ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಬೀಚ್‌ನಲ್ಲಿರೋ ಯುದ್ಧನೌಕೆ: ಕಾರವಾರಕ್ಕೆ ಹೋದ್ರೆ ಈ ಜಾಗ ಮಿಸ್ ಮಾಡ್ಬೇಡಿ!
ಕಾರವಾರದ ಐಎನ್ಎಸ್ ಚಾಪೆಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯ ಕರಾವಳಿ ಜಿಲ್ಲೆಯ ಪ್ರಮುಖ ಆಕರ್ಷಣೆಯಾಗಿದೆ. 20 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ಲಕ್ಷಾಂತರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಕೂಡ ಮನ್ ಕೀ ಬಾತ್‌ನಲ್ಲಿ ಈ ಕುರಿತಾಗಿ ಉಲ್ಲೇಖಿಸಿದ್ದರು. ಭಾರತೀಯ ನೌಕಾಪಡೆಯ ಸೇವೆ ಸಲ್ಲಿಸಿದ ಈ ಹಡಗು, ಮಿಸೈಲ್ ಮತ್ತು ರಾಡಾರ್ ವ್ಯವಸ್ಥೆಗಳ ಮಾಹಿತಿ ನೀಡುವ ಮೂಲಕ ದೇಶದ ರಕ್ಷಣಾ ಇತಿಹಾಸವನ್ನು ಅನಾವರಣಗೊಳಿಸುತ್ತದೆ.

ಕಾರವಾರ, ನವೆಂಬರ್ 16: ರಾಜ್ಯದ ಕರಾವಳಿ ಜಿಲ್ಲೆಯ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಯುದ್ಧ ನೌಕಾ ವಸ್ತು ಸಂಗ್ರಹಾಲಯ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಮ್ಯೂಸಿಯಂ ಸ್ಥಾಪನೆಯಾಗಿ 20 ವರ್ಷ ಕಳೆದಿದ್ದು, ಈವರೆಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್‌ನಲ್ಲಿ ಕರ್ನಾಟಕದ ಕೆಲ ವಿಶೇಷತೆಗಳ ಬಗ್ಗೆ ಹೇಳುವಾಗ ಈ ಮ್ಯೂಸಿಯಂ ಕುರಿತು ಪ್ರಸ್ತಾಪಿಸಿದ್ದು ವಿಶೇಷ.
ಪ್ರವಾಸಿಗರ ಆಕರ್ಷಣೆಯ ಕೇಂದ್ರವಾದ ಯುದ್ಧ ನೌಕಾ ವಸ್ತು ಸಂಗ್ರಹಾಲಯ
ಪಶ್ಚಿಮಘಟ್ಟಗಳ ಹಸಿರು ಮತ್ತು ಅರಬ್ಬಿ ಸಮುದ್ರದ ನೀಲಿ ಅಲೆಗಳ ಸಂಗಮ ಪ್ರದೇಶ, ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವ ಒಂದು ಸುಂದರ ಕರಾವಳಿ ಪ್ರದೇಶ ಕಾರವಾರ. ಇಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿದ್ದು ಅದರಲ್ಲೂ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಇರುವ ಐಎನ್ಎಸ್ ಚಾಪೆಲ್ ಯುದ್ದ ನೌಕಾ ವಸ್ತು ಸಂಗ್ರಹಾಲಯ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಇದನ್ನೂ ಓದಿ: ಕಾರವಾರದಲ್ಲಿ INS ಸಮರ್ಥಕ್ ಲೋಕಾರ್ಪಣೆ: ದೇಶದ ಕಡಲ ಭದ್ರತೆಗೆ ಹೊಸ ಶಕ್ತಿ
ಕಳೆದ 20 ವರ್ಷಗಳಿಂದ ವಾರ್‌ಶಿಪ್ ಮ್ಯೂಸಿಯಂ ಕಡಲತೀರದಲ್ಲಿದ್ದು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಈವರೆಗೆ ಸುಮಾರು 22 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿರುವುದು ಮತ್ತೊಂದು ವಿಶೇಷ. ಪ್ರಧಾನಿ ಮೋದಿ ಅವರು ವರ್ಷದ ಹಿಂದೆ ಮನ್ ಕೀ ಬಾತ್‌ನಲ್ಲಿ ಕಾರವಾರದ ಐಎನ್ಎಸ್ ಚಾಪೆಲ್ ವಾರ್ ಶಿಪ್ ಮ್ಯೂಸಿಯಂ ಬಗ್ಗೆ ಮಾತನಾಡಿದ್ದರು. ನಮ್ಮ ರಕ್ಷಣಾ ಪಡೆಯ ಹೆಮ್ಮೆ ಇರೋದ್ರಿಂದ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ನೌಕೆಯ ಬಗ್ಗೆ ಮಾಹಿತಿ ಪಡೆದು ಖುಷಿ ಪಡುತ್ತಿದ್ದಾರೆ.

