ಐತಿಹಾಸಿಕ ಶ್ರೀ ಚನ್ನಕೇಶವ ದೇಗುಲದ ಆವರಣದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಆರೋಪ; ಕಾರಣ?
ಪ್ರವಾಸೋದ್ಯಮ ಇಲಾಖೆ ಐದು ವರ್ಷಕ್ಕೆ ಪಾರ್ಕಿಂಗ್ ಗುತ್ತಿಗೆಯನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ನೀಡಿದೆ. ಆದರೆ, ದೇಗುಲದ ಹಿಂಭಾಗದಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಬೇಕಿರುವ ಗುತ್ತಿಗೆದಾರ, ದೇಗುಲದ ಮುಂಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಹಾಸನ, ಅ.20: ಜಿಲ್ಲೆಯ ಬೇಲೂರು ಪಟ್ಟಣದ ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ ಚನ್ನಕೇಶವ ಸ್ವಾಮಿ ದೇವಾಲಯ (Channakeshava Swami Temple)ದ ಆವರಣದಲ್ಲಿ ಪ್ರವಾಸಿಗರ(Tourist) ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಹೌದು, ದೇವಾಲಯ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರ ಮೇಲೆ ಪಾರ್ಕಿಂಗ್ ಶುಲ್ಕ ವಸೂಲಿಗಾರರು ಹಲ್ಲೆ ನಡೆಸಿದ್ದು, ಮಹಿಳೆ ಮೇಲೆ ರಕ್ತ ಬರುವ ರೀತಿ ಹೊಡೆಯಲಾದ ಫೋಟೋ ವೈರಲ್ ಆಗಿದೆ. ದಾವಣಗೆರೆ ಮೂಲದ ವೀಣಾ ಬಸವರಾಜು ಹಲ್ಲೆಗೊಳಗಾದ ಮಹಿಳೆ.
ಮಹಿಳೆ ಮೇಲೆ ಹಲ್ಲೆ ಆರೋಪ
ಹೌದು, ಐತಿಹಾಸಿಕ ಶ್ರೀ ಚನ್ನಕೇಶವ ದೇವಾಲಯ ವೀಕ್ಷಣೆಗೆ ವೀಣಾ ಅವರು ಕುಟುಂಬ ಸಮೇತರಾಗಿ ಬಂದಿದ್ದರು. ವೀಣಾ ಪುತ್ರ ವಾಹನ ಪಾರ್ಕಿಂಗ್ ಮಾಡುತ್ತಿದ್ದ ವೇಳೆ ಶುಲ್ಕ ವಸೂಲಿ ಮಾಡುವ ವ್ಯಕ್ತಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಮಗನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜೊತೆಗೆ ಜಗಳ ಬಿಡಿಸಲು ಮುಂದಾದ ವೀಣಾ ಮೇಲೆ ಅವರನ್ನು ತಳ್ಳಿದ ರಭಸಕ್ಕೆ ಮುಖಕ್ಕೆ ತೀವ್ರ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮುಖಕ್ಕೆ ಹೊಲಿಗೆ ಹಾಕಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಅಪ್‌ಲೋಡ್ ಮಾಡಿರುವ ವೀಣಾ ಅವರು, ವಿಶ್ವ ಪರಂಪರೆ ಪಟ್ಟಿಗೆ ಸೇರಿರುವ ದೇವಾಲಯದಲ್ಲಿ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಇಲ್ಲದಿರುವುದು ವಿಪರ್ಯಾಸ ಎಂದು ಅಸಮಧಾನ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರು ಪ್ರವಾಸಿಗರ ರಕ್ಷಣೆ ಹಾಗೂ ಕ್ರಮಕ್ಕೆ ಮುಂದಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಲರ್ ಫುಲ್ ಚಿಟ್ಟೆಗಳ ಲೋಕ: ಪ್ರವಾಸಿಗರ ಕಣ್ಣಿಗೆ ಹಬ್ಬ
ಐದು ವರ್ಷಕ್ಕೆ ಪಾರ್ಕಿಂಗ್ ಗುತ್ತಿಗೆ ನೀಡಿರುವ ಪ್ರವಾಸೋದ್ಯಮ ಇಲಾಖೆ
ಕಳೆದ ಒಂದು ವಾರದ ಹಿಂದೆ ದೇಗುಲದ ಹಿಂದಿನ ಜಾಗವನ್ನು ಪ್ರವಾಸೋದ್ಯಮ ಇಲಾಖೆ ಐದು ವರ್ಷಕ್ಕೆ ಪಾರ್ಕಿಂಗ್ ಗುತ್ತಿಗೆಯನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ನೀಡಿದೆ. ಆದರೆ, ದೇಗುಲದ ಹಿಂಭಾಗದಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಬೇಕಿರುವ ಗುತ್ತಿಗೆದಾರ, ದೇಗುಲದ ಮುಂಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಪ್ರವಾಸಿಗರ ಮೇಲೆ ಹಲ್ಲೆ ನಡೆದರೂ ಕ್ರಮ ಕೈಗೊಳ್ಳದ ತಾಲ್ಲೂಕು ಆಡಳಿತ
ಇನ್ನು ಪ್ರವಾಸಿಗರ ಮೇಲೆ ಹಲ್ಲೆ ನಡೆದರೂ, ತಾಲ್ಲೂಕು ಆಡಳಿತ ಮಾತ್ರ ಕ್ರಮ ಕೈಗೊಂಡಿಲ್ಲ. ದೇಗುಲದ ವ್ಯವಸ್ಥಾಪನ ಸಮಿತಿ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಯಾವುದೇ ಪ್ರವಾಸಿಗರು ಬಾರದಂತೆ ಮಾಡುತ್ತಿದ್ದಾರೆ ಎಂದು ಅಸಮಧಾನ ಹೊರಹಾಕಿದ್ದಾರೆ. ಇನ್ನು ಹಲ್ಲೆಗೊಳಗಾದವರು ಪೊಲೀಸ್ ಠಾಣೆಗೆ ದೂರು ನೀಡದೆ ತೆರಳುತ್ತಿದ್ದಾರೆ. ಹೌದು, ದೂರು ನೀಡಿದರೆ ದೂರದ ಹೊರ ಜಿಲ್ಲೆಗಳಿಂದ ಪುನಃ ಬೇಲೂರು ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಕಾರಣದಿಂದ ದೂರು ನೀಡುತ್ತಿಲ್ಲ. ಇನ್ನಾದರೂ ತಾಲ್ಲೂಕು ಆಡಳಿತ ಹಾಗೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Fri, 20 October 23