ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆಯ ಉದ್ಯೋಗಾವಕಾಶ ನೀಡುವಂತೆ ಸಿಎಂ ಡಿ.ಕೆ.ಶಿವಕುಮಾರ್ ಕರೆ
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆಯ ಉದ್ಯೋಗಾವಕಾಶ ನೀಡುವಂತೆ ಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದು, ಕನ್ನಡದ ಹೆಸರಿನಲ್ಲಿ ನೈತಿಕ ಪೊಲೀಸ್‌ಗಿರಿ ಅಥವಾ ಬೆದರಿಕೆಯನ್ನು ಸರ್ಕಾರ ಸಹಿಸುವುದಿಲ್ಲ ಎಂದೂ ಎಚ್ಚರಿಸಿದ್ದಾರೆ. ಈ ನಡುವೆ ಐಟಿ-ಬಿಟಿ ಕಂಪನಿಗಳಿಗೆ ತೆರಳಿ ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ ಎಂದು ಮಾಹಿತಿ ಸಂಗ್ರಹಿಸುವ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಬೆಂಗಳೂರು, ನವೆಂಬರ್ 05: ಕನ್ನಡಿಗರಿಗೆ ಸಿಗಬೇಕಾದ ನ್ಯಾಯಯುತ ಉದ್ಯೋಗಾವಕಾಶಗಳನ್ನು ನೀಡಿ. ಕನ್ನಡ ಮತ್ತು ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡುವಂತೆ ಮತ್ತೆ ಒತ್ತಾಯಿಸುತ್ತೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದು, ಅವುಗಳನ್ನು ಪರಿಹರಿಸುವುದನ್ನು ನಾವು ಖಚಿತಪಡಿಸಿಕೊಳ್ಳಲು ಬಯಸುವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಕನ್ನಡಿಗರಿಗೆ ತಾರತಮ್ಯ ಧೋರಣೆ ವಿಚಾರ ಸಂಬಂಧ ಖಾಸಗಿ ಕಂಪನಿಗಳಿಗೆ ಅವರು ಕೆಲವು ಮಹತ್ವದ ಸಂದೇಶ ನೀಡಿದ್ದಾರೆ.
‘ಪ್ರತಿಭಾವಂತ ಕನ್ನಡಿಗರು ಹೇರಳವಾಗಿದ್ದಾರೆ’
ಸರ್ಕಾರವು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದು, ಕನ್ನಡದ ಹೆಸರಿನಲ್ಲಿ ಯಾರೂ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು, ಬೆದರಿಕೆ ಹಾಕುವುದು ಅಥವಾ ನೈತಿಕ ಪೊಲೀಸ್‌ಗಿರಿಯನ್ನ ಸಹಿಸಲ್ಲ. ಆದರೆ ಐಟಿ, ಖಾಸಗಿ ಕಂಪನಿಗಳಿಗೂ ಜವಾಬ್ದಾರಿ ಇದೆ ಎಂದವರು ತಿಳಿಸಿದ್ದಾರೆ. ಕೌಶಲ್ಯಾಧಾರಿತ ನೇಮಕಾತಿ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲ್ಲ . ಆದರೆ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಗಮನಾರ್ಹ ಪಾಲು ಸಿಗಲೇಬೇಕು. ರಾಜ್ಯದಲ್ಲೂ ಪ್ರತಿಭಾವಂತ ಕನ್ನಡಿಗರು ಹೇರಳವಾಗಿದ್ದಾರೆ. ಅವರಿಗೆ ಅರ್ಹವಾದ ಅವಕಾಶಗಳನ್ನು ಕಲ್ಪಿಸಿಕೊಡಿ. ಸ್ವಾರ್ಥ ಹಿತಾಸಕ್ತಿಗಳಿಗಾಗಿ ಕನ್ನಡದ ವಿಷಯವನ್ನು ಯಾರೂ ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: ಕರವೇ ಅಭಿಯಾನಕ್ಕೆ ವಿಜಯೇಂದ್ರ ಬೆಂಬಲ: ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಹೇಳಿಕೆ ಬಗ್ಗೆಯೂ ಕಿಡಿ
ಈ ನಡುವೆ ಐಟಿ-ಬಿಟಿ ಕಂಪನಿಗಳಿಗೆ ತೆರಳಿ ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ ಎಂದು ಮಾಹಿತಿ ಸಂಗ್ರಹಿಸುವ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮೂರು ದಿನಗಳಿಂದ 300ಕ್ಕೂ ಹೆಚ್ಚು ಕಂಪನಿಗಳಿಗೆ ಭೇಟಿ ನೀಡಿ ಕರವೇ ಕಾರ್ಯಕರ್ತರು ಆಗ್ರಹ ಪತ್ರ ನೀಡಿದ್ದು, ನವೆಂಬರ್-30ರ ವರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಗ್ರಹಿಸಲಾದ ಮಾಹಿತಿಯನ್ನು ಡಿಸೆಂಬರ್ ಮೊದಲ ವಾರದಲ್ಲಿ ಸಿಎಂಗೆ ಕರವೇ ಸಲ್ಲಿಸಲಿದೆ. ಯಾವ ಕಂಪನಿಯಲ್ಲಿ ಎಷ್ಟು ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ ಎಂಬ ಅಂಕಿ-ಅಂಶಗಳನ್ನು ವರದಿ ಒಳಗೊಂಡಿರಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




