ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾರಂಭ: ಏನಿದು ರೇಡಿಯೋ ಕಾಲರ್?

| Updated By: ಆಯೇಷಾ ಬಾನು

Updated on: Nov 24, 2023 | 12:38 PM

ಜೂನ್29 ರಂದು ಒಂಭತ್ತು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಗೆ ಸರ್ಕಾರ ಅನುಮತಿ ನೀಡಿತ್ತು. ಆದರೆ ವಿವಿಧ ಕಾರಣ ನೀಡಿ ಅರಣ್ಯ ಇಲಾಖೆ ವಿಳಂಬ ಮಾಡಿತ್ತು. ಸದ್ಯ ಈಗ ಇದಕ್ಕೆ ಕಾಲ ಕೂಡಿ ಬಂದಿದ್ದು ದುಬಾರೆ ಸಾಕಾನೆ ಶಿಬಿರದಿಂದ 4, ಮತ್ತಿಗೋಡಿನಿಂದ 2, ನಾಗರಹೊಳೆ ಆನೆಚೌಕಿ ಶಿಬಿರದಿಂದ 2 ಸೇರಿ ಒಟ್ಟು 8 ಸಾಕಾನೆಗಳ ಮೂಲಕ ಕಾರ್ಯಚರಣೆ ಆರಂಭವಾಗಿದೆ.

ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾರಂಭ: ಏನಿದು ರೇಡಿಯೋ ಕಾಲರ್?
ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾರಂಭ
Follow us on

ಹಾಸನ, ನ.24: ಸರ್ಕಾರದ ಆದೇಶ ಬಂದು ಐದು ತಿಂಗಳ ನಂತರ ಇದೀಗ ಪುಂಡಾನೆಗಳಿಗೆ ರೇಡಿಯೋ ಕಾಲರ್ (Radio Collar) ಅಳವಡಿಕೆ ಕಾರ್ಯಾಚರಣೆ ಆರಂಭವಾಗಿದೆ. ದುಬಾರೆ, ಮತ್ತಿಗೋಡು, ಆನೆ ಚೌಕಿಯಿಂದ 8 ಸಾಕಾನೆಗಳನ್ನು ಬಳಸಿ ನ.24 ರಿಂದ ಡಿ.15 ರವರೆಗೆ ಕಾರ್ಯಾಚರಣೆ ನಡೆಸಿ ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲು ಅರಣ್ಯ ಇಲಾಖೆ (Forest Department) ಮುಂದಾಗಿದೆ. ಇಂದಿನಿಂದ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲ್ಲೂಕುಗಳಲ್ಲಿ 21 ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ.

ಹಾಸನ ಜಿಲ್ಲೆಯ ಬೇಲೂರು, ಆಲೂರು ಸಕಲೇಶಪುರ ಭಾಗದಲ್ಲಿ ಬೀಡು ಬಿಟ್ಟಿರೊ ಕಾಡಾನೆ ಹಿಂಡಿನ ಚಲನವಲನ ವೀಕ್ಷಣೆಗಾಗಿ ರೇಡಿಯೋ ಕಾಲರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಐದು ತಿಂಗಳ ಹಿಂದೆಯೇ ರೇಡಿಯೋ ಕಾಲರ್ ಅಳವಡಿಕೆಗೆ ಅನುಮತಿ ಸಿಕ್ಕಿತ್ತು. ಮಳೆಕಾರಣ ಹಾಗು ಸಾಕಾನೆಗಳು ದಸರಾಕ್ಕೆ ಹೋಗಿದ್ದ ಕಾರಣ ಕಾರ್ಯಾಚರಣೆ ತಡವಾಗಿತ್ತು. ಇಂದಿನಿಂದ ಗುಂಪಿನಲ್ಲಿರೊ ಹೆಣ್ಣಾನೆ ಹಾಗು ಒಂಟಿಯಾಗಿ ಓಡಾಡೊ ಸಲಗಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗುತ್ತಿದೆ.

ಡಿಸಿಎಫ್ ಮೋಹನ್ ಕುಮಾರ್, ಹಾಸನ ಎಸಿಎಫ್ ಪ್ರಭು ಆಯ್ ಹಾಗು ಸಕಲೇಶಪುರ ಎಸಿಎಫ್ ಮಹದೇವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ಅಭಿಮನ್ಯು, ಭೀಮ, ಅರ್ಜುನ, ಪ್ರಶಾಂತ, ಸೇರಿ ಎಂಟು ಸಾಕಾನೆಗಳು ಭಾಗಿಯಾಗಿವೆ. ಒಟ್ಟು 21 ದಿನ ಕಾರ್ಯಾಚರಣೆಗೆ ಸಿದ್ದತೆ ನಡೆದಿದ್ದು 9 ಆನೆಗಳಿಗೆ ರೇಡಿಯೋ ಕಾಲರ್ ಹಾಗು ಜನರಲ್ಲಿ ಜೀವ ಭಯ ಸೃಷ್ಟಿ ಮಾಡಿರೊ ಐದು ಗಂಡಾನೆಗಳ ಸೆರೆ ಹಿಡಿದು ಸ್ಥಳಾಂತರಕ್ಕೂ ಕ್ರಮ ಕೈಗೊಳ್ಳಲಾಗುತ್ತೆ. ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ಗಜಪಡೆ ಉಪಟಳ ತಡೆಗೆ ಜನರು ಆಗ್ರಹಿಸಿದ್ರು, ಕಳೆದ ಒಂದು ತಿಂಗಳಿಂದ ಬೇಲೂರು ತಾಲ್ಲೂಕಿನ ಬಿಕ್ಕೋಡು ಅರೆಹಳ್ಕಿ ಭಾಗದಲ್ಲಿ ಆನೆಗಳ ದಾಂದಲೆ ಹೆಚ್ಚಿತ್ತು.

