Hassan Accident: ಅಪಘಾತದಲ್ಲಿ ಸತ್ತ 9 ಮಂದಿ ಒಂದೇ ಕುಟುಂಬ, ಮಕ್ಕಳ ಶವ ಕಂಡು ಬಿಕ್ಕಿಬಿಕ್ಕಿ ಅಳುತ್ತಿರುವ ಸಂಬಂಧಿಕರು

ಲಾರಿ ಚಾಲಕ ಮಿಲ್ಕ್​ ಟ್ಯಾಂಕರ್ ಅನ್ನು ರಾಂಗ್​ ರೂಟ್​ನಲ್ಲಿ ತಂದಿದ್ದರಿಂದ ಟೆಂಪೊ ಹಾಲಿನ ಲಾರಿ, ಸರ್ಕಾರಿ ಬಸ್​ಗೆ ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Hassan Accident: ಅಪಘಾತದಲ್ಲಿ ಸತ್ತ 9 ಮಂದಿ ಒಂದೇ ಕುಟುಂಬ, ಮಕ್ಕಳ ಶವ ಕಂಡು ಬಿಕ್ಕಿಬಿಕ್ಕಿ ಅಳುತ್ತಿರುವ ಸಂಬಂಧಿಕರು
ಮೃತ ಮಕ್ಕಳಾದ ಸಮರ್ಥ, ಸೃಷ್ಟಿ, ತನ್ಮಯ್ ಮತ್ತು ಧ್ರುವ, ವಂದನಾ
Image Credit source: Tv9
Edited By:

Updated on: Oct 16, 2022 | 9:15 AM

ಹಾಸನ: ಅರಸೀಕೆರೆ ತಾಲ್ಲೂಕಿನ ಗಾಂಧಿನಗರ ಬಳಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟ ಪ್ರಕರಣದಲ್ಲಿ ರಾಂಗ್​ ರೂಟ್​ನಲ್ಲಿ ಬಂದ ಹಾಲಿನ ಲಾರಿಯೇ ಮುಖ್ಯ ದೋಷಿ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಲಾರಿ ಚಾಲಕ ಮಿಲ್ಕ್​ ಟ್ಯಾಂಕರ್ ಅನ್ನು ರಾಂಗ್​ ರೂಟ್​ನಲ್ಲಿ ತಂದಿದ್ದರಿಂದ ಟೆಂಪೊ ಹಾಲಿನ ಲಾರಿ, ಸರ್ಕಾರಿ ಬಸ್​ಗೆ ಡಿಕ್ಕಿ ಹೊಡೆಯಿತು. ಜಿಗ್​-ಜಾಗ್ ರೀತಿಯಲ್ಲಿ ಟೆಂಪೊದ ಹಿಂದೆ ಮತ್ತು ಮುಂದೆ ಹಾನಿಯಾಯಿತು. ಹೀಗಾಗಿಯೇ ಸಾವಿನ ಸಂಖ್ಯೆ ಹೆಚ್ಚಾಯಿತು. ಬಸ್​ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಹಾಗೂ ಟೆಂಪೊ ಡಿಕ್ಕಿಯಾಗಿದ್ದರಿಂದ ಬಸ್​ನಲ್ಲಿದ್ದ ಹಲವರಿಗೂ ಗಾಯಗಳಾಗಿವೆ ಎಂದು ಬಸ್​ನಲ್ಲಿದ್ದ ಪ್ರಯಾಣಿಕ ಮತ್ತು ಅಪಘಾತದ ಪ್ರತ್ಯಕ್ಷದರ್ಶಿ ಜಾವಗಲ್ ಗ್ರಾಮದ ಯತೀಶ್​ ‘ಟಿವಿ9’ಗೆ ಪ್ರತಿಕ್ರಿಯಿಸಿದರು. ಅಪಘಾತಕ್ಕೀಡಾದ ಟಿಟಿ ವಾಹನದಲ್ಲಿ ಒಟ್ಟು 16 ಮಂದಿ ಪ್ರಯಾಣಿಸುತ್ತಿದ್ದರು. ನಿನ್ನೆ ರಾತ್ರಿ 10.50 ರ ವೇಳೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದರು.

