ಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮೂಲಕ ಹೆಸರು ಗಳಿಸಿದ್ದ ಕಿಮ್ಸ್ ಆಸ್ಪತ್ರೆ ಈಗ ಮತ್ತೆ ಕೊರೊನಾ ಎರಡನೇ ಅಲೆಯನ್ನು ಕಟ್ಟಿ ಹಾಕಲು ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭಿಸಿದೆ. ಕೊವಿಡ್ ಇಳಿಮುಖವಾಗಿದ್ದ ಪರಿಣಾಮ ಕಿಮ್ಸ್ಲ್ಲಿ ಸ್ಥಗಿತಗೊಂಡಿದ್ದ ಪ್ಲಾಸ್ಮಾ ಥೆರಪಿ ಮತ್ತೆ ಆರಂಭವಾಗಿದೆ. 2ನೇ ಅಲೆಯಲ್ಲಿ ಕೊರೊನಾ ವೇಗವಾಗಿ ಸಮುದಾಯವನ್ನ ಆವರಿಸುತ್ತಿದ್ದು, ಸಾವಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಕಿಮ್ಸ್ ವೈದ್ಯರು ಮತ್ತೆ ಫ್ಲಾಸ್ಮಾ ಥೆರಪಿ ಮೊರೆ ಹೋಗಿದ್ದಾರೆ.
ಎರಡನೇ ಅಲೆಯ ಕೊರೊನಾ ತಗುಲಿದ ಮೂವರು ಕೊರೊನಾ ರೋಗಿಗಳಿಗೆ ಈಗಾಗಲೇ ಥೆರಪಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಕೊರೊನಾ ಮೊದಲ ಅಲೆ ವೇಳೆ ರಾಜ್ಯದಲ್ಲಿಯೇ ಮೊದಲ ಬಾರಿ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಪಡೆದಿದ್ದು ಇದೇ ಹುಬ್ಬಳ್ಳಿಯ ಕಿಮ್ಸ್ ವೈದ್ಯರು. ಸದ್ಯ ಎರಡನೇ ಅಲೆಯಲ್ಲೂ ಮತ್ತೆ ಫ್ಲಾಸ್ಮಾ ಥೆರಪಿ ಅರಂಭಿಸಿದ್ದು, ಒಂದಿಷ್ಟು ಜೀವಗಳಿಗೆ ಸಂಜೀವಿನಿ ನೀಡುವ ಕೆಲಸ ಮಾಡುತ್ತಿದ್ದಾರೆ.
ಕಳೆದ ವರ್ಷ ಐಸಿಎಂಆರ್ ಒಪ್ಪಿಗೆ ಪಡೆದು ಮೇ ತಿಂಗಳಲ್ಲಿ ಸ್ಮಶಾನ ಕಾಯುತ್ತಿದ್ದ 64 ವರ್ಷದ ವೃದ್ಧನ ಮನವೊಲಿಸಿ ಪ್ಲಾಸ್ಮಾ ಪಡೆದು 65 ವರ್ಷದ ಸೋಂಕಿತನಿಗೆ ಥೆರಪಿ ನೆರವೇರಿಸಲಾಗಿತ್ತು. ಕಳೆದ ಡಿಸೆಂಬರ್ ವೇಳೆಗೆ ಬರೋಬ್ಬರಿ 108 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಒದಗಿಸಲಾಗಿತ್ತು. ಅದಾದ ಬಳಿಕ ಕೊರೊನಾ ಗ್ರಾಫ್ ಇಳಿದ ಹಿನ್ನೆಲೆ ಫೆಬ್ರವರಿ ವೇಳೆಗೆ ಪ್ಲಾಸ್ಮಾ ಥೆರಪಿ ಬಹುತೇಕ ನಿಂತಿತ್ತು. ಆದರೂ ಮುಂಜಾಗ್ರತೆ ಕ್ರಮವಾಗಿ ತಲಾ 200 ಎಂಎಲ್ನ 12 ಬಾಟಲ್ ಹಾಗೂ ಒಂದು 100 ಎಂಎಲ್ ಬಾಟಲ್ ಪ್ಲಾಸ್ಮಾ ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಸಂಗ್ರಹಿಸಡಲಾಗಿತ್ತು.
