ಹಾಸನದಲ್ಲಿ ದೋಸ್ತಿ ಪಕ್ಷವನ್ನು ನಂಬಿದ್ದ ಬಿಜೆಪಿಗೆ ಮುಖಭಂಗ, ಪ್ರೀತಂಗೌಡಗೆ ಚುರುಕು ಮುಟ್ಟಿಸಿದ ಜೆಡಿಎಸ್
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ನಡೆಸಿವೆ. ಆದ್ರೆ, ಹಾಸನದಲ್ಲಿ ಜೆಡಿಎಸ್ ಬಿಜೆಪಿ ದೋಸ್ತಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೌದು.. ತೀವ್ರ ಕುತೂಹಲ ಮೂಡಿಸಿದ್ದ ಹಾಸನ ನಗರಸಭೆ ಅಧ್ಯಕ್ಷ, ಉಪಾದ್ಯಕ್ಷ ಚುನಾವಣೆ ಮುಗಿದಿದ್ದು, ಹಾಸನ ಜೆಡಿಎಸ್ ಪಾಲಾಗಿದೆ. ಈ ಮೂಲಕ ಮಿತ್ರ ಪಕ್ಷ ಬಿಜೆಪಿಗೆ ಮಾತ್ರವಲ್ಲದೇ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡಗೆ ಟಾಂಗ್ ಕೊಟ್ಟಿದೆ.
ಹಾಸನ, (ಆಗಸ್ಟ್ 21): ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ನಡುವೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಆದ ಮೈತ್ರಿ ಇನ್ನೂ ಕೂಡ ಮುಂದುವರೆಯುತ್ತಿದೆ ಎಂದು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಹೇಳುತ್ತಿದ್ದಾರೆ, ಆದ್ರೆ ಸ್ಥಳೀಯವಾಗಿ ಮಾತ್ರ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಕಾಣುತ್ತಿಲ್ಲ. ಹೌದು… ಹಾಸನ .ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಜೆಡಿಎಸ್ ಏಕಾಂಗಿ ಪ್ರದರ್ಶನ ಮಾಡಿದೆ. ಅಧ್ಯಕ್ಷ ಸ್ಥಾನದ ಜೊತೆಗೆ ಉಪಾಧ್ಯಕ್ಷವನ್ನು ಸಹ ಜೆಡಿಎಸ್ ಬೆಂಬಲಿತ ಬಿಜೆಪಿ ಸದಸ್ಯರನ್ನ ಆಯ್ಕೆ ಮಾಡಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಮಣ್ಣು ಮುಕ್ಕಿಸಿದೆ. ಈ ಮೂಲಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡಗೆ ದಳಪತಿ ಸೆಡ್ಡು ಹೊಡೆದಿದೆ.
ಲೋಕಸಭಾ ಚುನಾವೆಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಇದ್ದರೂ ಜೆಡಿಎಸ್ ಅಭ್ಯರ್ಥಿ ಸೋತಾಗಿನಿಂದ ಪ್ರೀತಂಗೌಡ ವಿರುದ್ದ ತಿರುಗಿಬಿದ್ದಿರು ದಳಪತಿಗಳು, ಇಂದು ನಡೆದ ಹಾಸನ ನಗರಸಭೆ ಚುನಾವಣೆಯಲ್ಲೂ ಪ್ರೀತಂಗೌಡಗೆ ಟಕ್ಕರ್ ಕೊಟ್ಟಿದ್ದಾರೆ, ಇಂದು ನಡೆದ ಹಾಸನ ನಗರಸಭೆ ಅದ್ಯಕ್ಷ ಉಪಾದ್ಯಕ್ಷ ಚುನಾವಣೆಯಲ್ಲಿ ಜೆಎಎಸ್ ನಿಂದ ಆಯ್ಕೆಯಾಗಿದ್ದ 9ನೇ ವಾರ್ಡ್ ಸದಸ್ಯ ಎಂ ಚಂದ್ರೇಗೌಡ ಅದ್ಯಕ್ಷರಾಗಿ ಆಯ್ಕೆಯಾದರೆ, ಬಿಜೆಪಿ ಚಿನ್ಹೆ ಮೇಲೆ ಗೆದ್ದರೂ ಆರಂಭದಿಂದಲೂ ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿದ್ದ 35ನೇ ವಾರ್ಡ್ ಸದಸ್ಯೆ ಲತಾದೇವಿ ಅವರನ್ನ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಮೂಲಕ ಬಿಜೆಪಿಯಿಂದ ಅಧಿಕೃತವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಶಿಲ್ಪಾ ವಿಕ್ರಂಗೆ ಜೆಡಿಎಸ್ ಮತ ಹಾಕದೇ ಪ್ರೀತಂಗೌಡಗೆ ನೇರವಾಗಿ ಟಕ್ಕರ್ ಕೊಟ್ಟಿದೆ.
