AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಕ್ಕೆ ಮೂರು ದಿನ ಮಾತ್ರ ದರ್ಶನ ನೀಡುವ ಹಾಸನಾಂಬೆ ಸಹೋದರಿಯ ಅದ್ದೂರಿ ಜಾತ್ರೆ

ಹಾಸನಾಂಬೆ ಸಹೋದರಿ ವಾರಕ್ಕೆ ಮೂರು ದಿನ ದರ್ಶನ ನೀಡುತ್ತಾಳೆ, ಮತ್ತು ವರ್ಷಕ್ಕೆ ಮೂರು ಬಾರಿ ಜಾತ್ರೆ ಮಾಡಲಾಗುತ್ತದೆ

ವಾರಕ್ಕೆ ಮೂರು ದಿನ ಮಾತ್ರ ದರ್ಶನ ನೀಡುವ ಹಾಸನಾಂಬೆ ಸಹೋದರಿಯ ಅದ್ದೂರಿ ಜಾತ್ರೆ
ಹಾಸನಾಂಬೆ ಸಹೋದರಿ ಕೆಂಚಾಂಬ
TV9 Web
| Edited By: |

Updated on:Oct 31, 2022 | 4:40 PM

Share

ನಾಡಿನ ಶಕ್ತಿದೇವತೆ ಹಾಸನದ ಅಧಿದೇವತೆ ಹಾಸನಾಂಬೆಯ (Hassanamba) ಸಹೋದರಿಯ ಸನ್ನಿಧಿ, ಹಾಸನಾಂಬೆ ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡಿದರೇ ಅಕ್ಕ ಬ್ರಾಹ್ಮಿದೇವಿ ವಾರಕ್ಕೆ ಮೂರು ದಿನ ಮಾತ್ರ ದರ್ಶನ ನೀಡ್ತಾಳೆ. ವರ್ಷಕ್ಕೊಮ್ಮೆ ದರ್ಶನದ ಬಳಿಕ ಹಾಸನಾಂಬೆ ದೇಗುಲದ ಬಾಗಿಲು ಮುಚ್ಚಿದರೇ ಇಲ್ಲಿ ಅಕ್ಕನ ಸನ್ನಿಧಿಯಲ್ಲಿ ಮೊದಲ ದಿನದ ದರ್ಶನದ ಬಳಿಕ ಒಂದು ವಾರ ಬಾಗಿಲು ಮುಚ್ಚಿ, ಬಳಿಕ ಬಾಗಿಲು ತೆರೆಯಲಾಗುತ್ತದೆ. ಈ ವೇಳೆ 48 ಹಳ್ಳಿ ಜನರು ಮಾಂಸಾಹಾರ ಸೇವಿಸದೆ, ಯಾವುದೇ ವಸ್ತುಗಳನ್ನು ಕರಿಯದೆ ಶ್ರದ್ಧೆಯಿಂದ ವೃತಾಚರಣೆ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಹಾಸನಾಂಬೆ ಸಹೋದರಿಯ ಅದ್ದೂರಿ ಜಾತ್ರೆ ಜಿಲ್ಲೆಯಲ್ಲೇ ವಿಶಿಷ್ಟ ಮಹತ್ವ ಪಡೆದುಕೊಂಡಿದೆ.

ಹಾಸನದಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸೋ ಅಧಿದೇವತೆ ಶಕ್ತದೇವಿ ಹಾಸನಾಂಬೆ ಮಹೋತ್ಸವ ಮುಕ್ತಾಯವಾಗಿದೆ. ಹದಿನೈದು ದಿನಗಳ ದರ್ಶನದ ಬಳಿಕ ಜಗನ್ಮಾತೆ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಇದಾದ ಬಳಿಕ ಈಗ ಹಾಸನಾಂಬೆ ಸಹೋದರಿ ಬ್ರಾಹ್ಮಿದೇವಿಯ ಜಾತ್ರಾಮಹೋತ್ಸವ ಶುರುವಾಗಿದೆ. ಜಿಲ್ಲೆಯ ಆಲೂರು ತಾಲ್ಲೂಕಿನ ಹರಿಹಳ್ಳಿಯಲ್ಲಿ ನೆಲೆಸಿರೋ ಕೆಂಚಾಂಬೆ ವಾರದ ಬುಧವಾರ, ಶುಕ್ರವಾರ ಮತ್ತು ಭಾನುವಾರ ಮಾತ್ರವೇ ಭಕ್ತರಿಗೆ ದರ್ಶನ ನೀಡುತ್ತಾಳೆ. ನಿನ್ನೆ (ಅ.30) ಭಾನುವಾರವಾದ್ದರಿಂದ ಅದ್ದೂರಿ ಜಾತ್ರಾಮಹೋತ್ಸವ ನಡೆಯಿತು.ಭಾನುವಾರದಂದು ದೇವಿಯನ್ನು ಕಣ್ತುಂಬಿಕೊಂಡ ಭಕ್ತರು, ಕಾಳುಮೆಣಸು ಹಾಗು ಹುಡಿಗಡಲೆಯನ್ನು ದೇಗುಲದ ಮೇಲೆಸೆದು ತಮ್ಮ ಇಷ್ಟಾರ್ಥ ಸಿದ್ದಿಸೋ ದೇವಿಗೆ ನಮಿಸಿದರು.

ಬ್ರಾಹ್ಮಿದೇವಿಯ ಪೌರಾಣಿಕ ಕಥೆ

ರಕ್ತ ಬಿಜಾಸುರನನ್ನು ಸಂಹಾಸಮಾಡಲೆಂದು ದಕ್ಷಿಣದ ಕಡೆಗೆ ಸಪ್ತ ಮಾತೃಕೆಯರಾದ ಬ್ರಾಹ್ಮಿದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ ಹಾಗು ವಾರಾಹಿ, ಇಂದ್ರಾಣಿ, ಚಾಮುಂಡಿ ದೇವಿಯರು ಬಂದಿದ್ದರು. ರಕ್ತ ಬಿಜಾಸುರನನ್ನು ಸಂಹಾರ ಮಾಡಲು ಬ್ರಾಹ್ಮಿದೇವಿ ಹರಿಹಳ್ಳಿ ಬಳಿ ಭೂಮಂಡಲಕ್ಕೆ ನಾಲಿಗೆ ಚಾಚಿ ರಕ್ತ ಬೀಜಾಸುರನ ಒಂದು ತೊಟ್ಟು ರಕ್ತವು ಭೂಮಿಗೆ ಬೀಳದಂತೆ ಆತನನ್ನು ಸಂಹಾರ ಮಾಡಿದಳು. ರಕ್ತ ಬೀಜಾಸುರನನ್ನು ಸಂಹಾರ ಮಾಡಿದ ನಂತರ ಬ್ರಾಹ್ಮಿದೇವಿ ನಾಲಿಗೆ ಕೆಂಪಾಗುತ್ತದೆ. ಹಾಗಾಗಿ ಆಕೆಗೆ ಕೆಂಚಾಂಬೆ ಎಂದು ಹೆಸರು ಬರುತ್ತೆ.

