1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ, ಒಂದು ತಿಂಗಳಲ್ಲಿ ಹಾಳು; ಹಾವೇರಿ ಗ್ರಾಮಸ್ಥರಿಂದ ಆಕ್ರೋಶ
ಒಂದು ತಿಂಗಳ ಹಿಂದಷ್ಟೇ ನಿರ್ಮಾಣವಾಗಿರುವ ರಸ್ತೆ ಬಹುತೇಕ ಕಡೆಗಳಲ್ಲಿ ಹಾಳಾಗಿ ಹೋಗಿದೆ. ರಸ್ತೆಯಲ್ಲಿ ಡಾಂಬರು ಕಾಣದಂತಾಗಿದೆ. ಅರ್ಧ ಇಂಚಿನಷ್ಟು ಆಳವಾಗಿ ರಸ್ತೆ ಮೇಲೆ ಕಡಿ, ಡಾಂಬರು ಹಾಕಿಲ್ಲ. ಹೀಗಾಗಿ ರಸ್ತೆ ಈಗಲೆ ಕಿತ್ತು ಹೋಗಿದೆ. ಕಿತ್ತು ಹೋಗಿರುವ ರಸ್ತೆ ನೋಡಿ ಜನರು ಆಕ್ರೋಶಗೊಂಡಿದ್ದಾರೆ.
ಹಾವೇರಿ: ಇತ್ತೀಚೆಗೆ ಕಳಪೆ ಕಾಮಗಾರಿ ಬಗ್ಗೆ ಸಾಕಷ್ಟು ವರದಿಗಳು ದಾಖಲಾಗಿರುವ ಬಗ್ಗೆ ನಾವು ಓದ್ದಿದ್ದೇವೆ. ಅಂತಹದ್ದೇ ಘಟನೆಯೊಂದು ಸದ್ಯ ಹಾವೇರಿಯಲ್ಲಿ ನಡೆದಿದ್ದು, ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಸ್ತೆ. ಕೇವಲ ಒಂದೇ ತಿಂಗಳಲ್ಲಿ ಕಿತ್ತು ಹೋಗಿದೆ. ರಸ್ತೆ ಮೇಲೆ ಸ್ವಲ್ಪೇ ಸ್ವಲ್ಪ ಕೈಯಿಂದ ಅಲುಗಾಡಿಸಿದರೆ ಸಾಕು, ರಸ್ತೆ ಕಿತ್ತು ಬರುತ್ತಿದೆ. ಅಲ್ಲದೆ ಅಲ್ಲಲ್ಲಿ ಸಣ್ಣ ಸಣ್ಣ ಗುಂಡಿಗಳು ಬಿದ್ದಿವೆ. ಇದು ಸಹಜವಾಗಿಯೇ ಈ ಭಾಗದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಿಂದ ಹೊಸರಿತ್ತಿ ಗ್ರಾಮದವರೆಗಿನ 6 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಹೀಗಾಗಿ ಗ್ರಾಮಸ್ಥರು ರಸ್ತೆ ಕಾಮಗಾರಿ ಮಾಡುವಂತೆ ಒತ್ತಾಯಿಸಿದ್ದಾರೆ. ಅದರಂತೆ ಪಿಆರ್ಡಿ ಯೋಜನೆಯಡಿ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ಈಗಾಗಲೇ ರಸ್ತೆ ನಿರ್ಮಾಣ ಕಾಮಗಾರಿ ಮುಗಿಸಿದ್ದಾರೆ. ಈ ರಸ್ತೆ ನಿರ್ಮಾಣವಾಗಿ 1 ತಿಂಗಳು ಕಳೆದಿದೆ. ಆದರೆ ಅದಾಗಲೇ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದೆ. ರಸ್ತೆಯಲ್ಲಿ ಸಣ್ಣ ಗುಂಡಿಗಳು ಬಿದ್ದಿವೆ ಎಂದು ಗ್ರಾಮ ಪಂಚಾಯತಿ ಸದಸ್ಯ ನಾಗಣ್ಣ ಕೋಣನವರ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ತಿಂಗಳ ಹಿಂದಷ್ಟೇ ನಿರ್ಮಾಣವಾಗಿರುವ ರಸ್ತೆ ಬಹುತೇಕ ಕಡೆಗಳಲ್ಲಿ ಹಾಳಾಗಿ ಹೋಗಿದೆ. ರಸ್ತೆಯಲ್ಲಿ ಡಾಂಬರು ಕಾಣದಂತಾಗಿದೆ. ಅರ್ಧ ಇಂಚಿನಷ್ಟು ಆಳವಾಗಿ ರಸ್ತೆ ಮೇಲೆ ಕಡಿ, ಡಾಂಬರು ಹಾಕಿಲ್ಲ. ಹೀಗಾಗಿ ರಸ್ತೆ ಈಗಲೆ ಕಿತ್ತು ಹೋಗಿದೆ. ಕಿತ್ತು ಹೋಗಿರುವ ರಸ್ತೆ ನೋಡಿ ಜನರು ಆಕ್ರೋಶಗೊಂಡಿದ್ದಾರೆ. ಒಂದೂವರೆ ಕೋಟಿ ರೂಪಾಯಿಯ ಹಣಕ್ಕೆ ಟೆಂಡರ್ ಪಡೆದಿರುವ ಗುತ್ತಿಗೆದಾರರು ಅಲ್ಪಸ್ವಲ್ಪ ಹಣ ಖರ್ಚು ಮಾಡಿ ಕಾಮಗಾರಿ ಮುಗಿಸಿದ್ದಾರೆ.
