ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಭೀತಿ: ದೊಡ್ಡತಪ್ಲು ಬಳಿ ಮುಗಿಯದ ಕಾಮಗಾರಿ, ಪ್ರವಾಸಿಗರಿಗೆ ತಾಲೂಕು ಆಡಳಿತದ ಎಚ್ಚರಿಕೆ

Hassan News: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ಹಲವೆಡೆ ಭೂಕುಸಿತದ ಭೀತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಕಲೇಶಪುರ ತಾಲೂಕು ಆಡಳಿತವು ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಜಲಪಾತ, ನದಿ ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಭೀತಿ: ದೊಡ್ಡತಪ್ಲು ಬಳಿ ಮುಗಿಯದ ಕಾಮಗಾರಿ, ಪ್ರವಾಸಿಗರಿಗೆ ತಾಲೂಕು ಆಡಳಿತದ ಎಚ್ಚರಿಕೆ
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಜರಿದು ರಸ್ತೆಗೆ ಮಣ್ಣು ಬಿದ್ದಿರುವುದು
Image Credit source: tv9
Edited By:

Updated on: Jul 08, 2026 | 12:40 PM

ಮುಖ್ಯಾಂಶಗಳು

  • ಶಿರಾಡಿ ಘಾಟ್‌ನ ಹಲವೆಡೆ ಭೂಕುಸಿತದ ಭೀತಿ
  • ದೊಡ್ಡತಪ್ಲು ಬಳಿ 200 ಮೀಟರ್ ಮಣ್ಣು ಕುಸಿತ
  • ಅಪಾಯಕಾರಿ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧ

ಹಾಸನ, ಜುಲೈ 8: ಹಾಸನ (Hassan) ಜಿಲ್ಲೆಯ ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂಗಾರು ಮಳೆಯ (Monsoon Rain) ಅಬ್ಬರ ತೀವ್ರಗೊಂಡಿದೆ. ಇದರ ಪರಿಣಾಮವಾಗಿ ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ (NH-75) ಶಿರಾಡಿ ಘಾಟ್‌ನ ಹಲವೆಡೆ ಗುಡ್ಡ ಕುಸಿಯುವ ಭೀತಿ ಆವರಿಸಿದೆ. ಈ ಹಿಂದೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿ ವಾಹನ ಸಂಚಾರ ಸ್ಥಗಿತಕ್ಕೆ ಕಾರಣವಾಗಿದ್ದ ದೊಡ್ಡತಪ್ಲು (ಸಕಲೇಶಪುರದಿಂದ ಮಂಗಳೂರು ಕಡೆಗೆ ತೆರಳುವ ಮಾರ್ಗ) ಬಳಿ ಈ ಬಾರಿಯೂ ಆತಂಕ ಹೆಚ್ಚಾಗಿದೆ. ಈ ಸೂಕ್ಷ್ಮ ಪ್ರದೇಶದಲ್ಲಿ ಸದ್ಯ 200 ಮೀಟರ್‌ಗಿಂತಲೂ ಅಧಿಕ ಜಾಗದಲ್ಲಿ ರಸ್ತೆಬದಿಯ ಮಣ್ಣು ಜರಗುತ್ತಿದ್ದು, ತಡೆಗೋಡೆ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ಪರ್ಯಾಯ ಪಥ ಇರುವುದರಿಂದ ಸದ್ಯಕ್ಕಿಲ್ಲ ಟ್ರಾಫಿಕ್ ಆತಂಕ

ದೊಡ್ಡತಪ್ಲು ಬಳಿ ರಸ್ತೆ ಕಾಮಗಾರಿ ಬಾಕಿ ಇರುವುದರಿಂದ ಗುಡ್ಡದ ಮಣ್ಣು ಕುಸಿಯುತ್ತಿದ್ದರೂ, ಈ ಬಾರಿ ವಾಹನ ಸಂಚಾರಕ್ಕೆ ತಕ್ಷಣದ ದೊಡ್ಡ ಆತಂಕ ಎದುರಾಗಿಲ್ಲ. ಹೆದ್ದಾರಿಯ ಮತ್ತೊಂದು ಪಥದ ರಸ್ತೆಯು ಮುಕ್ತವಾಗಿದ್ದು, ಅದರ ಮೂಲಕವೇ ಸದ್ಯ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದಾಗ್ಯೂ, ಮಳೆಯ ಪ್ರಮಾಣ ಹೀಗೆಯೇ ಮುಂದುವರಿದರೆ ಅಪಾಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಸಕಲೇಶಪುರ ತಹಶೀಲ್ದಾರ್ ಕಟ್ಟುನಿಟ್ಟಿನ ಆದೇಶ

ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ, ನದಿ-ಹಳ್ಳಗಳ ನೀರಿನ ಮಟ್ಟದಲ್ಲಿನ ಅಸಾಧಾರಣ ಏರಿಕೆ ಹಾಗೂ ರಸ್ತೆ-ಗುಡ್ಡ ಕುಸಿತದ ಮುನ್ಸೂಚನೆ ಹಿನ್ನೆಲೆಯಲ್ಲಿ ಸಕಲೇಶಪುರ ತಾಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರು ಜುಲೈ 7ರಂದು ಮಹತ್ವದ ಅಧಿಕೃತ ಆದೇಶವೊಂದನ್ನು ಹೊರಡಿಸಿದ್ದಾರೆ. ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆಯ ಹಿತದೃಷ್ಟಿಯಿಂದ ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿರುವ ಎಲ್ಲಾ ಜಲಪಾತಗಳು, ನದಿಗಳು, ಹಳ್ಳಗಳು, ಜಲಾಶಯಗಳು, ಗುಡ್ಡಗಾಡು ಪ್ರದೇಶಗಳು ಹಾಗೂ ಭೂಕುಸಿತ ಸಂಭವಿಸಬಹುದಾದ ಜಾಗಗಳಿಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ಭೇಟಿ ನೀಡುವುದನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಎಚ್ಚರಿಕೆ

ಯಾವುದೇ ವ್ಯಕ್ತಿ, ಸಂಘ-ಸಂಸ್ಥೆಗಳು ಅಥವಾ ಪ್ರವಾಸಿಗರು ಈ ನಿಷೇಧಿತ ಪ್ರದೇಶಗಳಿಗೆ ಪ್ರವೇಶಿಸುವುದು ಅಥವಾ ಪ್ರವೇಶಿಸಲು ಅವಕಾಶ ಕಲ್ಪಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಜೊತೆಗೆ, ತಾಲೂಕಿನ ಎಲ್ಲಾ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಪ್ರವಾಸಿಗರಿಗೆ ಯಾವುದೇ ರೀತಿಯಲ್ಲಿ ಟ್ರೆಕ್ಕಿಂಗ್ ವ್ಯವಸ್ಥೆ ಕಲ್ಪಿಸಬಾರದು ಎಂದು ಸೂಚನೆ ನೀಡಲಾಗಿದೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಮಾಲೀಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us