ಹೈದರಾಲಿ, ಟಿಪ್ಪು ಸುಲ್ತಾನ್ ದಸರಾ ಮುನ್ನಡೆಸಿಕೊಂಡು ಹೋಗಿದ್ದರು: ತನ್ವೀರ್ ಸೇಠ್
ದಸರಾ ಉದ್ಘಾಟನಾ ಸಮಾರಂಭಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತಿಹಾಸದಲ್ಲಿ ವಿವಿಧ ವ್ಯಕ್ತಿಗಳು ದಸರಾ ಉದ್ಘಾಟನೆ ಮಾಡಿದ್ದಾರೆ ಎಂಬುದನ್ನು ಉಲ್ಲೇಖಿಸಿದ ಅವರು, ಮಹಾರಾಜರ ಅನುಪಸ್ಥಿತಿಯಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್ ಕೂಡ ದಸರಾ ಮುನ್ನಡೆಸಿಕೊಂಡು ಹೋಗಿದ್ದರು ಎಂದಿದ್ದಾರೆ.

ಮೈಸೂರು, ಆಗಸ್ಟ್ 25: ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಕನ್ನಡಿಗ ಲೇಖಕಿ ಬಾನು ಮುಷ್ತಾಕ್ (Banu Mushtaq) ಅವರನ್ನು ಆಯ್ಕೆ ಮಾಡಿರುವುದನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಶ್ನಸಿದ್ದಾರೆ. 2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಮುಷ್ತಾಕ್ ಮಾತನಾಡಿದ್ದ ವಿಡಿಯೋವನ್ನು ಹಂಚಿಕೊಂಡ ಪ್ರತಾಪ್ ಸಿಂಹ, ‘ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಬೂಕರ್ ಬಾನು’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದು, ಮಹಾರಾಜರ ಅನುಪಸ್ಥಿತಿಯಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್ 18 ವರ್ಷಗಳ ಕಾಲ ದಸರಾವನ್ನು ಮುನ್ನಡೆಸಿಕೊಂಡು ಹೋಗಿದ್ದರು ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ತನ್ವೀರ್ ಸೇಠ್, ವಿಜಯನಗರ ಸಾಮ್ರಾಜ್ಯ ಇದ್ದಾಗ ದಸರಾ ಶುರು ಮಾಡಲಾಗಿತ್ತು. ತದನಂತರ ನಮ್ಮಲ್ಲಿ ಮಹಾರಾಜರ ಪಟ್ಟಾಭಿಷೇಕ ಆಗದೇ ಇದ್ದಂತಹ ಸಂದರ್ಭದಲ್ಲಿ ಸುಮಾರು 18ಕ್ಕೂ ವರ್ಷಗಳ ಕಾಲ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ದಸರಾ ಮುಂದುವರಿಸಿಕೊಂಡು ಹೋದರು ಎಂಬ ಒಂದು ಇತಿಹಾಸ ಇದೆ. ತದನಂತರ 1974ರ ನಂತರ ಸರ್ಕಾರ ಜವಾಬ್ದಾರಿ ವಹಿಸಿಕೊಂಡಂತಹ ಸಂದರ್ಭದಿಂದ ಅನೇಕ ಮಹಾನ್ ವ್ಯಕ್ತಿಗಳು, ಸಾಹಿತಿಗಳು, ಸಮಾಜದ ಮುಖ್ಯವಾದಂತಹ ವ್ಯಕ್ತಿಗಳು ಉದ್ಘಾಟನೆ ಮಾಡಿದ್ದಾರೆ ಎಂದು ಹೇಳಿದರು.
ತನ್ವೀರ್ ಸೇಠ್ ಹೇಳಿಕೆಯ ವಿಡಿಯೋ
ನಿಸಾರ್ ಅಹ್ಮದ್ ಅವರಿಂದ ಹಿಡಿದು ಸಾಮಾನ್ಯ ಒಬ್ಬ ರೈತನು ಕೂಡ ದಸರಾ ಉದ್ಘಾಟನೆ ಮಾಡಿದಂತಹ ಸಂದರ್ಭಗಳಿವೆ. ನಾಸ್ತಿಕರಾಗಿರುವ ಬರಗೂರು ರಾಮಚಂದ್ರಪ್ಪ ಅವರು, ‘ನಾನು ಪೂಜೆ ಮಾಡಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಅದರು ಸರಿಯೋ ತಪ್ಪೋ ಎಂಬುದು ಬೇರೆ, ಆ ಸಂದರ್ಭದಲ್ಲಿ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ ಎಂದು ಸೇಠ್ ನೆನಪಿಸಿಕೊಂಡರು.
ಇದನ್ನೂ ಓದಿ: ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದವರು ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಪ್ರಶ್ನೆ
ದಸರಾ ಉದ್ಘಾಟನೆಗೆ ಸರ್ಕಾರ ಆಹ್ವಾನ ಮಾಡುವುದು ನಮ್ಮ ಕಾರ್ಯಕ್ರಮಗಳ ಚಾಲನೆ ಕೊಡುವುದಕ್ಕೆ. ಪೂಜೆ ಪುರಸ್ಕಾರಗಳು ಮತ್ತು ಇದರ ಸಂಪೂರ್ಣವಾದಂತ ಹೊಣೆಗಾರಿಕೆ ಸರ್ಕಾರ ನಡೆಸಿಕೊಂಡು ಬಂದಿದೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಇವತ್ತು ವ್ಯಕ್ತಿ ಗಳಿಸಿರುವಂತಹ ಆ ಸ್ಥಾನಮಾನಗಳನ್ನು ಗೌರವಿಸಿ ನಾವು ಉದ್ಘಾಟಕರಾಗಿ ಕರೆಯುತ್ತೇವೆ. ಇದರಲ್ಲಿ ಜಾತಿ ಮತ್ತು ಧರ್ಮ ಇಲ್ಲ. ಇಲ್ಲಿ ಬೇಕಾಗಿರುವಂತಹದ್ದು ಸಾಹಿತ್ಯ ಲೋಕದಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ ಎಂಬುದಷ್ಟೇ ಎಂದು ತನ್ವೀರ್ ಸೇಠ್ ಹೇಳಿದರು.




