ಹಾಸನ: ಸ್ನೇಹಿತನ ಜೊತೆ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದ ಬಳಿ ನಡೆದಿದೆ. ಜಮ್ಮನಹಳ್ಳಿಯ ನಿವಾಸಿ ಅರುಣ್ ಕುಮಾರ್(28) ಮೃತ ಯುವಕ.
ರಾತ್ರಿ ತನ್ನ ಸ್ನೇಹಿತ ಅರಣ್ಯ ಇಲಾಖೆ ದಿನಗೂಲಿ ನೌಕರ ನಾಗೇಶ್ ಜೊತೆ ಹೊಸ ವರ್ಷದ ಪಾರ್ಟಿ ಮಾಡಲು ಅರುಣ್ ತೆರಳಿದ್ದ. ಇಬ್ಬರೂ ಸೇರಿ ಹೊಸ ವರ್ಷದ ಪಾರ್ಟಿ ಮಾಡಿದ್ದಾರೆ. ಬಳಿಕ ಹೊಸಗದ್ದೆಯ ಕಲ್ಲು ಕೋರೆಯ ಹೊಂಡದಲ್ಲಿ ಮುಳುಗಿ ಅರುಣ್ ಕುಮಾರ್ ಸಾವಿಗೀಡಾಗಿದ್ದಾನೆ. ಘಟನೆ ಬಳಿಕ ನಾಗೇಶ್ ಮೊಬೈಲ್ ಸ್ವಿಚ್ ಆಫ್ ಮಾಡಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.
ನಾಗೇಶ್ ನಡೆಯಿಂದ ಮೃತ ಅರುಣ್ ಕುಟುಂಬಸ್ಥರಲ್ಲಿ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಅರುಣ್ ಕುಮಾರ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.