ಮುಗಿಲು ಮುಟ್ಟಿದ ಆಕ್ರಂದನ

ಅರಸೀಕೆರೆ ಶವಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ನಾಲ್ವರು ಪುಟ್ಟ ಮಕ್ಕಳು ಮೃತಪಟ್ಟಿರುವುದು ಎಂಥವರ ಮನಸ್ಸನ್ನೂ ಕರಗಿಸುತ್ತಿದೆ. ಪುಟ್ಟ ಮಕ್ಕಳ ಮೃತದೇಹ ಕಂಡವರು ಬಿಕ್ಕಿಬಿಕ್ಕಿ ಅಳುತ್ತದ್ದಾರೆ. ನಿನ್ನೆ-ಮೊನ್ನೆಯವರೆಗೂ ಮನೆಯಂಗಳದಲ್ಲಿ ಆಡಿಕೊಂಡಿದ್ದ ಪುಟಾಣಿಗಳು ಎರಡು ದಿನಗಳ ಹಿಂದಷ್ಟೇ ಹಬ್ಬ ಮುಗಿಸಿ ಧರ್ಮಸ್ಥಳಕ್ಕೆ ಹೋಗಿದ್ದರು. ಈಗ ನೋಡಿದರೆ ಹೆಣಗವಾಗಿ ವಾಪಸ್ ಬಂದಿದ್ದಾರೆ ಎಂದು ಸಂಬಂಧಿಕರು ಒಂದೇ ಸಮನೆ ಅಳುತ್ತಿದ್ದಾರೆ.

Accident: ವಿಧಿಯ ಆಟಕ್ಕೆ 9 ಮಂದಿ ಬಲಿ ಹೇಗಿದೆ ನೋಡಿ ಘಟನಾ ಸ್ಥಳ | Tv9 Kannadaಒಂದೇ ಗ್ರಾಮದ 7 ಜನ ಸಾವು

ಅಪಘಾತದಲ್ಲಿ ಮೃತಪಟ್ಟ 9 ಜನರ ಪೈಕಿ 7 ಮಂದಿ ಸಾಲಾಪುರ ಗ್ರಾಮಕ್ಕೆ ಸೇರಿದವರು. ಇತರ ಇಬ್ಬರು ದೊಡ್ಡೇನಹಳ್ಳಿ ಗ್ರಾಮದವರು. ಧರ್ಮಸ್ಥಳ, ಸುಬ್ರಹ್ಮಣ್ಯ, ಹಾಸನಾಂಬೆ ದರ್ಶನ ಮುಗಿಸಿ ವಾಪಸ್ ಊರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ದೊಡ್ಡೇನಹಳ್ಳಿಯ ಮಕ್ಕಳಾದ ಧ್ರುವ (2) ಹಾಗೂ ತನ್ಮಯ್ (10), ಸಾಲಾಪುರದ ಲೀಲಾವತಿ (50), ಚೈತ್ರಾ (33), ಸಮರ್ಥ (10) ಡಿಂಪಿ (12), ವಂದನಾ (20), ದೊಡ್ಡಯ್ಯ (60), ಭಾರತಿ (50) ಮೃತರು.

ಒಂದೇ ಕುಟುಂಬದ ಸದಸ್ಯರು

ದಸರಾ ರಜೆಯ ಹಿನ್ನೆಲೆಯಲ್ಲಿ ಅಣ್ಣ-ತಮ್ಮಂದಿರ ಕುಟುಂಬದ ಸದಸ್ಯರು ಒಂದೇ ವಾಹನದಲ್ಲಿ ಧಾರ್ಮಿಕ ಪ್ರವಾಸ ಹೋಗಿಧ್ದರು. ಅಪಘಾತದಲ್ಲಿ ದೊಡ್ಡಯ್ಯ ಹಾಗೂ ಪತ್ನಿ ಭಾರತಿ ಮೃತಪಟ್ಟಿದ್ದಾರೆ. ದೊಡ್ಡಯ್ಯ ಅವರ ಸಹೋದರ ರಮೇಶ್, ಅವರ ಪತ್ನಿ ಲೀಲಾವತಿ ಮತ್ತು ಮೊಮ್ಮಕ್ಕಳಾದ ಧ್ರುವ ಮತ್ತು ತನ್ಮಯ್ ಸಹ ಮೃತಪಟ್ಟಿದ್ದಾರೆ. ಈ ಇಬ್ಬರೂ ಮಕ್ಕಳ ತಾಯಿ ಮಂಜುಳಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಟಿಟಿ ವಾಹನ ಚಲಾಯಿಸುತ್ತಿದ್ದ ದೊಡ್ಡಯ್ಯ ಅವರ ಪುತ್ರ ಶಶಿಕುಮಾರ್ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.

