ಬಿಜೆಪಿ ಸರ್ಕಾರದಲ್ಲಿ ಉದಾಸಿಗೆ ಮಂತ್ರಿ ಸ್ಥಾನ ಸಿಗಲಿಲ್ಲ ಏಕೆ: ಡಿಕೆ ಶಿವಕುಮಾರ್ ಪ್ರಶ್ನೆ
ನಾನು ದಿವಂಗತ ಉದಾಸಿಯವರ ಜೊತೆ ಕೆಲಸ ಮಾಡಿದ್ದೇನೆ. ಅವರು ಸಜ್ಜನ ವ್ಯಕ್ತಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಹಾನಗಲ್: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಸಿ.ಎಂ.ಉದಾಸಿ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ ಏಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ಮಾತನಾಡಿದ ಶಿವಕುಮಾರ್, ಸಚಿವರಾಗಬೇಕು ಎಂಬ ಆಕಾಂಕ್ಷೆ ಸಿ.ಎಂ.ಉದಾಸಿ ಅವರಿಗಿತ್ತು. ತಮ್ಮನ್ನು ಮಂತ್ರಿ ಮಾಡಲಿಲ್ಲ ಎನ್ನುವ ಕೊರಗಿನಲ್ಲೇ ಉದಾಸಿ ಮೃತಪಟ್ಟರು. ಇದು ನನ್ನ ವೈಯಕ್ತಿಕ ಭಾವನೆ ಎಂದು ಶಿವಕುಮಾರ್ ವಿವರಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎರಡು ಗಂಟೆ ತಡವಾಗಿ ಬಂದಿದ್ದೇನೆ ಕ್ಷಮೆ ಇರಲಿ. ನಾಮಪತ್ರ ಸಲ್ಲಿಕೆ ವೇಳೆ ದೇವಸ್ಥಾನಕ್ಕೆ ಹೋಗಿದ್ದೆ. ಇವತ್ತೂ ಆ ಗ್ರಾಮದೇವತೆಗೆ ಹೋಗಿ ಶ್ರೀನಿವಾಸ ಮಾನೆ ಅವರನ್ನ ವಿಧಾನಸೌಧಕ್ಕೆ ಕಳಿಸಿಕೊಡು ತಾಯಿ ಅಂತಾ ಕೇಳಿಕೊಂಡು ಬಂದೆ ಎಂದು ತಡವಾಗಿ ಬಂದಿದ್ದಕ್ಕೆ ಕಾರಣ ವಿವರಿಸಿದರು.
ನಾನು ದಿವಂಗತ ಉದಾಸಿಯವರ ಜೊತೆ ಕೆಲಸ ಮಾಡಿದ್ದೇನೆ. ಅವರು ಸಜ್ಜನ ವ್ಯಕ್ತಿ, ಅವರ ಬಗ್ಗೆ ನಾನೇನೂ ಆಪಾದನೆ ಮಾಡೋದಿಲ್ಲ. ಶ್ರೀನಿವಾಸ ಮಾನೆ ಕೂಡ ದಿವಂಗತ ಉದಾಸಿಯವರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಯಾರೋ ಕೆಲವರು ಉದಾಸಿ ಖಾಯಂ ಸಿಎಂ ಅಂತಿದ್ದರು. ಯಡಿಯೂರಪ್ಪ ಸರಕಾರ ರಚನೆಯಾದಾಗ ಯಾಕೆ ಉದಾಸಿಯವರನ್ನ ಮಂತ್ರಿ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಲ್ಲಿ ಪ್ರಚಾರ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏನೇನೋ ಮಾತನಾಡಿದ್ದಾರೆ. ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಅವರ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ನಿನ್ನೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಸಿದ್ದರಾಮಯ್ಯರನ್ನ ಅಲ್ಲಿನ ಜನರು ಸೋಲಿಸಿ ಕೆಆರ್ಎಸ್ಗೆ ಹಾಕಿದರು ಅಂದಿದ್ದಾರೆ. ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರ ತಂದವರು. ಆದರೆ ಯಡಿಯೂರಪ್ಪರನ್ನ ನೀವು ಯಾವ ಸಮುದ್ರಕ್ಕೆ, ಕೆರೆ, ಬಾವಿಗೆ ಹಾಕಿದಿರಿ ಅನ್ನೋದನ್ನ ಹೇಳಿ ಎಂದು ಲೇವಡಿ ಮಾಡಿದರು.
ಕೊರೊನಾ ಬಂದ ಮೇಲೆ ನಾವೆಲ್ಲರೂ ನರಳಿದ್ದೇವೆ. ಸಾವಿರಾರು ಜನರು ಆಸ್ಪತ್ರೆಗೆ ಸೇರಿದ್ದರು, ಅಂಗಡಿಗಳೆಲ್ಲ ಬಂದ್ ಆಗಿದ್ದವು. ಇಂಥ ಸಂದರ್ಭದಲ್ಲಿ ಸರ್ಕಾರ ರೈತರಿಗೆ ನೆರವಾಯಿತೆ? ಬೆಂಬಲ ಬೆಲೆ, ರಿಯಾಯ್ತಿ ದರದಲ್ಲಿ ಗೊಬ್ಬರ, ಬೀದಿ ವ್ಯಾಪಾರ ಮಾಡುವವರಿಗೆ ನೆರವು, ಕಾರ್ಮಿಕರಿಗೆ ಪರಿಹಾರ.. ಹೀಗೆ ಸರ್ಕಾರ ನೀಡಿದ ಯಾವ ಭರವಸೆಯೂ ಈಡೇರಲಿಲ್ಲ ಎಂದು ವಿಷಾದಿಸಿದರು.
ಬಿಜೆಪಿ ನಾಯಕರಿಗೆ ಮತ ಕೇಳುವ ನೈತಿಕತೆಯೇ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡಿದರು. ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಸತ್ತ ಮೂವತ್ತಾರು ಜನರಿಗೆ ಸರ್ಕಾರ ಸಕಾಲದಲ್ಲಿ ನೆರವಾಗಲಿಲ್ಲ. ನಾನು ಮತ್ತು ಸಿದ್ದರಾಮಯ್ಯ ನೊಂದವರನ್ನು ಭೇಟಿ ಮಾಡಿ, ಒಂದೊಂದು ಲಕ್ಷ ರುಪಾಯಿ ಕೊಟ್ಟು ಬಂದ್ವಿ ಎಂದರು.
ಇದನ್ನೂ ಓದಿ: ಹಾನಗಲ್, ಸಿಂದಗಿ ಉಪಚುನಾವಣೆ ನೆರಳಲ್ಲಿ ಸಿದ್ದರಾಮಯ್ಯ vs ಬಿಜೆಪಿ ಟ್ವೀಟ್ ವಾರ್ ಇದನ್ನೂ ಓದಿ: ಹಾನಗಲ್ನಲ್ಲಿ ರಂಗೇರಿದ ಬೈ ಎಲೆಕ್ಷನ್ ಅಖಾಡ, ಶಿವರಾಜ್ ಸಜ್ಜನರ ಪರ ಸಿಎಂ ಬೊಮ್ಮಾಯಿ ಮತ ಬೇಟೆ
Published On - 4:14 pm, Mon, 18 October 21