ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ನಿಧನ
ಮಾಜಿ ಅಬಕಾರಿ ಸಚಿವ ಹಾಗೂ ಹಾನಗಲ್ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಮನೋಹರ್ ತಹಶೀಲ್ದಾರ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಅವರ ಅಂತ್ಯಕ್ರಿಯೆ ಶುಕ್ರವಾರ ಅವರ ಹುಟ್ಟೂರಾದ ಅಕ್ಕಿವಳ್ಳಿಯಲ್ಲಿ ನಡೆಯಲಿದೆ.
ಹಾವೇರಿ, ನವೆಂಬರ್ 21: ಮಾಜಿ ಸಚಿವ ಮನೋಹರ್ ತಹಶೀಲ್ದಾರ್ (80) (Manohar Tahsildar) ನಿಧನರಾಗಿದ್ದಾರೆ. ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಮನೋಹರ್ ತಹಶಿಲ್ದಾರ ಅವರು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಶಂಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ (ನ.20)ರ ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ. ಮನೋಹರ್ ತಹಶಿಲ್ದಾರ ನಾಲ್ಕು ಜನ ಪುತ್ರರು ಇಬ್ಬರು ಪುತ್ರಿಯರು ಇದ್ದಾರೆ.
ಸಂಸದ ಬಸವರಾಜ ಬೊಮ್ಮಾಯಿ ಅವರು ಇತ್ತೀಚಿಗೆ ಚಾಮರಾಜ ಪೇಟೆಯಲ್ಲಿರುವ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಮನೋಹರ್ ತಹಶೀಲ್ದಾರ್ ಅವರ ಆರೋಗ್ಯ ವಿಚಾರಿಸಿದ್ದರು.
ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಮಾಜಿ ಶಾಸಕ ಮನೋಹರ್ ತಹಶಿಲ್ದಾರ ಅವರು 2015ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಪಕ್ಷ ಸೇರಿದ್ದರು.
ಹಾನಗಲ್ NCJC ಮಹಾವಿದ್ಯಾಲಯ ಅವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಅವರ ಹುಟ್ಟುರಾದ ಅಕ್ಕಿವಳ್ಳಿ ಗ್ರಾಮದಲ್ಲಿನ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಸಿದ್ದರಾಮಯ್ಯ ಸಂತಾಪ
ತಹಶೀಲ್ದಾರ್, ಮಾಜಿ ಸಚಿವ ಮನೋಹರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. “ಮಾಜಿ ಸಚಿವ ಮನೋಹರ್ ನಿಧನದ ಸುದ್ದಿ ತಿಳಿದು ದುಃಖವುಂಟುಮಾಡಿದೆ. ಮಾಜಿ ಸಚಿವ ಮನೋಹರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮನೋಹರ ತಹಶೀಲ್ದಾರ್ ಅವರ ಅಗಲಿಕೆಯಿಂದ ನೊಂದಿರುವ ಕುಟುಂಬ ವರ್ಗ, ಬಂಧು ಮಿತ್ರರಿಗೆ ನನ್ನ ಸಂತಾಪ” ಎಂದು ಎಕ್ಸ್ ಖಾತೆ ಮೂಲಕ ಸಿಎಂ ಸಿದ್ದಾರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೊಮ್ಮಾಯಿ ಸಂತಾಪ
“ಮಾಜಿ ಸಚಿವರು, ಹಾನಗಲ್ ಕ್ಷೇತ್ರದ ಆರು ಬಾರಿಯ ಶಾಸಕರು ಹಾಗೂ ಆತ್ಮೀಯರಾದ ಶ್ರೀ ಮನೋಹರ್ ತಹಶೀಲ್ದಾರ್ ಅವರು ನಿಧನರಾದ ವಿಷಯ ತಿಳಿದು ತುಂಬಾ ದುಃಖಿತನಾಗಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ ಬಿಜೆಪಿ ಸೇರಿದ್ದ ಅವರು, ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿಗಾಗಿ ಶ್ರಮಿಸಿದ್ದರು. ಅವರ ನಿಧನದಿಂದ ರಾಜ್ಯವು ಒಬ್ಬ ಅನುಭವಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬಕ್ಕೆ ಹಾಗೂ ಅವರ ಅಪಾರ ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ” ಎಂದು ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದರು.
ವರದಿ: ಅಣ್ಣಪ್ಪ ಬಾರ್ಕಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:05 am, Thu, 21 November 24