ಹಾವೇರಿ ಶಾಲೆಗಳಲ್ಲಿ ರೇಷನ್ ಪೂರೈಕೆಯಾಗದೆ ಸ್ಥಗಿತಗೊಂಡ ಬಿಸಿಯೂಟ ಯೋಜನೆ
Haveri News; ಬಿಸಿಯೂಟ ಸ್ಥಗಿತ ಕುರಿತು ಹಾವೇರಿ ಜಿಲ್ಲಾ ಪಂಚಾಯತ್ ಸಿಇಓ ಪ್ರತಿಕ್ರಿಯಿಸಿದ್ದು, ಜಿಲ್ಲೆಗೆ ಸರ್ಕಾರದಿಂದ ಬರಬೇಕಾಗಿದ್ದ ರೇಷನ್ ಬಂದಿದೆ. ಆದರೆ ತಾಲೂಕು ಮಟ್ಟದಿಂದ ಪೂರೈಕೆಯಾಗಬೇಕಿರುವ ವ್ಯತ್ಯಯವಾಗಿದೆ. ಈ ವಿಳಂಬಕ್ಕೆ ಕೆಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಹೇಳಿದ್ದಾರೆ.
ಹಾವೇರಿ, ಆಗಸ್ಟ್ 19: ರೇಷನ್ ಕೊರತೆಯಿಂದಾಗಿ ಹಾವೇರಿ (Haveri) ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ (Mid day meals) ಪೂರೈಕೆ ಸ್ಥಗಿತಗೊಂಡಿದೆ. ಹೆಚ್ಚಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮನೆಯಿಂದ ಊಟ ತರುವಂತೆ ಶಿಕ್ಷಕರು ಸೂಚನೆ ನೀಡಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಬರಬೇಕಾಗಿದ್ದ ರೇಷನ್ ವಿಳಂಬವಾದ ಹಿನ್ನಲೆಯಲ್ಲಿ 20 ದಿನಗಳಿಂದ ಬಿಸಿಯೂಟ ಬಂದ್ ಆಗಿದೆ. ಅಕ್ಕಿ, ಬೇಳೆ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದರಿಂದ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇನ್ನೂ ಕೆಲವೆಡೆ ಸ್ವತಃ ಶಿಕ್ಷಕರೇ ಅಂಗಡಿಯಿಂದ ರೇಷನ್ ಖರೀದಿಸುತ್ತಿದ್ದಾರೆ. ಅಡುಗೆ ಎಣ್ಣೆ, ಬೇಳೆ ಪೂರೈಕೆಗೆ ಎರಡು ತಿಂಗಳಿಗೊಮ್ಮೆ ಹೊಸ ಟೆಂಡರ್ ನೀಡುತ್ತಿರುವ ಹಿನ್ನಲೆಯಲ್ಲಿ ಈ ವ್ಯತ್ಯಯವಾಗಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬಿಸಿಯೂಟ ಸ್ಥಗಿತ ಕುರಿತು ಹಾವೇರಿ ಜಿಲ್ಲಾ ಪಂಚಾಯತ್ ಸಿಇಓ ಪ್ರತಿಕ್ರಿಯಿಸಿದ್ದು, ಜಿಲ್ಲೆಗೆ ಸರ್ಕಾರದಿಂದ ಬರಬೇಕಾಗಿದ್ದ ರೇಷನ್ ಬಂದಿದೆ. ಆದರೆ ತಾಲೂಕು ಮಟ್ಟದಿಂದ ಪೂರೈಕೆಯಾಗಬೇಕಿರುವ ವ್ಯತ್ಯಯವಾಗಿದೆ. ಈ ವಿಳಂಬಕ್ಕೆ ಕೆಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಅಕ್ಷಯ ಶ್ರೀಧರ ಹೇಳಿದ್ದಾರೆ.
ಇದುವೆರೆಗೆ ಎಣ್ಣೆ ಮತ್ತು ಬೇಳೆ ರಾಜ್ಯ ಮಟ್ಟದಿಂದ ಬಂದಿಲ್ಲ. ಆದಷ್ಟು ಬೇಗ ಬರಬಹುದು ಎಂಬ ನೀರಿಕ್ಷೆಯಲ್ಲಿದ್ದೇವೆ. ಎಣ್ಣೆ ವಿತರಣೆಯ ಟೆಂಡರ್ ಆಗಿದೆ, ಆದ್ರೆ ಇದುವರೆಗೆ ನಮ್ಮ ಜಿಲ್ಲೆಗೆ ಬಂದಿಲ್ಲ. ಬೇಳೆಗೆ ಮಾತ್ರ ಸರ್ಕಾರ ಮಟ್ಟದಿಂದ ಯಾವುದೇ ಟೆಂಡರ್ ಆಗಿಲ್ಲ, ಆದಷ್ಟು ಬೇಗ ಪೂರೈಕೆ ಮಾಡುತ್ತೇವೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ ಪೌಷ್ಠಿಕ ಆಹಾರ ವಿತರಣೆ
ಬೆಂಗಳೂರಿನ ಈಜಿಪುರ ಸರ್ಕಾರಿ ಶಾಲೆಯಲ್ಲಿ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದರು. ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿಯಲ್ಲಿ ಒಂಭತ್ತು ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಹಾರ ವಿತರಣೆ ಮಾಡಲಾಯಿತು.
ಇದನ್ನೂ ಓದಿ: ಹಾವೇರಿ: ಸೇತುವೆ ನಿರ್ಮಾಣ ಕೋರಿ ಪ್ರಧಾನಿ ಮೋದಿಗೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ಪತ್ರ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ಬಾಳೆಹಣ್ಣು ವಿತರಣೆ
ಆಗಸ್ಟ್ 18ರಿಂದ ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 8-10 ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ಬಾರಿ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ ಯೋಜನೆಯು ಆರಂಭವಾಗಿದೆ. ಈ ಮೊದಲು 8ನೇ ತರಗತಿವರೆಗೆ ಮಾತ್ರ ಎಂದಿದ್ದ ಈ ಯೋಜನೆಯನ್ನು, ಪ್ರಸ್ತುತ 10 ನೇ ತರಗತಿಯವರೆಗೂ ವಿಸ್ತರಿಸಲಾಗಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಅನಿಮಿಯಾವನ್ನು ನಿಯಂತ್ರಿಸುವ ಉದ್ದೇಶದಿಂದ ಈ ಯೋಜನೆಯನ್ನು ತರಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