
ಹಾವೇರಿ, ನವೆಂಬರ್ 16: ಜಿಲ್ಲೆಯಲ್ಲಿ ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತ ಸಂಘಟನೆಗಳು ಸರ್ಕಾರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿವೆ. ಕಲಬುರಗಿ ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ 3,600 ರೂ ದರ ನೀಡುವಂತೆ ಆಗ್ರಹಿಸಿದ್ದು, ಬೇಡಿಕೆ ಈಡೇರದಿದ್ದರೆ ಸಚಿವ ರುದ್ರಪ್ಪ ಲಮಾಣಿ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸುವುದಾಗಿ ಕಬ್ಬು ಬೆಳೆಗಾರರು ಎಚ್ಚರಿಕೆ ನೀಡಿದ್ದಾರೆ.
ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರು ಸರ್ಕಾರ ಮತ್ತು ಸಕ್ಕರೆ ಸಚಿವರ ವಿರುದ್ಧ ಸಿಡಿದೆದ್ದಿದ್ದಾರೆ. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕರೆಡ್ಡಿ ಮರಚರೆಡ್ಡಿ ನೇತೃತ್ವದಲ್ಲಿ ರೈತ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಕಲಬುರಗಿಯಲ್ಲಿ ಹಾವೇರಿಗಿಂತ ಕಡಿಮೆ ಇಳುವರಿ ಇರುವ ಕಾರ್ಖಾನೆಗಳೇ ಮೊದಲ ಬಿಲ್ 3,500 ರೂ ಹಾಗೂ ಎರಡನೇ ಬಿಲ್ 100 ರೂ ಸೇರಿದಂತೆ ಒಟ್ಟು 3,600 ರೂ ದರ ನಿಗದಿ ಮಾಡಿವೆ. ಆದರೆ ಹಾವೇರಿಯಲ್ಲಿ ಮಾತ್ರ ಕಾರ್ಖಾನೆಗಳು ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಈ ಕುರಿತಾಗಿ ಅಶೋಕರೆಡ್ಡಿ ಮರಚರೆಡ್ಡಿ ಪ್ರತಿಕ್ರಿಯಿಸಿದ್ದು, ‘ರೈತರು ಕಾನೂನು ಕೈಗೆತ್ತಿಕೊಂಡರೆ ಸರ್ಕಾರಕ್ಕೆ ಏನೂ ಮಾಡಲಾಗಲ್ಲ. ಪ್ರತಿ ಟನ್ ಕಬ್ಬಿಗೆ 3,600 ರೂ ಕೊಡಬೇಕು. ಆಗದಿದ್ದರೆ ರುದ್ರಪ್ಪ ಲಮಾಣಿ ರಾಜೀನಾಮೆ ಕೊಡುವುದು ಒಳಿತು. ಆಗ ಬೇರೆ ಸಚಿವರು ಬರುತ್ತಾರೆ, ಅವರಿಗೆ ನಾವು ಕೇಳುತ್ತೇವೆ. ನ್ಯಾಯ ಕೇಳಲು ಕಾರ್ಖಾನೆಗೆ ಹೋಗ್ಬೇಕಂದರೆ ರೈತ ಮುಖಂಡರು ಕಾರ್ಖಾನೆಗೆ ಬರದಂತೆ VIPN ಕಾರ್ಖಾನೆಯವರು ನಕಲಿ ದಾಖಲೆ ಸೃಷ್ಟಿಸಿ ಸ್ಟೇ ತಂದಿದ್ದಾರೆ. ಇದನ್ನು ಕೇಳಲು ಸಚಿವರಿಗೆ ಅಧಿಕಾರ ಇಲ್ಲವೇ? ನೀವು ಹಲ್ಲು ಕಿತ್ತ ಹಾವಾದರೆ ತಕ್ಷಣ ಸಚಿವಸ್ಥಾನಕ್ಕೆ ರಾಜೀನಾಮೆ ಕೊಡಿ. ನಾವು ಮುಖ್ಯಮಂತ್ರಿಗಳಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತಷ್ಟು ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ: ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ
‘ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರು ಸುಮ್ಮನೆ ಕೂರಲು ಆಗುವುದಿಲ್ಲ. ಕಲಬುರಗಿಯಲ್ಲಿ ದರ ನಿಗದಿ ಮಾಡಿದಂತೆ ಹಾವೇರಿಯಲ್ಲೂ ಮಾಡಿ. ರಿಕವರಿ ಕಡಿಮೆ ಇದೆ, ದರ ಕೊಡಲು ಒಪ್ಪುತ್ತಿಲ್ಲ ಎಂದು ಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ. ತೂಕದಲ್ಲಿ ಮೋಸದ ಬಗ್ಗೆ ನಾವು ಪತ್ರ ಕೊಟ್ಟಿದ್ದೇವೆ. ಅದು ಈವರೆಗೂ ಸರಿಯಾಗಿಲ್ಲ. ಹೀಗಿರುವಾಗ ಸಚಿವರು ಇಂತಹ ಹೇಳಿಕೆ ನೀಡಬಾರದಿತ್ತು’ ಎಂದಿದ್ದಾರೆ.
‘ಶಿಗ್ಗಾಂವ ಹದ್ದು, ಕಲಘಟಗಿ ಹದ್ದು ಅಂತಾ ಬೇರ್ಪಡಿಸಿ ವಿಐಪಿಎನ್ದವರು ದರ ಬೇರೆ ಬೇರೆ ಕೊಡುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಿ, ಎಲ್ಲರಿಗೂ ಒಂದೇ ದರ ಕೊಡಬೇಕು. ನವೆಂಬರ್ 18ರಿಂದ ಸಕ್ಕರೆ ಸಚಿವರ ಮನೆ ಮುಂದೆ ಅಹೋರಾತ್ರಿ ಧರಣಿ ಮಾಡುತ್ತೇವೆ. ಅಷ್ಟರೊಳಗೆ ಸಚಿವರು, ಜಿಲ್ಲಾಧಿಕಾರಿಗಳು ರೈತರಿಗೆ ದರ ಕೊಡಿಸಬೇಕು. ರೈತರಿಗೆ ಹಣದ ಆಮಿಷ ನೀಡಿ ಕಬ್ಬು ತೆಗೆದುಕೊಂಡು ಹೋಗುತ್ತಿದ್ದಾರೆ. ಯಾವ ರೈತರು ದರ ನಿಗದಿ ಆಗುವವರೆಗೂ ಕಬ್ಬು ಕಟಾವು ಮಾಡಬೇಡಿ’ ಎಂದು ಅಶೋಕರೆಡ್ಡಿ ಮರಚರೆಡ್ಡಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.