ಹೊಳೆನರಸೀಪುರ ನರ್ಸಿಂಗ್ ಕಾಲೇಜು ಮುಸ್ಲಿಂ ವಿದ್ಯಾರ್ಥಿಗಳ ಗಡ್ಡ ವಿವಾದ ಸುಖಾಂತ್ಯ
ಹೊಳೆನರಸೀಪುರದ ನರ್ಸಿಂಗ್ ಕಾಲೇಜಿನಲ್ಲಿ ಉದ್ಭವಿಸಿದ್ದ ಗಡ್ಡ ವಿವಾದವು ವಿದ್ಯಾರ್ಥಿಗಳು ಮತ್ತು ಕಾಲೇಜು ಆಡಳಿತ ಮಂಡಳಿಯ ನಡುವಿನ ಮಾತುಕತೆಯ ಮೂಲಕ ಸುಖಾಂತ್ಯ ಕಂಡಿದೆ. ವಿದ್ಯಾರ್ಥಿಗಳು ಕಾಲೇಜಿನ ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡಿದ್ದಾರೆ. ಕಾಲೇಜಿನ ಶಿಸ್ತು ಮತ್ತು ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ಹಾಸನ, ನವೆಂಬರ್ 10: ಹೊಳೆನರಸೀಪುರದ (Holenarisipur) ನರ್ಸಿಂಗ್ ಕಾಲೇಜಿನಲ್ಲಿ (Nursing College) ಬುಗಿಲೆದಿದ್ದ ವಿದ್ಯಾರ್ಥಿಗಳ ಗಡ್ಡ ವಿವಾದ (Beard Controversy) ಸುಖಾಂತ್ಯ ಕಂಡಿದೆ. ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳೊಂದಿಗೆ (Students) ಮಾತುಕತೆ ನಡೆಸಿದ್ದು, ನಿಯಮಗಳನ್ನು ಪಾಲಿಸಲು ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರೆ. ಸಭೆ ಬಳಿಕ ಜಮ್ಮು-ಕಾಶ್ಮೀರದಿಂದ ಬಂದಿರುವ ಮುಸ್ಲಿಂ ವಿದ್ಯಾರ್ಥಿ ಉಮರ್ ಮಾತನಾಡಿ, ಈ ವಿಷಯವನ್ನು ಇಲ್ಲಿಗೆ ಕೈ ಬಿಡುತ್ತಿದ್ದೇವೆ ಎಂದು ಹೇಳಿದರು.
ಹೊಳೆನರಸೀಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಸೂಚನೆಯಂತೆ ನಡೆದುಕೊಳ್ಳುತ್ತೇವೆ. ಕಾಲೇಜು ನಿಯಮದಂತೆ ಶಿಸ್ತಿನಿಂದ ಇರಬೇಕೆಂದು ಹೇಳಿದರು. ಮುಂದೆ ನಿಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಆಗುವುದಿಲ್ಲ ಎಂದಿದ್ದಾರೆ. ಈ ವಿಷಯವನ್ನು ಇಲ್ಲಿಗೆ ಕೈ ಬಿಡುತ್ತಿದ್ದೇವೆ ಎಂದರು.
ಗಡ್ಡ ತೆಗೆಯಬೇಕೆಂಬ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಮೇಲೆ ಯಾರೂ ಒತ್ತಡ ಹೇರಿಲ್ಲ. ಶಿಸ್ತಿನ ವಿಚಾರದಲ್ಲಿ ಗಡ್ಡ ಟ್ರಿಮ್ ಮಾಡಲು ಹೇಳಿದ್ದರು. ಗಡ್ಡದ ವಿಚಾರ ಬಿಟ್ಟರೆ ಬೇರೆ ಏನೂ ಸಮಸ್ಯೆ ಆಗಿಲ್ಲ. ತಾರತಮ್ಯ ಮಾಡಿರುವ ಬಗ್ಗೆ ಯಾವುದೇ ವಿಚಾರ ಇಲ್ಲ. ಈಗ ಸಮಸ್ಯೆ ಬಗೆ ಹರಿದಿದೆ, ಏನೂ ಸಮಸ್ಯೆ ಇಲ್ಲ. ನಮ್ಮ ಸಂಪ್ರದಾಯ ಪಾಲನೆಗೆ ಅಡ್ಡಿ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಹಾಸನ ನರ್ಸಿಂಗ್ ಕಾಲೇಜು ಗಡ್ಡ ವಿವಾದ: ತಪ್ಪು ಮುಚ್ಚಿಕೊಳ್ಳಲು ವಿಷಯ ಬೇರೆ ತರ ತಿರುಚಿದ್ದಾರೆ ಎಂದ ಪ್ರಾಂಶುಪಾಲ
ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಚನ್ನಬಸವನಗೌಡ ಹಾಗೂ ಗಿರೀಶ್ ಮಾತನಾಡಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಎಲ್ಲ ವಿದ್ಯಾರ್ಥಿಗಳಿಗೆ ಸೂಚನೆ ಕೊಟ್ಟಿದ್ದರು. ಗಡ್ಡವನ್ನು ಟ್ರಿಂ ಮಾಡಿಕೊಂಡು ಬನ್ನಿ ಎಂದು ಹೇಳಿದ್ದರು. ನರ್ಸಿಂಗ್ ಕಾಲೇಜಿನಲ್ಲಿ ಕೆಲವು ನಿಯಮಾವಳಿಗಳಿವೆ. ಅವುಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ನೀವು ನರ್ಸಿಂಗ್ ವಿದ್ಯಾರ್ಥಿಗಳು ರೋಗಿಗಳ ಶುಶ್ರೂಷೆ ಮಾಡಬೇಕು. ರೋಗಿಗಳ ಬಳಿ ಹೋಗಬೇಕು ಅವರು ನಿಮ್ಮನ್ನು ನೋಡಿದ ಕೂಡಲೆ ಇವರು ಚಿಕಿತ್ಸೆ ಕೊಡುತ್ತಾರೆ ಎನ್ನುವ ಭಾವನೆ ಬರಬೇಕು. ಹೀಗಾಗಿ ಎಲ್ಲರೂ ಗಡ್ಡ ಟ್ರಿಂ ಮಾಡಿಕೊಂಡು ಶಿಸ್ತಾಗಿ ಬನ್ನಿ ಎಂದಿದ್ದರು. ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ರೀತಿ ಸೂಚನೆ ಕೊಟ್ಟಿದ್ದರು. ಅದನ್ನು ಕೆಲವರು ತಪ್ಪಾಗಿ ಕೆಲವರು ಅರ್ಥೈಸಿಕೊಂಡಿದ್ದು ಸಮಸ್ಯೆ ಆಗಿದೆ. ನಾವು ಶಿಸ್ತು ಬರಬೇಕು, ಕಾಲೇಜಿನ ನಿಯಮಾವಳಿಗಳನ್ನು ಪಾಲಿಸಬೇಕಿರುವುದು ನಮ್ಮ ಕರ್ತವ್ಯ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 am, Sun, 10 November 24