕಾರಿಗಳ ನಡುವೆ ಮಾರಾಮಾರಿ

| Updated By: ರಮೇಶ್ ಬಿ. ಜವಳಗೇರಾ

Updated on: Oct 29, 2024 | 11:36 PM

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಹಾಸನಾಂಬೆ ದೇವಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಭಕ್ತರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸಪಡುತ್ತಿದ್ದಾರೆ. ಇದರ ನಡುವೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾರಾಮಾರಿಯಾಗಿದೆ. ಈ ಗಲಾಟೆಯಲ್ಲಿ ಜಿಲ್ಲಾಧಿಕಾರಿ ಪ್ರವೇಶ ಮಾಡಿದ್ದು, ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹಾಸನಾಂಬೆ ದರ್ಶನ ವಿಚಾರಕ್ಕೆ ಡಿಸಿ ಕಚೇರಿ- ಪೊಲೀಸ್ ಅಧಿಕಾರಿಗಳ ನಡುವೆ ಮಾರಾಮಾರಿ
ಹಾಸನಾಂಬೆ
Follow us on

ಹಾಸನ , (ಅಕ್ಟೋಬರ್ 29): ಹಾಸನಾಂಬೆ ದರ್ಶನಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತರ ದಂಡು ಹರಿದುಬರುತ್ತಿದೆ. ಇದರಿಂದ ಭಕ್ತರನ್ನು ನಿಯಂತ್ರಿಸಲು ಪೊಲಿಸ್ ಇಲಾಖೆ ಹರಸಾಹಸಪಡುತ್ತಿದೆ. ಇನ್ನು ದೇವಿ ದರ್ಶನಕ್ಕೆ ಬಂದ ಭಕ್ತರನ್ನು ಬಿಡುವ ವಿಚಾರಕ್ಕೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾರಾಮಾರಿ ನಡೆದಿದೆ. ಇಂದು (ಅಕ್ಟೋಬರ್ 29) ಹಾಸನ ನಗರಸಭೆ ಎದುರಿನ ಮುಖ್ಯದ್ವಾರದ ಬಳಿ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಡಿಸಿ ಕಚೇರಿ ಸಿಬ್ಬಂದಿ ಕೈ ಕೈ ಮಿಲಾಯಿಸಿದ್ದು, ಜಗಳ ಬಿಡಿಸಲು ಕಂದಾಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು.

ದೇವಿ ದರ್ಶನಕ್ಕೆ ಬಂದ ಭಕ್ತರನ್ನು ಬಿಡುವ ವಿಚಾರಕ್ಕೆ ಎರಡು ಸರ್ಕಾರಿ ಇಲಾಖೆ ಸಿಬ್ಬಂದಿ ಪರಸ್ಪರ ಬಡಿದಾಡಿಕೊಂಡಿದ್ದು, ಕೊನೆಗೆ ಪೊಲೀಸರು ಜಿಲ್ಲಾಧಿಕಾರಿ ಸಿಬ್ಬಂದಿಯನ್ನು ಹೊರಗೆದಬ್ಬಿದ್ದಾರೆ.
ಶಿಷ್ಟಾಚಾರದ ವಾಹನ ತಡೆದಿದ್ದಕ್ಕೆ ಡಿಸಿ ಪಿಎ ಶಶಿ ಹಾಗೂ ಸಬ್‌ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್ ನಡುವೆ ನಡೆದಿದ್ದ ಮಾರಾಮಾರಿ ನಡೆದಿದೆ ಎಂದು ತಿಳಿದುಬಂದಿದೆ. ಅಲ್ಲದೇ ಡಿ‌ಸಿ ಪಿಎ ಶಶಿ ಎಂಬಾತನನ್ನು ಪೊಲೀಸರು ಹೊರಗೆ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಹಾಸನಾಂಬೆ ಸನ್ನಿಧಿಯಲ್ಲಿ ಆಕರ್ಷಕ ಬೆಳಕಿನ ಚಿತ್ತಾರ: ಕಣ್ತುಂಬಿಕೊಂಡ ಭಕ್ತಸಾಗರ

ಅವಾಜ್ ಹಾಕಿದ ಪೊಲೀಸ್​ಗೆ ಸಸ್ಪೆಂಡ್ ಎಚ್ಚರಿಕೆ

ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಸಿ.ಸತ್ಯಭಾಮ ಗಮನಕ್ಕೆ ಬಂದಿದ್ದು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿ ಅಮಾನತು ಮಾಡಿಸುವುದಾಗಿ ಎಚ್ಚರಿಕೆ ನಿಡಿದರು.

ಮಳವಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಮತ್ತು ಡಿಸಿ ನಡುವೆ ವಾಗ್ವಾದ ನಡೆದಿದ್ದು, ನಮ್ಮ ಮಹಿಳಾ ಪೊಲೀಸ್ ಸಬ್ಇನ್ಸ್‌ಪೆಕ್ಟರ್‌ಗೆ ಗಾಯವಾಗಿದೆ. ಕೂಡಲೇ ಚಿಕಿತ್ಸೆ ಕೊಡಿಸಿ. ನಿಮ್ಮ ಪಿ‌ಎ ವರ್ತನೆಯೇ ಘಟನೆಗೆ ಕಾರಣ ಎಂದು ಸಿಪಿಐ ರವಿ ಅವರು ಡಿಸಿಗೆ ಏರು ಧ್ವನಿಯಲ್ಲೇ ಹೇಳಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯ್ತು. ಅಂತಿಮವಾಗಿ ಗೇಟ್ ಮುಂದೆ ಕಂದಾಯ ಅಧಿಕಾರಿಗಳು ನಿಂತು ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿ ಅಲ್ಲಿಂದ ತೆರಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:32 pm, Tue, 29 October 24