“ನಾನು ಹೆಣ್ಣು, ನನಗೆ ಮೇಲಧಿಕಾರಿಗಳು ಗೊತ್ತು”: ಗಂಡನಿಗೆ ಪ್ರತಿದಿನ ಹೆಂಡತಿಯಿಂದ ಕಿರುಕುಳ

ಹಾಸನದ ಅರಕಲಗೂಡಿನಲ್ಲಿ ಪತ್ನಿ ಅರ್ಪಿತಾ ವಿರುದ್ಧ ಪತಿ ಶಶಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಆಸ್ತಿಗಾಗಿ ಪತ್ನಿ ಕಿರುಕುಳ ನೀಡುತ್ತಿದ್ದು, ನನಗೆ ಮೇಲಧಿಕಾರಿಗಳು ಗೊತ್ತು, ಇಡೀ ಕುಟುಂಬವನ್ನು ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಶಶಿಕುಮಾರ್ ಹೇಳಿದ್ದಾರೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ವಿಡಿಯೋ ಹಾಗೂ ಆಡಿಯೋ ಸಾಕ್ಷ್ಯಗಳು ತಮ್ಮ ಬಳಿ ಇವೆ ಎಂದು ಪತಿ ತಿಳಿಸಿದ್ದಾರೆ.

ನಾನು ಹೆಣ್ಣು, ನನಗೆ ಮೇಲಧಿಕಾರಿಗಳು ಗೊತ್ತು: ಗಂಡನಿಗೆ ಪ್ರತಿದಿನ ಹೆಂಡತಿಯಿಂದ ಕಿರುಕುಳ
ಹಾಸನ ದಾಂಪತ್ಯ ಕಲಹ
Edited By:

Updated on: Feb 10, 2026 | 8:54 PM

ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ದಾಂಪತ್ಯ ಕಲಹದ ಪ್ರಕರಣವೊಂದು ಈಗ ಸಾರ್ವಜನಿಕ ಗಮನ ಸೆಳೆದಿದೆ. ಪತಿ ಶಶಿಕುಮಾರ್ ಅವರು ತಮ್ಮ ಪತ್ನಿ ಅರ್ಪಿತಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಆಸ್ತಿಗಾಗಿ ಪತ್ನಿ ತಮ್ಮ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ. ಶಶಿಕುಮಾರ್ ಮತ್ತು ಅರ್ಪಿತಾ ಪ್ರೀತಿಸಿ ಮದುವೆಯಾಗಿದ್ದು, ಮದುವೆಯ ನಂತರ ಮೊದಲ ಎರಡು ವರ್ಷಗಳು ಸಂತೋಷದಿಂದ ಕಳೆದಿದ್ದವು ಎಂದು ಶಶಿಕುಮಾರ್ ಹೇಳಿದ್ದಾರೆ. ಆದರೆ, ಪತ್ನಿ ಅರ್ಪಿತಾ ತನ್ನ ತಂದೆ-ತಾಯಿಯ ಮನೆಗೆ ಭೇಟಿ ನೀಡಿ ಬಂದ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಪತ್ನಿಯ ಪೋಷಕರು ಪ್ರತ್ಯೇಕವಾಗಿರಲು ಸಲಹೆ ನೀಡಿದ ನಂತರ, ಅರ್ಪಿತಾ ಮನೆಗೆ ಬಂದು ಪ್ರತ್ಯೇಕ ಸಂಸಾರ ನಡೆಸುವಂತೆ ಪೀಡಿಸಲು ಪ್ರಾರಂಭಿಸಿದರು ಎಂದು ಶಶಿಕುಮಾರ್ ಆರೋಪಿಸಿದ್ದಾರೆ. “ನಾನು ನನ್ನ ಅಪ್ಪ-ಅಮ್ಮನನ್ನು ನೋಡಿಕೊಳ್ಳಬೇಕು ಮತ್ತು ನಿನ್ನನ್ನೂ ನೋಡಿಕೊಳ್ಳಬೇಕು ಎಂದಾಗ ಬೇರೆ ಕಡೆ ಪ್ರತ್ಯೇಕವಾಗಿ ಹೋಗಿ ವಾಸಿಸೋಣ ಎಂದು ಹೇಳುತ್ತಿದ್ದಾಳು, ಇದಕ್ಕೆ ನಾನು ಒಪ್ಪಿಲ್ಲ, ಮೇಲ್ಮಹಡಿಯಲ್ಲಿ ರೂಮ್​​​​ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಹಣಕಾಸಿನ ತೊಂದರೆಯಿಂದ ತಕ್ಷಣ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಸಾಲ ಮಾಡಿ ಸಣ್ಣದಾಗಿ ರೂಮ್​​​​ ಮಾಡಿಕೊಡುವಂತೆ ಒತ್ತಾಯಿಸಿದ್ದರು ಎಂದು ಶಶಿಕುಮಾರ್ ವಿವರಿಸಿದ್ದಾರೆ.

