
ಹಾಸನ, (ಆಗಸ್ಟ್ 25): ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ (Writer banu Mushtaq) ಅವರನ್ನು ಮೈಸೂರು ದಸರಾ (Mysuru Dasara 2025) ಉದ್ಘಾಟಕರಾಗಿ ಆಯ್ಕೆ ಮಾಡಿರುವುದಕ್ಕೆ ರಾಜ್ಯ ಸರ್ಕಾರದ ನಡೆಗೆ ವಿರೋಧಗಳು ವ್ಯಕ್ತವಾಗಿವೆ. ಬಾನು ಮುಷ್ತಾಕ್ ಅವರಿಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದೆಯಾ? ಹಿಂದೂ ಧರ್ಮವನ್ನು ಗೌರವಿಸದವರನ್ನು ಹೇಗೆ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಾರೆ ಅಂತೆಲ್ಲಾ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದಾರೆ. ಈ ಎಲ್ಲಾ ಪರ ವಿರೋಧದ ಚರ್ಚೆ ನಡುವೆ ಬೆಂಗಳೂರಿನ ಕಲಾವಿದೆ ಅಮ್ಮನ ಮಡಿಲು ಸಂಸ್ಥಾಪಕಿ ಹಾಸನದ ಬಾನು ಮುಷ್ತಾಕ್ ಅವರ ನಿವಾಸಕ್ಕೆ ಭೇಟಿ ನೀಡಿ ಹಿಂದೂ ಸಂಪ್ರದಾಯದಂತೆ ಬಾಗಿನ ಅರ್ಪಣೆ ಮಾಡಿದರು. ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವುದರಿಂದ ಹೂ, ಬಳೆ ,ಸೀರೆ ಅರಿಶಿನ ಕುಂಕುಮ ನೀಡಿ ಶುಭ ಹಾರೈಸಿದರು.
ನಿನ್ನೆ ಅಷ್ಟೇ ಲಂಡನ್ ನಿಂದ ಹಾಸನದ ಮನೆಗೆ ಆಗಮಿಸಿದ ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಬಗ್ಗೆ ಇದೇ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದರು. ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಖಂಡಿತ ಇದು ನನಗೆ ಖುಷಿ ವಿಚಾರ. ಇದನ್ನ ನಾವು ಹಲವು ಪ್ರಭೇದಗಳಲ್ಲಿ ನೋಡಬಹುದು. ನೀವು ಚಾಮುಂಡೇಶ್ವರಿ ತಾಯಿ ಅಂತಿರಿ ನಿಮ್ಮ ಭಾವವನ್ನು ಗೌರವಿಸುತ್ತೇನೆ. ಅನೇಕರು ಇದನ್ನ ನಾಡಹಬ್ಬ ಅಂತಾರೆ. ಅದನ್ನು ಸಹ ಗೌರವಿಸುತ್ತೇನೆ. ನಾಡ ಹಬ್ಬ, ಚಾಮುಂಡೇಶ್ವರಿ ತಾಯಿ ಅಂತಾ ಪ್ರೀತಿ ಅಭಿಮಾನದಿಂದ ಕರೀತೀರಿ . ಇದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ಹಾಗಾಗಿ ಇದು ನನಗೂ ಪ್ರಿಯವಾಗಿದೆ ಎಂದರು.
ನಾನು ಗೌರವಿಸುವ ಹಬ್ಬವಾಗಿದೆ. ಪ್ರೀತಿಯಿಂದ ಬಾಗಿಯಾಗುವ ಹಬ್ಬವಾಗಿದೆ. ನಾನು ತಂದೆ ತಾಯಿ ಜೊತೆ ಹಲವು ಬಾರಿ ಜಂಬು ಸವಾರಿ ನೋಡಲು ಹೋಗುತ್ತಿದ್ದೆ. ಈಗ ನಾನೇ ದಸರಾ ಉದ್ಘಾಟನೆ ಮಾಡಲು ಆಹ್ವಾನ ಬಂದಿದೆ. ಹಾಗಾಗಿ ನನಗೆ ಸಂತೋಷ ವಾಗಿದೆ ಎಂದು ಹೇಳಿದರು.
ಇನ್ನು ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಾನು ಮುಷ್ತಾಕ್ ಅವರು ಈ ಹಿಂದೆ ಭುವನೇಶ್ವರಿ ಬಗ್ಗೆ ಮಾತನಾಡಿದ್ದ ವಿಡಿಯೋ ಹಂಚಿಕೊಂಡು ಟೀಕಿಸಿದ್ದಾರೆ. ಕನ್ನಡವನ್ನ ಭುವನೇಶ್ವರಿಯಾಗಿ ಮಾಡಿಬಿಟ್ರಿ. ಬಾವುಟವನ್ನ ಹರಿಶಿನಿ ಕುಂಕುಮವಾಗಿ ಮಾಡಿಬಿಟ್ರಿ. ನಾನು ಎಲ್ಲಿ ನಿಲ್ಲಬೇಕು ಎಂದು ಬಾನು ಮುಷ್ತಾಕ್ ಮಾತನಾಡಿದ್ದರು. ಇದೇ ಹೇಳಿಕೆ ವಿಡಿಯೋವನ್ನ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದು, ಕನ್ನಡವನ್ನ ಭುವನೇಶ್ವರಿಯಾಗಿ ಒಪ್ಪದ ಬಾನು ಮುಷ್ತಾಕ್, ತಾಯಿ ಚಾಮುಂಡೇಶ್ವರಿ ಒಪ್ಪಿ ಪುಷ್ಪಾರ್ಚನೆ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಅತ್ತ ಬಿಜೆಪಿ ವಿರೋಧ ಮಾಡುತ್ತಿದ್ದರೆ ಇತ್ತ ಮಿತ್ರ ಪಕ್ಷದ ನಾಯಕ ಎಚ್ ಡಿ ರೇವಣ್ಣ ಸರ್ಕಾರದ ಆಯ್ಕೆಯನ್ನು ಸ್ವಾಗತಿಸಿದ್ದಾರೆ. ಹಾಸನ ಭಾನು ಮುಷ್ತಾಕ್ ನಮ್ಮ ಜಿಲ್ಲೆಯ ಮಹಿಳೆ . ಅವರೊಬ್ಬ ಹೋರಾಟಗಾರ್ತಿ. ಹಾಗಾಗಿ ಅವರು ದಸರಾ ಉದ್ಘಾಟನೆ ಮಾಡಿದ್ರೆ ಸಂತೋಷ. ಪಕ್ಷ ಯಾವುದೇ ಇರಲಿ ಧರ್ಮ ಅಂತಾ ಬೇರ್ಪಡಿಸುವುದು ಬೇಡ. ನಾವೆಲ್ಲಾ ಒಂದು. ಸಮಾಜದಲ್ಲಿ ಹಿಂದು ಮುಸ್ಲಿಮ್ ಎಲ್ಲಾ ಒಂದೆ. ಎಲ್ಲರೂ ಭಾರತೀಯರು. ಎಲ್ಲರೂ ಒಂದಾಗಿ ದೇಶ ಉಳಿಸಬೇಕು. ರಾಜಕೀಯ ಬಿಟ್ಟಾಕಿ. ಅವರಿಗೆ ವಿರೋಧ ಮಾಡಬಾರದು ಎಂದು ಸಲಹೆ ನೀಡಿದರು.