ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತ: ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ಪ್ರೀತಂಗೌಡ ಟಾಂಗ್
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಾದಯಾತ್ರೆ ವೇಳೆ ಶಾಸಕ ಪ್ರೀತಂ ಗೌಡಗೆ ಉಸ್ತುವಾರಿ ನೀಡಿದ್ದಕ್ಕೆ ಹೆಚ್ಡಿ ಕುಮಾರಸ್ವಾಮಿ ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದರು. ಪ್ರೀತಂಗೌಡ ಯಾರು ಎಂದೆಲ್ಲಾ ಕಿಡಿಕಾರಿದ್ದರು. ಸದ್ಯ ಈ ವಿಚಾರವಾಗಿ ಪ್ರೀತಂಗೌಡ ಪ್ರತಿಕ್ರಿಯಿಸಿದ್ದು, ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತ ಎಂದು ಉತ್ತರಿಸಿದ್ದೇನೆ. ಕುಮಾರಸ್ವಾಮಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದಿದ್ದಾರೆ.
ಹಾಸನ, ಆಗಸ್ಟ್ 19: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಾದಯಾತ್ರೆಯ ಸಮಾರೋಪ ಸಮಾರಂಭದ ಉಸ್ತುವಾರಿ ಪ್ರೀತಂ ಗೌಡಗೆ ನೀಡಿದ್ದಕ್ಕೆ ಕುಮಾರಸ್ವಾಮಿ (HD Kumaraswamy) ರೊಚ್ಚಿಗೆದ್ದಿದ್ದರು. ಸಾಲದಕ್ಕೆ ಪಾದಯಾತ್ರೆಗೆ ಬೆಂಬಲ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದ ಕುಮಾರಸ್ವಾಮಿ, ಯಾರು ಅದು ಪ್ರೀತಂಗೌಡ ಅಂತೆಲ್ಲಾ ವಾಗ್ದಾಳಿ ನಡೆಸಿದ್ದರು. ಇದೀಗ ಈ ಬಗ್ಗೆ ಸ್ವತಃ ಪ್ರೀತಂಗೌಡ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಬಗ್ಗೆ ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.
ಕುಮಾರಸ್ವಾಮಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ
ಪ್ರೀತಂಗೌಡ ಯಾರು ಎಂಬ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತ ಎಂದು ಉತ್ತರಿಸಿದ್ದೇನೆ. ಕೇಳುವ ಅಧಿಕಾರ ಇದೆ ಕೇಳಿರುತ್ತಾರೆ. ಕಾರ್ಯಕರ್ತನಾಗಿ ಏನು ಹೇಳಬೇಕೋ ಹೇಳಿದ್ದೇನೆ. ಕುಮಾರಸ್ವಾಮಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದಿದ್ದಾರೆ.
ಇದನ್ನೂ ಓದಿ: ದೇವೇಗೌಡರ ಕುಟುಂಬದ ವಿರುದ್ಧ ವೈರತ್ವ ಇಟ್ಕೊಂಡು ಅಭಿವೃದ್ಧಿ ಕೊಲ್ಲಬೇಡಿ: ಕಾಂಗ್ರೆಸ್ಗೆ ರೇವಣ್ಣ ಎಚ್ಚರಿಕೆ
ಪಾದಯಾತ್ರೆಯಲ್ಲಿ ಮಂಡ್ಯ ಗಲಾಟೆ ಬಳಿಕ ಪ್ರೀತಂ ಗೌಡ ಬಾಗಿಯಾಗದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಎಲ್ಲಾ ಕಡೆ ಕಾಣಿಸಿಕೊಂಡಿರುತ್ತೇವೆ. ಸೂಕ್ತ ಸಂದರ್ಭದಲ್ಲಿ ಸೂಕ್ತವಾಗಿ ಉತ್ತರ ಸಿಗುತ್ತೆ. ನನಗೆ ನಿಮಗೆ ಮಂಡಳಿ ಕೊಟ್ಟಾಗ ನಯವಾಗಿ ಬೇಡ ಎಂದಿದ್ದೆ. ರಾಜಕಾರಣ ಎನ್ನೋದು ನೂರು ಮೀಟರ್ ಓಟ ಅಲ್ಲ, ಮ್ಯಾರಾಥಾನ್. ಇದನ್ನ ನಮ್ಮ ನಾಯಕರಾದ ಯಡಿಯೂರಪ್ಪ ಅವರಿಗೆ ಪಾದ ಮುಟ್ಟಿ ಹೇಳಿದ್ದೆ. ನನಗೆ ಯಾವುದೂ ಅರ್ಜೆಂಟ್ ಇಲ್ಲ, ಬಹಳ ದೀರ್ಘ ಕಾಲದ ರಾಜಕಾರಣ ಮಾಡಬೇಕು. ಸಾಂದರ್ಭಿಕವಾಗಿ ನಡೆಯುವ ಘಟನೆಗಳಿಗೆ ನಾನು ಧೃತಿಗೆಡುವುದಿಲ್ಲ ಎಂದು ಹೇಳಿದ್ದಾರೆ.
ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಅದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಅಧಿಕಾರ ಉಪಯೋಗಿಸಿ ರಾಜ್ಯಪಾಲರು ಅನುಮತಿ ಕೊಟ್ಟಿದಾರೆ. ರಾಜ್ಯಪಾಲರ ಆದೇಶಕ್ಕೆ ಮನ್ನಣೆ ನೀಡಿ ತನಿಖೆಗೆ ಸಹಕಾರ ನೀಡಲಿ. ನಾವು ಪಾದಯಾತ್ರೆ ಮಾಡಿದ್ದೇ ರಾಜಿನಾಮೆ ಕೊಡಬೇಕು ಎಂದು. ಎಲ್ಲಾ ಅವ್ಯವಹಾರ ತನಿಖೆ ಆಗಬೇಕು ಎಂದಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಸಕಲೇಶಪುರ ಹಾಗೂ ಬೇಲೂರಿನಲ್ಲಿ ಬಿಜೆಪಿಯಿಂದ ಲೀಡ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಹೊಳೆನರಸೀಪುರ, ಅರಕಲಗೂಡು, ಚನ್ನಪಟ್ಟಣ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಶಾಸಕರಿದ್ದರೂ ಅವರಿಗೆ ಹಿನ್ನಡೆ ಆಗಿದೆ. ಏಕೆ ಹೀಗಾಯ್ತು ಎಂದು ನಾನು ಮಾತನಾಡಲು ಹೋಗಲ್ಲ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸಾಂದರ್ಭಿಕ ಸಂದರ್ಭದಲ್ಲಿ ಮತ ಪಡೆದು ಶಾಸಕರಾಗಿ ಆಯ್ಕೆ ಆಗಿದ್ದಾರೆ. ಸಾಂದರ್ಭಿಕ ಮತ ಹಿಡಿದಿಟ್ಟುಕೊಳ್ಳುವಲ್ಲಿ ಸಾಂದರ್ಭಿಕ ಶಾಸಕರು ವಿಫಲರಾಗಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಗಿರಬಹುದು ಎಂದು ತಿಳಿಸಿದರು.
ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ಎಚ್ಚರಿಕೆ
ಹಾಸನ ಕ್ಷೇತ್ರದ ಜೆಡಿಎಸ್ ಶಾಸಕ ಸ್ವರೂಪ್‌ಗೆ ಯಾವ ಸಂದರ್ಭದಲ್ಲಿ ಯಾರು ಮತ ಹಾಕಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಆ ಮತಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಅವರಿಗೆ ಇರಬೇಕು ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರ ವಿರುದ್ಧ ಟೀಕೆ ಮಾಡಿದರು. ಹಾಸನ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ 84 ಸಾವಿರ ಬಂದು ಲೋಕಸಭಾ ಚುನಾವಣೆಯಲ್ಲಿ 68 ಸಾವಿರ ಬಂದರೆ ಅದು ಸಾಂದರ್ಭಿಕ. ಸಾಂದರ್ಭಿಕ ಮತ ಗಟ್ಟಿ ಇಲ್ಲದಿದ್ದರೆ ಬೇರೆ ಪಕ್ಷಕ್ಕೆ ಹೋಗೋದು ಸಹಜ. ಸಾಂದರ್ಭಿಕ ಮತಗಳ ಬಗ್ಗೆ ಏನಾಯಿತು ಅನ್ನೋದು ಅವರೇ ಹೇಳಬೇಕು. ನಾನು ಈಗ ಶಾಸಕನಲ್ಲ, ಮತ ಉಳಿಸಿಕೊಳ್ಳೋದು ಶಾಸಕರಾಗಿದ್ದವರ ಕೆಲಸ.
ಇದನ್ನೂ ಓದಿ: ರಾಜಕೀಯವಾಗಿ ನನ್ನನ್ನು ಮುಗಿಸಿಬಿಟ್ರೆ, ಇಡೀ ಕಾಂಗ್ರೆಸ್ ಪಕ್ಷವನ್ನೇ ಮುಗಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ – ಸಿದ್ದರಾಮಯ್ಯ
ಆರ್ಗ್ಯಾನಿಕ್ ಗ್ರೋಥ್ ಇದ್ದರೆ ಗಟ್ಟಿ ಇರುತ್ತದೆ. ಆದರೆ ಕಟ್ಟಡದ ಮೇಲೆ ಗೋಪುರ ಕಟ್ಟಿದರೆ ಹೀಗಾಗುತ್ತೆ. ಹಾಸನದಲ್ಲಿ ಇಬ್ಬರೂ ಹಂಚಿಕೊಂಡರೆ ಸಮಪಾಲು ಆಗುತ್ತೆ, ಅದು ಬಿಟ್ಟು ಶಕ್ತಿ ಇದೆ ಎಂದು ಸಾಂದರ್ಭಿಕವಾಗಿ ಹೋದರೆ ಏನಾಗುತ್ತೆಂದು ನೋಡಿದ್ದೀರಿ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:01 pm, Mon, 19 August 24