ಈ ಎಲ್ಲದರ ನಡುವೆ, ಅರ್ಪಿತಾ ಅವರ ಕಿರುಕುಳ ಹೆಚ್ಚಾಯಿತು. ಅರ್ಪಿತಾ ಅವರು “ನಾನು ಹೆಣ್ಣು, ನನಗೆ ಮೇಲಧಿಕಾರಿಗಳು ಗೊತ್ತು, ಎಸ್ಪಿ ಕಚೇರಿಯವರು ಗೊತ್ತು, ಬೆಂಗಳೂರಿನಿಂದಲೂ ನನಗೆ ಸಂಪರ್ಕಗಳಿವೆ” ಎಂದು ಹೇಳಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ಏನೇ ತೊಂದರೆಯಾದರೂ ನಾನೇ, ನೀವೆಲ್ಲ ಇಡೀ ಕುಟುಂಬವನ್ನು ಜೈಲಿಗೆ ಕಳಿಸುತ್ತೇನೆ, ಕೋರ್ಟಿಗೆ ಕಳಿಸುತ್ತೇನೆ, ನಮಗೆ ಏನು ಮಾಡಕ್ಕಾಗಲ್ಲ” ಎಂದು ನಿರಂತರವಾಗಿ ಬೆದರಿಸುತ್ತಿದ್ದಾರೆ. ಅಲ್ಲದೆ, “ಡೆತ್ ನೋಟ್ ಬರೆಯುತ್ತೇನೆ” ಎಂದು ಹೇಳಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಈ ಪ್ರಕರಣ ಹಲವಾರು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ನ್ಯಾಯಾಲಯದಲ್ಲೂ ವಿಚಾರಣೆ ನಡೆಯುತ್ತಿದೆ. ನ್ಯಾಯಾಧೀಶರು ಸಹ ಅರ್ಪಿತಾ ಅವರನ್ನು ಕರೆದುಕೊಂಡು ಹೋಗಲು ಹಲವಾರು ಬಾರಿ ಸೂಚಿಸಿದ್ದರೂ, ನ್ಯಾಯಾಲಯದಲ್ಲಿ ಒಪ್ಪಿಗೆ ನೀಡಿ ಮನೆಗೆ ಬಂದ ನಂತರ ಜಗಳ ಮಾಡುತ್ತಾಳೆ ಎಂದು ಶಶಿಕುಮಾರ್ ಹೇಳಿದ್ದಾರೆ. ತಮ್ಮ ತಂದೆ-ತಾಯಿ ಮತ್ತು ಅಕ್ಕ-ತಂಗಿಯರಿಗೂ ಸಹ ಅರ್ಪಿತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಚಪ್ಪಲಿಯಿಂದ ಹೊಡೆಯಲು ಪ್ರಯತ್ನಿಸಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ತಾಯಿಗೆ ಚಪ್ಪಲಿಯಿಂದ ಹೊಡೆಯಲು ಹೋಗಿ, ಗಲಾಟೆ ಸೃಷ್ಟಿಸಿ ಪತ್ರಕರ್ತರನ್ನು ಕರೆಯಿಸಿರುವುದಾಗಿಯೂ ಹೇಳಿದ್ದಾಳೆ ಎಂದು ಶಶಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: “ನಿಮ್ಮ ಮಗಳು ಶಿವನ ಪಾದ ಸೇರಿದ್ದಾಳೆ ಬಂದು ನೋಡಿ” ಎಂದ ಅಳಿಯ: ಇದಕ್ಕೆಲ್ಲ ಇವನೇ ಕಾರಣ

ಈ ಎಲ್ಲಾ ಘಟನೆಗಳು ಉದ್ದೇಶಪೂರ್ವಕವಾಗಿದ್ದು, ಹಣ ಮತ್ತು ಆಸ್ತಿಗಾಗಿ ಅರ್ಪಿತಾ ನಾಟಕ ಮಾಡುತ್ತಿದ್ದಾಳೆ ಎನ್ನುವುದು ಶಶಿಕುಮಾರ್ ಅವರ ಪ್ರಮುಖ ಆರೋಪ. ನನ್ನ ಬಳಿ ಪತ್ನಿಯ ಬೆದರಿಕೆಗಳು, ಅವಾಚ್ಯ ಮಾತುಗಳು ಮತ್ತು ಕಿರುಕುಳದ ವಿಡಿಯೋ ಹಾಗೂ ಆಡಿಯೋ ಕ್ಲಿಪ್‌ಗಳಿವೆ ಎಂದು ಅವರು ತಿಳಿಸಿದ್ದಾರೆ. ಈ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧರಿರುವುದಾಗಿ ಶಶಿಕುಮಾರ್ ಹೇಳಿದ್ದಾರೆ. ಕುಟುಂಬವು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಸಮಾಜದಲ್ಲಿ ತಮ್ಮನ್ನು ಕೀಳಾಗಿ ಕಾಣಿಸುವ ಉದ್ದೇಶದಿಂದ ಈ ಎಲ್ಲಾ ಸನ್ನಿವೇಶಗಳನ್ನು ಅರ್ಪಿತಾ ಸೃಷ್ಟಿಸುತ್ತಿದ್ದಾರೆ ಎಂದು ಶಶಿಕುಮಾರ್ ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 pm, Tue, 10 February 26