ಇದನ್ನೂ ಓದಿ: ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತ: ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ಪ್ರೀತಂಗೌಡ ಟಾಂಗ್
ತಮ್ಮ ವಿರುದ್ಧವೇ ಮತ ಚಲಾಯಿಸಿಕೊಂಡರೂ ಉಪಧ್ಯಕ್ಷೆಯಾಗಿ ಆಯ್ಕೆ
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಲತಾದೇವಿ ಬಿಜೆಪಿಯ ವಿಪ್ ಕಾರಣದಿಂದ ತಮ್ಮ ವಿರುದ್ಧವೇ ಮತ ಚಲಾಯಿಸಬೇಕಾಯ್ತು. ಅನಿವಾರ್ಯವಾಗಿ ಬಿಜೆಪಿಯ ವಿಪ್ ಕಾರಣದಿಂದ ಬಿಜೆಪಿಯ ಅಧಿಕೃತ ಉಪಾಧ್ಯಕ್ಷ ಅಭ್ಯರ್ಥಿ ಶಿಲ್ಪಾ ವಿಕ್ರಂಗೆಗೆ ಮತ ಚಲಾಯಿಸಿದ್ದರು. ಮೈತ್ರಿ ಕಾರಣದಿಂದ ಉಪಾಧ್ಯಕ್ಷ ಸ್ಥಾನವಾದ್ರು ತಮಗೆ ಸಿಗಲಿದೆ ಎಂದುಕೊಂಡಿದ್ದ ಬಿಜೆಪಿಗೆ ಭಾರೀ ನಿರಾಸೆಯಾಗಿದೆ.
ಪ್ರೀತಂಗೌಡಗೆ ಟಾಂಗ್ ಕೊಟ್ಟ ಮಿತ್ರ ಪಕ್ಷ ಜೆಡಿಎಸ್
ಜೆಡಿಎಸ್ನ 17 ಸದಸ್ಯರಿದ್ದ, ಇಬ್ಬರು ಪಕ್ಷೇತರರು ಸಹ ಸೇರಿಕೊಂಡಿದ್ದಾರೆ. ಜೊತೆಗೆ ಇಬ್ಬರು ಬಿಜೆಪಿ ಸದಸ್ಯರೂ ಕೂಡ ಜೆಡಿಎಸ್ಗೆ ಬೆಂಬಲಿಸಿದ್ದಾರೆ. ಈ ಮೂಲಕ ಜೆಡಿಎಸ್ನ ಸಂಖ್ಯಾಬಲ 21 ಇರುವಾಗ ನಮ್ಮ ಪಕ್ಷದ ಸದಸ್ಯರೇ ಅಧ್ಯಕ್ಷರಾಗಿದ್ದಾರೆ. ಮೈತ್ರಿ ಧರ್ಮ ಪಾಲನೆಗಾಗಿ ನಾವು ಬಿಜೆಪಿ ಸದಸ್ಯೆಯನ್ನ ಉಪಾಧ್ಯಕ್ಷೆಯನ್ನಾಗಿ ಮಾಡಿದ್ದೇವೆ, ಸ್ಥಳೀಯ ಶಾಸಕನಾದ ನನ್ನನ್ನ ಯಾವ ಬಿಜೆಪಿ ನಾಯಕರು ಸಂಪರ್ಕ ಮಾಡಿಲ್ಲ ಎನ್ನೋ ಮೂಲಕ ಶಾಸಕ ಸ್ವರೂಪ್ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ಒಟ್ಟು 35 ಸದಸ್ಯ ಬಲದ ಹಾಸನ ನಗರಸಬೆಯಲ್ಲಿ ಜೆಡಿಎಸ್ 17 ಸದಸ್ಯಬಲ ಹೊಂದಿದೆ, ಬಿಜೆಪಿ 14 ಸ್ಥಾನ ಗೆದ್ದಿದ್ದು, ಕಾಂಗ್ರೆಸ್ 2 ಹಾಗು ಪಕ್ಷೇತರರಾಗಿ 2 ಸದಸ್ಯರು ಗೆದ್ದಿದ್ದಾರೆ, ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಹುಮತ ಇಲ್ಲದಿದ್ದರೂ ಕೂಡ ಮೀಸಲಾತಿ ಬಲದಿಂದ ಬಿಜೆಪಿಯ ಸದಸ್ಯ ಅನಾಯಾಸವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಲ್ಲಿ ಯಡವಟ್ಟು ಮಾಡಿಕೊಂಡಿದ್ದ ಜೆಡಿಎಸ್ ಆ ಸ್ಥಾನವನ್ನು ಕಳೆದುಕೊಂಡಿತ್ತು, ಆದ್ರೆ ಈಗ ಎರಡನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಬಿಸಿಎಂ ಎ ಹಾಗು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