ಈ ಬಾರಿ ಮತ್ತೆ ಕೊರೊನಾ ಹರಡುವಿಕೆ ಹೆಚ್ಚಾಗಿದ್ದು, ಪರಿಣಾಮ ಕಿಮ್ಸ್ನಲ್ಲಿ ಕನಿಷ್ಠ 8 ಕ್ಕೆ ಇಳಿದಿದ್ದ ರೋಗಿಗಳ ಸಂಖ್ಯೆ ಪ್ರತಿ ದಿನ ನೂರರ ಗಡಿದಾಟುತ್ತಿದೆ. ಹೀಗಾಗಿ ಉಸಿರಾಟದ ಸಮಸ್ಯೆ ಇರುವ ಕೊರೊನಾ ರೋಗಿಗಳಿಗೆ ಸದ್ಯ ಫ್ಲಾಸ್ಮಾ ಥೆರಪಿ ಮಾಡಲಾಗುತ್ತಿದೆ. ಕಿಮ್ಸ್ನಲ್ಲಿ ಸಂಗ್ರಹವಿರುವ ಪ್ಲಾಸ್ಮಾವನ್ನು ಬಳಕೆ ಮಾಡಲಾಗುತ್ತಿದೆ.
ಕೊರೊನಾದಿಂದ ಗುಣಮುಖರಾಗಿ ರೋಗನಿರೋಧಕ ಶಕ್ತಿ ಬೆಳೆದವರು ಮಾತ್ರ ಪ್ಲಾಸ್ಮಾ ದಾನ ಮಾಡಲು ಶಕ್ತರು. ಇಂಥವರಿಂದ 400 ಮಿಲೀ ಪ್ಲಾಸ್ಮಾ ಪಡೆಯಲಾಗುತ್ತದೆ. ಅದರಲ್ಲಿ ತೀವ್ರ ತರಹದ ಸೋಂಕುಳ್ಳ ವ್ಯಕ್ತಿಗೆ 200 ಎಂಎಲ್ ಪ್ಲಾಸ್ಮಾವನ್ನು ಮೊದಲ ಬಾರಿಗೆ ನೀಡಲಾಗುತ್ತದೆ. ಕೆಲ ದಿನಗಳ ನಂತರ ಮತ್ತೆ 200 ಎಂಎಲ್ ಕೊಡಲಾಗುತ್ತದೆ. ಹೀಗೆ ಫ್ಲಾಸ್ಮಾ ನೀಡುವ ಮೂಲಕ ಕೊರೊನಾದಿಂದ ತೀವ್ರ ಬಳಲುವ ವ್ಯಕ್ತಿಗೆ ಮತ್ತೆ ಜೀವದಾನ ನೀಡುವ ಕೆಲಸವನ್ನು ಕಿಮ್ಸ್ ವೈದ್ಯರು ಮಾಡುತ್ತಿದ್ದಾರೆ.
ಸದ್ಯ ಕೊರೊನಾ ಎರಡನೇ ಅಲೆ ಜೊರಾಗಿದೆ. ನಮ್ಮಲ್ಲಿಯೂ ಸಾಕಷ್ಟು ರೋಗಿಗಳು ದಾಖಲಾಗುತ್ತಿದ್ದಾರೆ. ಯಾರಿಗೆಲ್ಲಾ ಫ್ಲಾಸ್ಮಾ ಅವಶ್ಯಕತೆ ಇದೆ ಅಂಥವರನ್ನ ಗುರತಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಇನ್ನು ಮುಂದುವರೆಯುತ್ತದೆ. ಅಲ್ಲದೆ ಕೊರೊನಾದಿಂದ ಗುಣಮುಖರಾದವರು ಫ್ಲಾಸ್ಮಾ ದಾನ ಮಾಡಬೇಕು. ಅದು ಬೆರೋಂದು ಜೀವವನ್ನ ಉಳಿಸುತ್ತದೆ. ನಮ್ಮ ವೈದ್ಯರು ಕೂಡ ಸಾಕಷ್ಟು ಜನರನ್ನ ಮನವೊಲಿಸಿ ಫ್ಲಾಸ್ಮಾ ಸಂಗ್ರಹಿಸಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ರಾಮಲಿಂಗಪ್ಪ ಅಂಟರತಾನಿ ಹೇಳಿದ್ದಾರೆ.
ಇದನ್ನೂ ಓದಿ:
ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಭೋಜನ ವ್ಯವಸ್ಥೆ; ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ವಿಶೇಷ ಆರೈಕೆ
ಕರಡಿ ದಾಳಿಯಿಂದ ಮಗುವಿನ ಮುಖಕ್ಕೆ ಗಾಯ: ಪ್ಲಾಸ್ಟಿಕ್ ಸರ್ಜರಿಯಿಂದ ಜೀವ ಉಳಿಸಿದ ಕಿಮ್ಸ್ ಆಸ್ಪತ್ರೆ ತಜ್ಞರು
(Due to second wave of coronavirus Hubli KIMS hospital started plasma therapy again)