ಬೆಳಗಾವಿಯಲ್ಲಿ ಮತ್ತಷ್ಟು ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ: ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ
ಒಂದು ಟನ್ ಕಬ್ಬಿಗೆ 1 ಸಾವಿರ ರೂ. ಪ್ರೋತ್ಸಾಹಧನ ನೀಡುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೋರಾಟದ ಮುಂದಾಳತ್ವ ವಹಿಸಿರುವ ಚೂನ್ನಪ್ಪ ಪೂಜಾರಿ ಶಶಿಕಾಂತ್ ಗುರೂಜಿಯವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ರೈತರು ಆಕ್ರೋಶಗೊಂಡಿದ್ದು, ಜಿಲ್ಲೆಯ ಹಲವು ಭಾಗದಲ್ಲಿ ರಸ್ತೆ ತಡೆ ನಡೆಸಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಿದೆ.

ಬೆಳಗಾವಿ, ನವೆಂಬರ್ 5: ಕಬ್ಬಿಗೆ ಪ್ರೋತ್ಸಾಹಧನ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದು ಬೆಳಗಾವಿ ಜಿಲ್ಲೆಯಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹಾಗೂ ಗೌರವ ಅಧ್ಯಕ್ಷರನ್ನು ವಶಕ್ಕೆ ಪಡೆದಿರುವ ಸುದ್ದಿ ಹರಡುತ್ತಿದ್ದಂತೆ ರೈತರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈಗಿನಿಂದಲೇ ನಾಳೆ ಅಂದರೆ ನವೆಂಬರ್ 06ರ ಬೆಳಗ್ಗೆ 6 ಗಂಟೆ ವರೆಗೂ ಮದ್ಯ ಮಾರಾಟ ನಿಷೇಧ ಮಾಡಿ ಪ್ರಬಾರಿ ಡಿಸಿ ರಾಹುಲ್ ಶಿಂಧೆ ಆದೇಶ ಹೊರಡಿಸಿದ್ದಾರೆ.
ತೀವ್ರಗೊಂಡ ಪ್ರತಿಭಟನೆ
ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ರೈತರು, ಚೂನಪ್ಪ ಪೂಜಾರಿ ಮತ್ತು ಶಶಿಕಾಂತ ಗುರೂಜಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ನಾಯಕರನ್ನು ವಶಕ್ಕೆ ಪಡೆದಿರುವ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು, ತಮ್ಮ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದನ್ನೂ ನೋಡಿ: ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿ ಹೊರವಲಯದಲ್ಲೇ ಹೋರಾಟಗಾರರು ವಶಕ್ಕೆ
ಇತ್ತ ಬೆಳಗಾವಿ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಲವೆಡೆ ರಸ್ತೆ ತಡೆ ನಡೆಸಲಾಗಿದ್ದು, ರಾಜ್ಯ ಹೆದ್ದಾರಿಗಳಲ್ಲಿಯೂ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದ ಸ್ಥಳೀಯವಾಗಿ ವಾಹನ ಸಂಚಾರದ ಮೇಲೆ ಪರಿಣಾಮ ಉಂಟಾಗಿದೆ. ಇನ್ನು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮತ್ತಷ್ಟು ರೈತರು ಸ್ಥಳಕ್ಕೆ ಬರುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ಪೊಲೀಸರು ಗಮನಿಸುತ್ತಿದ್ದಾರೆ.
ಗುರ್ಲಾಪುರದ ವೇದಿಕೆಗೆ ಬನ್ನಿ ಎಂದು ಕರೆ ನೀಡಿದ ಶಶಿಕಾಂತ ಗುರೂಜಿ
ಇನ್ನು ರೈತ ಮುಖಂಡರನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದ್ದು, ರಾಜ್ಯಾದ್ಯಂತ ಇರುವ ಎಲ್ಲ ರೈತರು ಗುರ್ಲಾಪುರದ ವೇದಿಕೆಗೆ ಬನ್ನಿ ಎಂದು ಶಶಿಕಾಂತ ಗುರೂಜಿ ಕರೆ ನೀಡಿದ್ದಾರೆ. ಬೆಳಗಾವಿಗೆ ಹೋಗುವ ಮಾರ್ಗದಲ್ಲಿ ನಮ್ಮನ್ನು ವಶಕ್ಕೆ ಪಡೆದಿದ್ದು, ಗೋಕಾಕ್ ಐಬಿಗೆ ಕರೆದುಕೊಂಡು ಬಂದಿದ್ದಾರೆ. ಈಗ ನಮ್ಮನ್ನು ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡಲು ಎಲ್ಲರೂ ಗುರ್ಲಾಪುರಕ್ಕೆ ಬನ್ನಿ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಮುಖಂಡರ ಬಿಡುಗಡೆಗೆ ಪಟ್ಟು ಹಿಡಿದಿರುವ ಕಬ್ಬು ಬೆಳೆಗಾರರು, ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.




