ಹಾಸನ ನಗರಸಭಾ ಸದಸ್ಯನ ಹತ್ಯೆ: ಎಸ್​ಪಿ ವಿರುದ್ಧ ಹರಿಹಾಯ್ದ ಜೆಡಿಎಸ್, ಪೊಲೀಸರಿಗೆ ರಜೆ ಮೇಲೆ ತೆರಳಲು ಸೂಚನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 02, 2022 | 6:58 AM

ಹತ್ಯೆಯಾದ ಪ್ರಶಾಂತ್​ಗೆ ಬೇರೆ ಪಕ್ಷ ಸೇರುವಂತೆ ಒತ್ತಡವಿತ್ತು ಎಂದು ಜೆಡಿಎಸ್ ನಾಯಕರು ಹೇಳಿದ್ದಾರೆ.

ಹಾಸನ ನಗರಸಭಾ ಸದಸ್ಯನ ಹತ್ಯೆ: ಎಸ್​ಪಿ ವಿರುದ್ಧ ಹರಿಹಾಯ್ದ ಜೆಡಿಎಸ್, ಪೊಲೀಸರಿಗೆ ರಜೆ ಮೇಲೆ ತೆರಳಲು ಸೂಚನೆ
ನಗರ ಸಭೆ ಸದಸ್ಯ ಪ್ರಶಾಂತ್
Follow us on

ಹಾಸನ: ನಗರಸಭೆಯ ಜೆಡಿಎಸ್ ಸದಸ್ಯ ಪ್ರಶಾಂತ್ ಹತ್ಯೆ (JDS Councillor Prashant Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಲ್ ಇನ್​ಸ್ಪೆಕ್ಟರ್ ರೇಣುಕಾಪ್ರಸಾದ್ ವಿರುದ್ಧ ಪ್ರಜ್ವಲ್​ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ಕಲ್ಲು ಬೀಳಲಿ ಐವರನ್ನು ಶೂಟೌಟ್ ಮಾಡ್ತೀನಿ ಎಂದಿದ್ದರು. ಸಂಸದರ ಮುಂದೆ ಹೀಗೆ ನೇರವಾಗಿ ಹೇಳಿಕೆ ಕೊಡಬಹುದಾ? ಸರ್ಕಲ್ ಇನ್​ಸ್ಪೆಕ್ಟರ್​ಗೆ ಸೇರಿದ ಮೊಬೈಲ್​ಗಳನ್ನು ಸೀಜ್ ಮಾಡಿ, ತನಿಖೆ ಮಾಡಬೇಕು. ಹಾಸನ ತಾಲೂಕಿನ ಹಲವೆಡೆ ಮಟ್ಕಾ ದಂಧೆ ನಡೆಯುತ್ತಿದೆ. ಆದರೂ ಪೊಲೀಸರು ಸುಮ್ಮನಿದ್ದಾರೆ ಎಂದು ಪ್ರಜ್ವಲ್​ ರೇವಣ್ಣ ಹರಿಹಾಯ್ದರು.

