ನಾಯಿಗಳ ದಾಳಿಗೆ ತತ್ತರಿಸಿದ ಜಿಂಕೆ; ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಕಾಡು ಸೇರಿದ ಮೂಕಪ್ರಾಣಿಗಳು

| Updated By: Skanda

Updated on: Apr 20, 2021 | 8:40 AM

ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಗಂಡು ಜಿಂಕೆ ಮತ್ತು ಹೆಣ್ಣು ಜಿಂಕೆ ಗಾಯಗೊಂಡು ಈಶ್ವರ ನಗರದ ನಿವಾಸಿಗಳ ಕಣ್ಣಿಗೆ ಬಿದ್ದಿತ್ತು. ಇದನ್ನು ಕಂಡ ಸ್ಥಳೀಯರು, ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ನಾಯಿಗಳ ದಾಳಿಗೆ ತತ್ತರಿಸಿದ ಜಿಂಕೆ; ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಕಾಡು ಸೇರಿದ ಮೂಕಪ್ರಾಣಿಗಳು
ಜಿಂಕೆಗೆ ಆರೈಕೆ ಮಾಡುತ್ತಿರುವ ದೃಶ್ಯ
Follow us on

ಹಾವೇರಿ : ಈಗ ಎಲ್ಲಾ ಕಡೆ ಬಿಸಿಲಿನ ಆರ್ಭಟ ಜೋರಾಗಿದೆ. ಅರಣ್ಯದಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವುದಕ್ಕೆ‌ ನೀರು ಕೂಡ ಸರಿಯಾಗಿ ಸಿಗುತ್ತಿಲ್ಲ. ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿರುವ ಕಾಡಿನ ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಮತ್ತೊಂದೆಡೆ ಕಾಡಂಚಿನ ರೈತರು ಸಾಕಿರುವ ನಾಯಿಗಳು ಕಾಡಿನಲ್ಲಿರುವ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ. ಇಂತಹದ್ದೇ ಒಂದು ಘಟನೆ ಹಾವೇರಿಯಲ್ಲಿ ನಡೆದಿದ್ದು, ನಾಯಿಗಳ ದಾಳಿಗೆ ಹೆದರಿ ದಾರಿ ತಪ್ಪಿದ ಎರಡು ಜಿಂಕೆಗಳನ್ನು ಸ್ಥಳೀಯರು ರಕ್ಷಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನಿಂದ ಅರಣ್ಯಕ್ಕೆ ಅವುಗಳನ್ನು ವಾಪಸ್ ಕಳಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ನಿಟಗಿನಕೊಪ್ಪ ಗ್ರಾಮದ ಬಳಿ ಇರುವ ರೈತರ ಶುಂಠಿ ಜಮೀನಿನಲ್ಲಿ ಹೆಣ್ಣು ಜಿಂಕೆಯೊಂದು ಗಾಯಗೊಂಡು ಒದ್ದಾಡುತ್ತಿತ್ತು. ಮತ್ತೊಂದು ಗಂಡು ಜಿಂಕೆ ಹಾನಗಲ್ ಪಟ್ಟಣದ ಈಶ್ವರ ನಗರದ ಬಳಿ ಗಾಯಗೊಂಡು ಒದ್ದಾಡುತ್ತಿತ್ತು. ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಗಂಡು ಜಿಂಕೆ ಗಾಯಗೊಂಡು ಈಶ್ವರ ನಗರದ ನಿವಾಸಿಗಳ ಕಣ್ಣಿಗೆ ಬಿದ್ದಿತ್ತು. ಇದನ್ನು ಕಂಡ ಸ್ಥಳೀಯರು, ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅಲ್ಲಿಗೆ ತೆರಳಿದ ಎಎಸ್ಐ ಕನವಳ್ಳಿ ಹಾಗೂ ಅವರ ವಾಹನ ಚಾಲಕ ಜಿಂಕೆಯನ್ನು ಸ್ಥಳೀಯರ ನೆರವಿನಿಂದ ರಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆಗೆ ಅಗತ್ಯ ಆರೈಕೆ ನೀಡಿದ್ದಾರೆ.

ಅದೇ ರೀತಿ ಹಾನಗಲ್‌ ಪೊಲೀಸ್ ಠಾಣೆಯ ಗಸ್ತು ವಾಹನದಲ್ಲಿ ಎಎಸ್ಐ ಎನ್.ಜಿ.ಕನವಳ್ಳಿ ಹಾಗೂ ಅವರ ವಾಹನ ಚಾಲಕ ಗಸ್ತು ಕರ್ತವ್ಯದಲ್ಲಿ ನಿರತರಾಗಿದ್ದರು. ಈ ವೇಳೆ ನಿಟಗಿನಕೊಪ್ಪದ ಬಳಿ ಹೋಗುವಾಗ ಹೆಣ್ಣು ಜಿಂಕೆ ಗಾಯಗೊಂಡು ರೈತರ ಜಮೀನಿನಲ್ಲಿ ಬಿದ್ದು ಒದ್ದಾಡುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಎಎಸ್ಐ ಕನವಳ್ಳಿ ಮತ್ತು ಅವರ ವಾಹನ ಚಾಲಕ ಜಿಂಕೆಯನ್ನು ವಾಹನದಲ್ಲಿ ಹಾಕಿಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಇದನ್ನೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳು ಗಾಯಗೊಂಡ ಜಿಂಕೆಯನ್ನು ವಶಕ್ಕೆ ಪಡೆದು ಚಿಕಿತ್ಸೆ ನೀಡಿದ್ದಾರೆ.

ಹೀಗೆ ವಶಕ್ಕೆ ಪಡೆದ ಎರಡೂ ಜಿಂಕೆಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಅವುಗಳನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ. ಈ ಬಗ್ಗೆ ಮಾತನಾಡಿದ ಎಎಸ್ಐ ಎನ್.ಜಿ.ಕನವಳ್ಳಿ, ಗಸ್ತು ವಾಹನದಲ್ಲಿ ಕರ್ತವ್ಯದಲ್ಲಿದ್ದಾಗ ಜಿಂಕೆಗಳು ಗಾಯಗೊಂಡು ಒದ್ದಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಕೂಡಲೆ ಸ್ಥಳಕ್ಕೆ ಧಾವಿಸಿ ನಮ್ಮ ಕೈಲಾದ ಪ್ರಾಥಮಿಕ ಚಿಕಿತ್ಸೆ ನೀಡಿ, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಚಿಕಿತ್ಸೆ ಕೊಡಿಸಿ ಮರಳಿ ಅರಣ್ಯ ಸೇರುವಂತೆ ಮಾಡಿದೆವು. ಎರಡೂ ಜಿಂಕೆಗಳಿಗೆ ಗಾಯಗಳಾಗಿದ್ದವು. ನಾವು ಮತ್ತು ಅರಣ್ಯ ಇಲಾಖೆಯವರು ಸೇರಿ ಚಿಕಿತ್ಸೆ ನೀಡಿದ್ದೇವೆ. ಸದ್ಯ ಜಿಂಕೆಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅವುಗಳನ್ನು ಮರಳಿ ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಬದುಕಿತು ಬಡಜೀವ: ನಾಯಿಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸಿದ ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳು

ಜಿಂಕೆ ಮೇಲೆ ನಾಯಿ ದಾಳಿ: ಹೋರಾಟದಲ್ಲಿ ಸಾವಿಗೀಡಾದ ಸಾಧು ಪ್ರಾಣಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರಿಟ್ಟ ಸ್ಥಳೀಯರು

(Haveri forest department officials rescued the deer from dog attack)