ಕಳಪೆ ಕಾಮಗಾರಿ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದ್ದಕ್ಕೆ ಗುತ್ತಿಗೆದಾರರೊಬ್ಬರು, ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಕೇಸ್ ದಾಖಲಿಸೋದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಗ್ರಾಮದ ಜನರು ಕಳಪೆ ರಸ್ತೆ ಮಾಡಿದ್ದಾರೆ ಎಂದು ಪಿಆರ್ಡಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಆಗಿರುವ ಕಾಮಗಾರಿ ಪರಿಶೀಲನೆ ಮಾಡಬೇಕು. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಚನ್ನಬಸಪ್ಪ ಹಂಸಿ ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ರಸ್ತೆ ಹದಗೆಟ್ಟು ಹೋಗಿದ್ದರಿಂದ ರಸ್ತೆಯಲ್ಲಿ ಓಡಾಡೋಕೆ ಜನರು ಹರಸಾಹಸ ಪಡುತ್ತಿದ್ದರು. ಆದರೆ ಈಗ ರಸ್ತೆ ನಿರ್ಮಾಣ ಆಯ್ತು ಎಂದು ಖುಷಿಪಟ್ಟಿದ್ದ ಗ್ರಾಮಸ್ಥರಿಗೆ ಮತ್ತೆ ಬೇಸರವಾಗಿದೆ. ಕಳಪೆ ಕಾಮಗಾರಿಯಿಂದಾಗಿ ನಿರ್ಮಾಣವಾದ ಒಂದೇ ತಿಂಗಳಲ್ಲಿ ರಸ್ತೆ ಅಲ್ಲಲ್ಲಿ ಕಿತ್ತು ಹಾಳಾಗಿದೆ. ಒಂದೇ ತಿಂಗಳಲ್ಲಿ ರಸ್ತೆಯ ಪರಿಸ್ಥಿತಿ ಹೀಗಾದರೆ ಇನ್ನಷ್ಟು ದಿನಗಳ ನಂತರ ಈ ರಸ್ತೆಯಲ್ಲಿ ಓಡಾಡೋದು ಹೇಗೆ ಎಂದು ಈ ಭಾಗದ ಜನರಿಗೆ ಚಿಂತೆಯಾಗಿದೆ. ಹೀಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಸೂಕ್ತ.
ಇದನ್ನೂ ಓದಿ: ಪೂರ್ಣಗೊಳ್ಳದ ರಸ್ತೆ ಕಾಮಗಾರಿ ವಿರುದ್ಧ ಸಿಡಿದೆದ್ದ ಜನತೆ; 45 ಕಿಲೋಮೀಟರ್ ಉದ್ದದ ಔರಾದ್-ಬೀದರ್ ರಸ್ತೆ ನಿರ್ಮಾಣಕ್ಕೆ ಮನವಿ
ಕೋಟೆನಾಡಿನಲ್ಲಿ ಮುಗಿಯದ ರಸ್ತೆ ಕಾಮಗಾರಿ: ಹೆಚ್ಚಿನ ಧೂಳಿನಿಂದ ಸೃಷ್ಟಿಯಾಯ್ತು ಕೊರೊನಾ ಆತಂಕ
Published On - 1:17 pm, Tue, 6 July 21