ಇದನ್ನೂ ಓದಿ: ಹಾಸನ ನಗರಸಭೆಯ JDS ಸದಸ್ಯನ ಭೀಕರ ಹತ್ಯೆ

ಆಸ್ಪತ್ರೆಯಲ್ಲಿ ಮಾತನಾಡಿದ ಅವರು, ಹತ್ಯೆಯಾದ ಪ್ರಶಾಂತ್​ಗೆ ಬೇರೆ ಪಕ್ಷ ಸೇರುವಂತೆ ಒತ್ತಡವಿತ್ತು. ಬೇರೆ ಪಕ್ಷದವರು ಒತ್ತಡ ಹಾಕುತ್ತಿದ್ದಾರೆ ಎಂದು ಪ್ರಶಾಂತ್ ಹೇಳುತ್ತಿದ್ದರು. ಅವರ ಪಕ್ಷ ಸೇರದಿದ್ದಕ್ಕೆ ಅವರು ಕೊಟ್ಟ ಬಹುಮಾನ ಇದೇನಾ? ಇವತ್ತು ಪ್ರಶಾಂತ್​ಗೆ ಆಗಿದೆ, ನಾಳೆ ಇನ್ನೊಬ್ಬನಿಗೆ ಆಗಬಹುದು. ಪ್ರಶಾಂತ್ ಕೊಲೆ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಕೊಲೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆಂಬುದು ತಿಳಿಯಬೇಕಿದೆ ಎಂದು ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಕೆಂಚಟಹಳ್ಳಿ ಬಳಿ ಟ್ರಕ್ ಟರ್ಮಿನಲ್ ಜಾಗದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ‘ಕಲ್ಲು ಬೀಳಲಿ ಐದು ಜನರನ್ನು ಶೂಟ್ ಮಾಡಿ ಹೋಗ್ತಿನಿ’ ಎಂದಿದ್ದರು. ಇವತ್ತು ಎಲ್ಲರಿಗೂ ಬೇಜಾರು ಆಗಿದೆ. ಒಂದುವರೆ ವರ್ಷದ ಹಿಂದೆ ನಡೆದ ಘಟನೆಯನ್ನು ಪುನರ್ ಹೇಳಿಕೆ ತಗೊಂಡು ಕೇಸ್ ಹಾಕಿದ್ದಾರೆ. ನಮ್ಮ ಪಾರ್ಟಿಗೆ ಸೇರಿಕೊ ಅಂತ ಒತ್ತಡ ಹಾಕುತ್ತಿದ್ದರು, ನನ್ನ ಬಳಿ ಹೇಳಿಕೊಂಡಿದ್ದರು. ಆರು ತಿಂಗಳಿನಲ್ಲಿ ಎರಡು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಯಾರು ಆ ನೋವು ತುಂಬುತ್ತಾರೆ. ಯಾ‌ರ್ಯಾರು ಶಾಮೀಲಾಗಿದ್ದಾರೆ ತನಿಖೆ ನಡೆಸಬೇಕು. ಯಾರ ಕುಮ್ಮಕ್ಕಿದೆ, ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ರಜೆ ಮೇಲೆ ತೆರಳಲು ಎಸ್​ಪಿ ಸೂಚನೆ

ಹಾಸನ ನಗರಸಭೆಯ ಜೆಡಿಎಸ್ ಸದಸ್ಯ ಪ್ರಶಾಂತ್ ಹತ್ಯೆ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪ ಕೇಳಿ ಬಂದಿರುವ ಮೂವರು ಪೊಲೀಸ್ ಅಧಿಕಾರಿಗಳಿಗೆ ತನಿಖೆ ಮುಗಿಯುವವರೆಗೂ ರಜೆ ಮೇಲೆ ತೆರಳುವಂತೆ ಎಸ್​ಪಿ ಸೂಚನೆ ನೀಡಿದ್ದಾರೆ. ಡಿವೈಎಸ್​ಪಿ ಉದಯ್ ಭಾಸ್ಕರ್, ಸಿಪಿಐಗಳಾದ ಆರೋಕಿಯಪ್ಪ, ರೇಣುಕಾಪ್ರಸಾದ್​ ಅವರಿಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ ಈ ಸೂಚನೆ ನೀಡಿದ್ದಾರೆ.

ಹಾಸನ ನಗರಸಭೆಯ ಜೆಡಿಎಸ್ ಸದಸ್ಯ ಪ್ರಶಾಂತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ರೇಣುಕಾಪ್ರಸಾದ್ ಮೇಲೆ ಸಾಕಷ್ಟು ದೂರುಗಳು ಬಂದಿವೆ. ಸಂಸದ ಪ್ರಜ್ವಲ್, ಮಾಜಿ ಸಚಿವ ರೇವಣ್ಣ ಮಾಡಿರುವ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು. ಎಸ್​ಪಿ ಈ ಹೇಳಿಕೆ ನೀಡಿದ ನಂತರವೇ ಶವಾಗಾರಕ್ಕೆ ಶರ ಸಾಗಿಸಲು ಮಾಜಿ ಸಚಿವ ಎಚ್​.ಡಿ.ರೇವಣ್ಣ ಅನುವು ಮಾಡಿಕೊಟ್ಟರು.

ಪೊಲೀಸರ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾಡುತ್ತಿರುವ ಆರೋಪಗಳ ಬಗ್ಗೆಯೂ ತನಿಖೆ ಮಾಡುತ್ತೇವೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ರೇವಣ್ಣ, ಯಾರಿಗೆ ನೋಟೀಸ್ ಕೊಟ್ಟಿದ್ದೀರಿ, ಹೆಸರು ಹೇಳಿ ಎಂದು ಒತ್ತಾಯಿಸಿದರು. ರೇವಣ್ಣ ಅವರ ಒತ್ತಾಯಕ್ಕೆ ಮಣಿದ ಎಸ್​ಪಿ, ಪೊಲೀಸ್ ಅಧಿಕಾರಿಗಳ ಹೆಸರು ಹೇಳುವುದರೊಂದಿಗೆ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:57 am, Thu, 2 June 22