ಐಎನ್ಎಸ್ ಚಾಪೆಲ್ ಯುದ್ದ ನೌಕೆಯು ಸುಮಾರು 29 ವರ್ಷಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದೆ. 275 ಟನ್ ತೂಕವಿದ್ದು, 38.6 ಮೀಟರ್ ಉದ್ದ ಹಾಗೂ 7.6 ಮೀಟರ್ ಅಗಲವಿದೆ. ಈ ಯುದ್ದ ನೌಕೆಯು ನಾಲ್ಕು ಮಿಸೈಲ್ ಲಾಂಚರ್ಗಳನ್ನ ಎರಡು ಆ್ಯಂಟಿ ಏರ್ ಕ್ರಾಪ್ಟ್ ಗನ್ ಹೊಂದಿದೆ. ಗುಪ್ತಚರ ಮಾಹಿತಿ ರವಾನಿಸುವ ಅತ್ಯಾಧುನಿಕ ರಾಡಾರ್ ವ್ಯವಸ್ಥೆ ಹೊಂದಿರುವ ನೌಕೆ ಹಲವು ವಿಶೇಷತೆಗಳನ್ನ ಒಳಗೊಂಡಿದೆ.
ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ ‘ಮಾಲ್ವಾಣ್’ ಯುದ್ಧನೌಕೆ: ಸ್ವದೇಶಿ ನಿರ್ಮಿತ ಹಡಗಿನ ವಿಶೇಷಗಳೇನು? ಇಲ್ಲಿದೆ ನೋಡಿ
ರಾಜ್ಯದ ಮಾನವ ನಿರ್ಮಿತ ಪ್ರವಾಸಿ ತಾಣವಾಗಿದ್ದು, ಬರುವ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಪ್ರತಿ ನಿತ್ಯವೂ ಸಾಕಷ್ಟು ಪ್ರವಾಸಿಗರನ್ನ ಸೆಳೆಯುತ್ತಿದೆ. ಇದರ ಜೊತೆಗೆ ವರ್ಷದ ಹಿಂದೆ ಟುಪಲೇವ್ ಏರ್ ಕ್ರಾಪ್ಟ್ ಕೂಡ ಇಲ್ಲಿ ನೆಲೆ ನಿಂತಿದ್ದರಿಂದ ರಕ್ಷಣಾ ಪಡೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗಿದೆ.

ಕಾರವಾರದಲ್ಲಿ ಏಷ್ಯಾದ ಅತಿ ದೊಡ್ಡ ನೌಕಾನೆಲೆಯಿದ್ದು ಕಾರವಾರಕ್ಕೆ ಬರುವ ಪ್ರವಾಸಿಗರಿಗೆ ನೌಕೆಪಡೆಯ ಬಗ್ಗೆ ಮಾಹಿತಿ ತಿಳಿಸಬೇಕೆಂಬ ಉದ್ದೇಶದಿಂದ 2006ರಲ್ಲಿ ಕಾರವಾರದಲ್ಲಿ ಐಎನ್ಎಸ್ ಚಾಪೆಲ್ ಯುದ್ದ ನೌಕೆಯನ್ನ ಮ್ಯೂಸಿಯಂ ಆಗಿ ಮಾಡಲಾಗಿತ್ತು. ಹೀಗಾಗಿ ಇಲ್ಲಿಗೆ ಬರುವ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಪ್ರವಾಸಿಗರಿಗೆ ನೌಕಾ ಪಡೆಯ ಬಗ್ಗೆ ನೌಕೆಯ ಬಗ್ಗೆ ಮಾಹಿತಿ ಪಡೆಯಲು ಅನುಕೂಲವಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