ಹಾಸನದಲ್ಲಿ ಲೋಕಸಭಾ ಚುನಾವಣೆಯಿಂದಲೂ ಕೂಡ ದೋಸ್ತಿ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಈ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ವಕ್ತರಾರ ಅಶ್ವಥ್ ನಾರಾಯಣ್ ರನ್ನ ವೀಕ್ಷಕರನ್ನಾಗಿ ನೇಮಿಸಲಾಗಿತ್ತು, ಬಿಜೆಪಿ ಮುಖಂಡರು ಸದಸ್ಯರ ಸಭೆ ನಡೆಸಿ ದೋಸ್ತಿಗಳ ನಡುವೆ ಸಮನ್ವಯ ಸಾಧಿಸುವ ಯತ್ನ ಮಾಡಿದ್ದರು, ಅದರಂತೆ ಎರಡು ದಿನಗಳ ಹಿಂದೆ ಹಾಸನದಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಜಿ ಶಾಸಕ ಪ್ರೀತಂಗೌಡ, ದೋಸ್ತಿ ಪಾಲನೆ ಆಗಬೇಕು, ಬಾಕಿ ಇರುವ 20 ತಿಂಗಳ ಅವಧಿ ತಲಾ 10 ತಿಂಗಳಂತೆ ವಿಭಾಗ ಆಗಬೇಕು. ಮೊದಲ ಅವಧಿ ಬಿಜೆಪಿಗೆ ಬಿಟ್ಟುಕೊಡಬೇಕು ಎನ್ನುವುದು ನಮ್ಮ ಕಾರ್ಯಕರ್ತರ ಬೇಡಿಕೆ. ಅದನ್ನ ನಾವು ಹೇಳಿದ್ದೇವೆ, ಎರಡನೇ ಅವದಿಗೆ ಜೆಡಿಎಸ್ ನವರು ಅಧ್ಯಕ್ಷರಾಗಲಿ ಎಂದಿದ್ದರು.
ಅದರಂತೆ ಇಂದು ನಡೆದ ಚುನಾವಣೆಯಲ್ಲಿ ಅವಕಾಶ ಸಿಗೋ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ತೀವ್ರ ನಿರಾಸೆಯಾಗಿದೆ. ಅಧ್ಯಕ್ಷಸ್ಥಾನ ಹೋಗಲಿ ಉಪಾಧ್ಯಕ್ಷ ಸ್ಥಾನವೂ ಕೂಡ ಪ್ರೀತಂಗೌಡ ಬೆಂಬಲಿಗರಿಗೆ ಸಿಕ್ಕಿಲ್ಲ.
ಒಟ್ನಲ್ಲಿ ರಾಜ್ಯದೆಲ್ಲೆಡೆ ಬಿಜೆಪಿ ಜೆಡಿಎಸ್ ರಾಜ್ಯ ನಾಯಕರು ದೋಸ್ತಿ ದೋಸ್ತಿ ಎಂದು ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದರೆ ಹಾಸನದಲ್ಲಿ ಮಾತ್ರ ದೋಸ್ತಿಗಳ ನಡುವಿನ ಅಂತಃಕಲಹ ಇನ್ನೂ ಮುಗಿಯುತ್ತಿಲ್ಲ, ಮೈತ್ರಿಯಂತೆ ನಡೆದಿದೆ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದರೆ, ಅಧಿಕೃತ ಅಭ್ಯರ್ಥಿ ಸೋಲಿನ ಆಘಾತಕ್ಕೊಳಗಾಗಿರುವ ಬಿಜೆಪಿ ನಾಯಕರು ಕಂಗೆಟ್ಟು ಹೋಗಿದ್ದಾರೆ,
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.