ಇನ್ನು ಮಹೇಶ್ವರಿ, ಕೌಮಾರಿ, ವೈಷ್ಣವಿಯರು ಹಾಸನ ಒಂದು ಭಾಗದಲ್ಲಿ ನೆಲೆಸಿ ಹಾಸನಾಂಬೆಯೆಂದು ಪ್ರಸಿದ್ದಿಯಾರೇ, ಹಾಸನದ ದೇವಿಗೆರೆ ಸಮೀಪ ನೆಲೆಸಿದ ವಾರಾಹಿ, ಇಂದ್ರಾಣಿ, ಚಾಮುಂಡಿ ಕೂಡ ಭಕ್ತರಿಗೆ ಹರಸುತ್ತಿದ್ದಾರೆ. ಹೀಗೆ ವಿಭಿನ್ನರೀತಿಯಲ್ಲಿ ಭಕ್ತರಿಗೆ ದರ್ಶನ ಕರುಣಿಸೋ ಹಾಸನಾಂಬೆ ಹಾಗು ಕೆಂಚಾಂಬೆಯರನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ಬರುತ್ತಾರೆ. ಕೆಂಚಾಂಬೆಯ ವಿಶೇಷ ಅಂದರೆ ವಾರದಲ್ಲಿ ಮೂರು ದಿನ ದರ್ಶನ, ವರ್ಷದಲ್ಲಿ ಮೂರು ಬಾರಿ ಜಾತ್ರೆ ನಡೆಯುತ್ತೆ. ವೈಶಾಖ ಮಾಸದಲ್ಲಿ ಎರಡು, ಕಾರ್ತಿಕ ಮಾಸದಲ್ಲಿ ಹಾಸನಾಂಬೆ ಉತ್ಸವದ ಬಳಿಕ ಮತ್ತೊಂದು ಜಾತ್ರೆ ಮಾಡಲಾಗುತ್ತದೆ.

ಹಾಸನದಿಂದ ಸಕಲೇಶಪುರ ರಸ್ತೆಯಲ್ಲಿ ಬಾಳ್ಳುಪೇಟೆಯಿಂದ 15 ಕಿಲೋಮೀಟರ್ ಸಾಗಿದರೇ ಕೆಂಚಾಂಬ ಸನ್ನಿದಾನ ಸಿಗುತ್ತೆ. ಹಾಸನಾಂಬೆಯ ಸಹೋದರಿ ಎನ್ನೋ ಕಾರಣಕ್ಕಾಗಿಯೇ ಈ ಭಾಗದ ಜನರು ಶಕ್ತದೇವತೆ ಎಂದು ಪೂಜಿಸುತ್ತಾರೆ. ವಾರದ ಬುಧವಾರ, ಶುಕ್ರವಾರ ಹಾಗು ಭಾನುವಾರಗಳಂದು ಇಲ್ಲಿಗೆ ಸಹಸ್ರಾರು ಭಕ್ತರು ಬಂದು ಪೂಜೆ ಮಾಡುತ್ತಾರೆ. ಶತಮಾನಗಳ ಇತಿಹಾಸ ಹೊಂದಿರೋ ಶಕ್ತಿದೇವತೆಯ ಸನ್ನಿದಿಯಲ್ಲಿ ಹಲವು ಕೊರತೆಗಳು ಕಾಡುತ್ತಿವೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ಮೂಲಭೂತ ಸೌಲಭ್ಯ ನೀಡೋ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯದೋರಣೆ ತಳೆದಿದೆ ಎನ್ನೋ ಅಸಮಧಾನ ಭಕ್ತರಲ್ಲಿದೆ.

ಹಾಗಾಗಿಯೇ ಈ ಬಾರಿ 2 ಕೋಟಿ ವೆಚ್ಚದ ಕ್ರಿಯಾಯೊಜನೆ ತಯಾರಿಸಿ ಮುಜರಾಯಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ನೀಡಲು ಬೇಕಾದ ಕ್ರಮಗಳನ್ನ ಕೈಗೊಳ್ಳಲು ಮನವಿ ಮಾಡಲಾಗಿದ್ದು, ಶಕ್ತದೇವತೆಯ ಸನ್ನಿಧಾನ ಮತ್ತಷ್ಟು ಅಭಿವೃದ್ದಿಯಾಗಲಿ ಎಂದು ಸ್ಥಳೀಯ ಶಾಸಕರು ಒತ್ತಾಯಿಸಿದ್ದಾರೆ.

ವರದಿ-ಮಂಜುನಾಥ್.ಕೆ.ಬಿ ಟಿವಿ9 ಹಾಸನ

Published On - 4:23 pm, Mon, 31 October 22