ದೊಡ್ಡಯ್ಯ ಅವರ ಮತ್ತೊಬ್ಬ ಸಹೋದರ ಕುಮಾರಸ್ವಾಮಿ ಅವರ ಪುತ್ರಿ ಚೈತ್ರಾ ಮತ್ತು ಚೈತ್ರಾ ಅವರ ಮಕ್ಕಳಾದ ಸಮರ್ಥ ಎಸ್.ರಾಯ್ ಮತ್ತು ಸೃಷ್ಟಿ ಕೂಡ ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ ಅವರ ಬಾವಮೈದುನನ ಮಗಳು ವಂದನಾ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಸಾಲಾಪುರದ ಏಳು ಹಾಗೂ ದೊಡ್ಡೇನಹಳ್ಳಿಯ ಇಬ್ಬರು ಸೇರಿದ್ದಾರೆ. ರಮೇಶ್ ಪುತ್ರಿ ಮಂಜುಳಾರನ್ನು ದೊಡ್ಡೇನಹಳ್ಳಿಯ ಸಂತೋಷ ಜೊತೆ ಮದುವೆ ಮಾಡಿಕೊಡಲಾಗಿತ್ತು.

ತಾಯಿ ಜೊತೆ ಮಕ್ಕಳೊಂದಿಗೆ ಧಾರ್ಮಿಕ ಕ್ಷೇತ್ರದ ದರ್ಶನಕ್ಕೆ ಮಂಜುಳಾ ತೆರಳಿದ್ದರು. ಅಪಘಾತದಲ್ಲಿ ಮಂಜುಳಾರ ತಾಯಿ ಹಾಗೂ ಮಕ್ಕಳು ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ ಪುತ್ರಿ ಚೈತ್ರಾ ಅವರ ಪತಿ ಶ್ರೀನಿವಾಸ್ ಎರಡು ವರ್ಷಗಳ ಹಿಂದಷ್ಟೇ ಕೊವಿಡ್​ನಿಂದ ಮೃತಪಟ್ಟಿದ್ದರು. ಸಾರಿಗೆ ಇಲಾಖೆಯಲ್ಲಿ ಶ್ರೀನಿವಾಸ್ ಅವರ ಕೆಲಸವನ್ನು ಅನುಕಂಪದ ಆಧಾರದ ಮೇಲೆ ಚೈತ್ರಾ ಅವರಿಗೆ ಕೊಡಲಾಗಿತ್ತು. ಮುಂದಿನ ವಾರ ಅವರು ಕೆಲಸಕ್ಕೆ ಹಾಜರಾಗಬೇಕಿತ್ತು. ಆದರೆ ಅದಕ್ಕೆ ಮೊದಲೇ ಅವರು ಮಕ್ಕಳ ಸಹಿತ ಮೃತಪಟ್ಟಿದ್ದಾರೆ.

Accident: ಡಿಕ್ಕಿ ರಭಸಕ್ಕೆ ಸಂಪೂರ್ಣ ಅಪ್ಪಚ್ಚಿಯಾದ ಟಿಟಿ ವಾಹನ | Tv9 Kannadaಸಿಎಂ ವಿಷಾದ

ಅಪಘಾತದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Accident: ಅಪಘಾತ ಸ್ಥಳವನ್ನ ನೋಡಿದ ಸ್ಥಳೀಯರು ಹೇಳ್ತಿರೋದು ಒಂದೇ... | Tv9 Kannada

 

Published On - 9:14 am, Sun, 16 October 22

Follow Us