ಸಿಲಿಂಡರ್​ಗಾಗಿ ಗ್ಯಾಸ್ ಏಜೆನ್ಸಿ ಸಿಬ್ಬಂದಿ-ಗ್ರಾಹಕನ ಮಧ್ಯೆ ಹೊಡೆದಾಟ: ಇಬ್ಬರು ಆಸ್ಪತ್ರೆಗೆ ದಾಖಲು

ಗಲ್ಫ್ ಯುದ್ಧಕ್ಕೆ ಕದನವಿರಾಮ ಬಿದ್ದಿದ್ದರೂ ಇಲ್ಲಿ ಜನರ ಸಮಸ್ಯೆ ಏನೂ ಕಡಿಮೆಯಾಗಿಲ್ಲ. ಗ್ಯಾಸ್ ಇಲ್ಲದೇ ಪರದಾಟ ಮುಂದುವರೆದಿದೆ. ಹೀಗಿರುವಾಗ ಇತ್ತ ಹಾವೇರಿಯಲ್ಲಿ ಅಡುಗೆ ಸಿಲಿಂಡರ್​ಗಾಗಿ ಸಿಬ್ಬಂದಿ ಮತ್ತು ಗ್ರಾಹಕನ ಮಧ್ಯೆ ಗಲಾಟೆ ನಡೆದಿದೆ. ಸದ್ಯ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸಿಲಿಂಡರ್​ಗಾಗಿ ಗ್ಯಾಸ್ ಏಜೆನ್ಸಿ ಸಿಬ್ಬಂದಿ-ಗ್ರಾಹಕನ ಮಧ್ಯೆ ಹೊಡೆದಾಟ: ಇಬ್ಬರು ಆಸ್ಪತ್ರೆಗೆ ದಾಖಲು
ಮ್ಯಾನೇಜರ್ ಅಲೀಂ, ಏಜೆನ್ಸಿ ಮುಂದೆ ಜಮಾಣೆಗೊಂಡಿರುವ ಜನ, ಗ್ರಾಹಕ ಮಾಲತೇಶ್​ ಗಾಜಿ
Image Credit source: tv9 kannada

Updated on: Apr 10, 2026 | 7:43 PM

ಹಾವೇರಿ, ಏಪ್ರಿಲ್​ 10: ಅತ್ತ ಮಧ್ಯ ಪ್ರಾಚ್ಯದಲ್ಲಿ ಕದನವಿರಾಮ ಘೋಷಣೆಯಾಗಿದ್ದರೂ, ಇತ್ತ ಕರುನಾಡಿನಲ್ಲಿ ಮಾತ್ರ ಇನ್ನೂ ಗ್ಯಾಸ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸೌದೆ ಒಲೆಯಲ್ಲೇ ಅಡುಗೆ ಮಾಡಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ಅಡುಗೆ ಸಿಲಿಂಡರ್​ಗಾಗಿ (Gas Cylinder) ಹಾವೇರಿಯಲ್ಲಿ ಗಲಾಟೆಯೇ (Fight) ನಡೆದಿದೆ. ಇ-ಕೆವೈಸಿ ಮಾಡಿಸಲು ಬಂದ ಗ್ರಾಹಕರ ಮೇಲೆ ಹಲ್ಲೆ HP ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡಿರುವಂತಹ ಘಟನೆ ನಗರದ ಹುಕ್ಕೇರಿಮಠದ ಎದುರಿರುವ HP ಗ್ಯಾಸ್ ಕಚೇರಿಯಲ್ಲಿ ನಡೆದಿದೆ.

ನಡೆದಿದ್ದೇನು? 

ಬ್ಲಾಕ್​​ನಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ, ನಮಗೆ ಸಿಲಿಂಡರ್ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕನಕಾಪುರ ಗ್ರಾಮದ ಮಾಲತೇಶ್​ ಗಾಜಿ ಮೇಲೆ ಮ್ಯಾನೇಜರ್ ಅಲೀಂ ಮತ್ತು ಗಣೇಶ ಸೇರಿ ನಾಲ್ವರಿಂದ ಹಲ್ಲೆ ಮಾಡಲಾಗಿದೆ. ಸದ್ಯ ಮ್ಯಾನೇಜರ್ ಅಲೀಂ ಮತ್ತು ಗಾಯಾಳು ಗ್ರಾಹಕ ಮಾಲತೇಶ್​ರನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ನಾವು ಹಲ್ಲೆ ಮಾಡಿಲ್ಲ ಎಂದ ಸಿಬ್ಬಂದಿ

ಇನ್ನು ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ. ಆದರೆ ನಾವು ಹಲ್ಲೆ ಮಾಡಿಲ್ಲ, ಅವರೇ ಹಲ್ಲೆ ಮಾಡಿ ನಮ್ಮ ಮೇಲೆ ದೂರು ನೀಡಲು ಮುಂದಾಗಿದ್ದಾರೆ ಎಂದು HP ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಸಿಸಿಟಿವಿ ಪರಿಶೀಲನೆ ಮಾಡುವಂತೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.

HP ಗ್ಯಾಸ್ ಮ್ಯಾನೇಜರ್ ಅಲೀಂ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ HP ಗ್ಯಾಸ್ ಮ್ಯಾನೇಜರ್ ಅಲೀಂ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕಚೇರಿಯಲ್ಲಿ ಕ್ಯೂ ಇತ್ತು. ಗ್ರಾಹಕ ಕ್ಯೂ ಬಿಟ್ಟು ನಮ್ಮ ಬಳಿ ಬಂದು ಇ-ಕೆವೈಸಿ ಮಾಡಿ ಎಂದಿದ್ದಾರೆ. ಕಚೇರಿಯಲ್ಲಿ ಫ್ಯಾನ್​​ ಇಲ್ಲ, ಸಿಲಿಂಡರ್ ಇಲ್ಲ ಹೇಗೆ ಕ್ಯೂ ನಿಲ್ಲುವುದು ಅಂತಾ ಬಂದು ಜಗಳ ಮಾಡಿದ್ದಾರೆ. ನಮ್ಮ ಮೇಲೆ ಗ್ರಾಹಕನೇ ಹಲ್ಲೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಓಟಿಪಿಯಿಂದ ಬದುಕಿತು ಬಡಜೀವ: 3 ದಿನ ಬಳಿಕ ಬಾವಿಯೊಳಗಿಂದ ಪವಾಡ ಸದೃಶರಾಗಿ ಬದುಕಿ ಬಂದ ವೃದ್ಧ

ಸದ್ಯ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇತ್ತ ಜಿಲ್ಲಾಸ್ಪತ್ರೆ ಮುಂದೆ ಕಚೇರಿಯ ಸಿಬ್ಬಂದಿ ಮತ್ತು ಗ್ರಾಹಕರ ಕಡೆಯ ಜನರು ಜಮಾವಣೆಗೊಂಡಿದ್ದಾರೆ. ದೂರು-ಪ್ರತಿದೂರು ಆಗುವ ಸಾಧ್ಯತೆ ಕೂಡ ಇದೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us