ಇದನ್ನೂ ಓದಿ: ಹನಿ ಟ್ಯ್ರಾಪ್ ಮೂಲಕ​ ಕಾಡಾನೆಗಳ ಸೆರೆಗೆ ಮುಂದಾದ ಅರಣ್ಯ ಇಲಾಖೆ: ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅವಳವಡಿಕೆ

ಕಾಡಾನೆಗಳು ಕಾಫಿ, ಬಾಳೆ, ಅಡಿಕೆ ಬೆಳೆ‌ನಾಶ ಮಾಡುತ್ತಿವೆ. ಗುಂಪು ಗುಂಪಾಗಿ ಓಡಾಡುತ್ತಾ, ಗ್ರಾಮಗಳ ಸನಿಹವೇ ಬಂದು ಜೀವ ಭಯ ಸೃಷ್ಟಿ ಮಾಡುತ್ತಿವೆ. ಆನೆಗಳ ಸಂಚಾರದಿಂದ ಜನರು ತಮ್ಮ‌ಕಾಫಿ ತೋಟಕ್ಕೆ ತೆರಳಲು ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕಾರ್ಮಿಕರು ಕೆಲಸಕ್ಕೆ ತೆರಳಲಾಗದೆ ಪರಿತಪಿಸೊ‌ ಸ್ಥಿತಿ ಬಂದಿದೆ. ಇಟಿಎಫ್, ಆರ್.ಆರ್.ಟಿ ಸಿಬ್ಬಂದಿ ನಿತ್ಯವೂ ಆನೆಗಳ ಚಲನವಲನ ವೀಕ್ಷಣೆ ಮಾಡುತ್ತಿದ್ದರೂ ಸಮಸ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿಯೇ ಕಾಡಾನೆಗಳ ಸಂಪೂರ್ಣ ಸ್ಥಳಾಂತರಕ್ಕೆ ಜನರು ಆಗ್ರಹಿಸಿದ್ದಾರೆ. ತಾತ್ಕಾಲಿಕ ಕ್ರಮವಾಗಿ ರೇಡಿಯೋ ಕಾಲರಿಂಗ್ ಹಾಗೂ ಕೆಲ‌ ಪುಂಡಾನೆ ಸೆರೆ ಹಿಡಿದು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಏನಿದು ರೇಡಿಯೋ ಕಾಲರ್

ಆನೆಗಳ ಟ್ರ್ಯಾಕಿಂಗ್‌ಗೆ ರೇಡಿಯೋ ಕಾಲರ್‌ ವ್ಯವಸ್ಥೆ ಸಹಕಾರಿಯಾಗಿದೆ. ಪುಂಡಾನೆಗಳ ಚಲನವಲನದ ಮೇಲೆ ನಿಗಾ ಇಡಲು ಇದು ಸಹಾಯ ಮಾಡುತ್ತೆ. ಆನೆಗಳ ಹಿಂಡು ಯಾವ ದಿಕ್ಕಿನತ್ತ ಸಂಚರಿಸುತ್ತಿದೆ, ಯಾವ ಪ್ರದೇಶದಲ್ಲಿವೆ ಎನ್ನುವ ಮಾಹಿತಿ ತಿಳಿಯಲು ಅನುಕೂಲವಾಗುವ ವ್ಯವಸ್ಥೆಯೇ ರೇಡಿಯೋ ಕಾಲರ್‌.

ಈ ವ್ಯವಸ್ಥೆಯಡಿ ಆನೆ ಹಿಂಡಿನಲ್ಲಿನ ಒಂದಕ್ಕೆ ಮತ್ತು ತರಿಸುವ ಔಷಧ ನೀಡಿ, ಕುತ್ತಿಗೆಗೆ ಬೆಲ್ಟ್‌ ರೀತಿಯ ಟ್ರ್ಯಾಕರ್‌ ಅಳವಡಿಸಲಾಗುತ್ತದೆ. ಡೆಹ್ರಾಡೂನ್‌ ವನ್ಯಜೀವಿ ಸಂಸ್ಥೆ (ಡಬ್ಲೂತ್ರ್ಯಐಐ), ಜರ್ಮನಿಯ ವನ್ಯಜೀವಿ ಸಂಸ್ಥೆಯೊಂದರ ಸಹಯೋಗದಲ್ಲಿ ಅರಣ್ಯ ಇಲಾಖೆ 2015-16ರಲ್ಲಿ ರೇಡಿಯೋ ಕಾಲರ್‌ ಅಳವಡಿಕೆಗೆ ಯೋಜನೆ ರೂಪಿಸಿತು. ಇದನ್ನು ಮೊದಲ ಬಾರಿಗೆ 2019ರಲ್ಲಿ ಕೊಡಗಿನ ಅರಣ್ಯ ಪ್ರದೇಶದಲ್ಲಿ ಅಳವಡಿಕೆಗೆ ಚಾಲನೆ ದೊರಕಿತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