ಹಾಸನ: ನಾಲ್ಕು ದಿನದ ಪುಟ್ಟ ಕಂದಮ್ಮನನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಝೀರೋ ಟ್ರಾಫಿಕ್ ಮೂಲಕ ಹಾಸನದಿಂದ ಸ್ಥಳಾಂತರ ಮಾಡಲಾಗಿದೆ. ಏಪ್ರಿಲ್ 17 ರಂದು ಮಂಡ್ಯ ಜಿಲ್ಲೆ ಮೂಲದ ಶ್ವೇತ, ತ್ರಿವೇದಿ ದಂಪತಿಗೆ ಗಂಡು ಮಗು ಜನಿಸಿತ್ತು. ಹುಟ್ಟಿದ ಮಗುವನ್ನ ವೈದ್ಯರು ಪರೀಕ್ಷೆ ನಡೆಸಿದಾಗ ಹೃದಯ ಹಾಗು ಕಿಡ್ನಿಯಲ್ಲಿ ಸಮಸ್ಯೆ ಇರೋದು ಪತ್ತೆಯಾಗಿದೆ.
ಹಾಸನದಲ್ಲಿ ಮಕ್ಕಳ ಹೃದಯ ತಜ್ಞರು ಇಲ್ಲದ ಕಾರಣ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಸ್ಥಳಾಂತರಕ್ಕೆ ವೈದ್ಯರು ಸಲಹೆ ನೀಡಿದ್ದಾರೆ. ಈ ಬಗ್ಗೆ ನಿನ್ನೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದು ಇಂದು ಬೆಳಿಗ್ಗೆ ಮಗು ಸ್ಥಳಾಂತರಕ್ಕೆ ಅನುಮತಿ ಸಿಕ್ಕಿದೆ. ಆಂಬುಲೆನ್ಸ್ ಚಾಲಕ ಮಧುಸೂಧನ್ ತಮ್ಮ ಇನ್ನೋವಾ ಆಂಬುಲೆನ್ಸ್ ನಲ್ಲಿ ಮಗುವನ್ನ ಹೊತ್ತು ಸಾಗಿದ್ದಾರೆ. ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆ ಮಕ್ಕಳ ತಜ್ಞರು ನೀಡಿದ ಸಲಹೆಯಂತೆ ಮಗು ಸ್ಥಳಾಂತರ ಮಾಡಲಾಗಿದೆ. ನಾಲ್ಕು ದಿನಗಳಿಂದ ಹಾಸನದ ಮಕ್ಕಳ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಇಂದು ವೆಂಟಿಲೇಟರ್ ಮೂಲಕವೇ ಮಗುವನ್ನು ಸ್ಥಳಾಂತರ ಮಾಡಲಾಗಿದೆ. ಎರಡು ಆಂಬುಲೆನ್ಸ ಹಿಂಬಾಲಿಸಿ ಮಗುಹೊತ್ತ ಆಂಬುಲೆನ್ಸ ಬೆಂಗಳೂರಿನತ್ತ ಸಾಗಿದೆ. ಹಾಸನದಿಂದ ಚನ್ನರಾಯಪಟ್ಟಣ, ಕುಣಿಗಲ್ ಮಾರ್ಗದಲ್ಲಿ ಆಂಬುಲೆನ್ಸ ಸಾಗಲಿದ್ದು ದಾರಿಯುದ್ದಕ್ಕು ಪೊಲೀಸರು ಎಸ್ಕಾರ್ಟ್ ಮಾಡಲಿದ್ದಾರೆ. ಈ ಹಿಂದೆ ಮೂರು ಪುಟ್ಟ ಮಕ್ಕಳನ್ನ ಬೆಂಗಳೂರಿಗೆ 1 ಗಂಟೆ 28 ನಿಮಿಷಕ್ಕೆ ತಲುಪಿಸಿರೊ ಮಧುಸೂದನ್ ಇಂದೂ ಕೂಡ ಇದೇ ಸವಾಲಿನೊಂದಿಗೆ ಮಗು ಹೊತ್ತು ಆಂಬುಲೆನ್ಸ ಚಾಲಕ ಹೊರಟಿದ್ದಾರೆ. ಹೇಗಾದರು ಮಾಡಿ ಮಗುವನ್ನ ಉಳಿಸಿಕೊಳ್ಳಬೇಕು ಎನ್ನೋ ಹಂಬಲದಿಂದ ಪೋಷಕರು ಮಗುವನ್ನು ಬೆಂಗಳೂರಿಗೆ ಕರೆದೊಯ್ದಿದ್ದು ಪುಟ್ಟ ಕಂದಮ್ಮ ಆದಷ್ಟು ಬೇಗ ಆರೋಗ್ಯವಾಗಿ ಬರಲಿ ಎನ್ನೋದು ಎಲ್ಲರ ಹಾರೈಕೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ, ಸಿಎಂ ಬೊಮ್ಮಾಯಿಯವರಿಂದ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ; ಮೈಸೂರಿನಲ್ಲಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