ಹಾವೇರಿ: ವಿಯೆಟ್ನಾಂ ಯುವತಿ ಜತೆ ಹಳ್ಳಿ ಹುಡುಗನ ಮದುವೆ; ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ನವಜೋಡಿ
ಪ್ರದೀಪ ಸ್ನೇಹಿತರ ಜೊತೆಗೂಡಿ ವಿಯೆಟ್ನಾಂಗೆ ಯೋಗ ಕಲಿಸುವುದಕ್ಕೆ ಹೋಗಿದ್ದ. ಕಳೆದ ಎಂಟು ವರ್ಷಗಳಿಂದ ಯೋಗ ಶಿಕ್ಷಕನಾಗಿ ವಿಯೆಟ್ನಾಂನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕುಯಾನ್ ತ್ರಾಂಗ್(ಪ್ರೀತಿ) ಎನ್ನುವ ಯುವತಿಯೊಂದಿಗೆ ಪ್ರೇಮಾಂಕುರ ಆಗಿತ್ತು.
ಹಾವೇರಿ: ಜಿಲ್ಲೆಯಲ್ಲೊಂದು ಅಪರೂಪದ ಮದುವೆ ನಡೆದಿದೆ. ವಿಯೆಟ್ನಾಂನ ಯುವತಿ ಜಿಲ್ಲೆಯ ಹಳ್ಳಿಯೊಂದರ ಯುವಕನನ್ನು ವರಿಸಿದ್ದಾಳೆ. ಯೋಗದಲ್ಲಿ ಪರಿಣಿತಿ ಪಡೆದಿದ್ದ ಯುವಕ, ಐಟಿಐ ಮುಗಿಸಿ ವಿಯೆಟ್ನಾಂಗೆ (Vietnam) ಯೋಗ ಕಲಿಸುವುದಕ್ಕೆ ಹೋಗಿದ್ದ. ಆತ ಯೋಗ ಕಲಿಸುತ್ತಿದ್ದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಆತನಿಗೆ ಪ್ರೀತಿಯಾಗಿದೆ. ಹೀಗಾಗಿ ಇಬ್ಬರು ಮದುವೆಯಾಗಲು (Marriage) ನಿರ್ಧರಿಸಿದ್ದು, ವಿಯೆಟ್ನಾಂ ಯುವತಿ ಹಾಗೂ ಹಾನಗಲ್ ತಾಲೂಕಿನ ಹಳ್ಳಿಯ ಯುವಕ ನಿನ್ನೆ (ಡಿಸೆಂಬರ್ 14) ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ರಾಮತೀರ್ಥಹೊಸಕೊಪ್ಪ ಗ್ರಾಮದಲ್ಲಿ ವಿಯೆಟ್ನಾಂ ಯುವತಿಗೆ ತಾಳಿ ಕಟ್ಟಿ ಬಾಳಸಂಗಾತಿಯಾಗಿ ಸ್ವೀಕಾರ ಮಾಡಿರುವ ಈ ಯುವಕನ ಹೆಸರು ಪ್ರದೀಪ ಖಂಡನವರ. ಐಟಿಐ ಮುಗಿಸಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಯೋಗದಲ್ಲಿ ಪರಿಣಿತಿ ಪಡೆದಿದ್ದ ಪ್ರದೀಪ ಸ್ನೇಹಿತರ ಜೊತೆಗೂಡಿ ವಿಯೆಟ್ನಾಂಗೆ ಯೋಗ ಕಲಿಸುವುದಕ್ಕೆ ಹೋಗಿದ್ದ. ಕಳೆದ ಎಂಟು ವರ್ಷಗಳಿಂದ ಯೋಗ ಶಿಕ್ಷಕನಾಗಿ ವಿಯೆಟ್ನಾಂನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕುಯಾನ್ ತ್ರಾಂಗ್(ಪ್ರೀತಿ) ಎನ್ನುವ ಯುವತಿಯೊಂದಿಗೆ ಪ್ರೇಮಾಂಕುರ ಆಗಿತ್ತು.
ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಒಬ್ಬರನ್ನೊಬ್ಬರು ಬಿಟ್ಟಿಲಾರದಷ್ಟು ಪ್ರೀತಿ ಆಗಾದವಾಗಿ ಬೆಳೆದಿತ್ತು. ನಂತರ ಪ್ರದೀಪ ತನ್ನ ಪ್ರೀತಿ, ಪ್ರೇಮದ ವಿಚಾರವನ್ನು ಮನೆಯವರಿಗೆ ತಿಳಿಸಿ ಮನೆಯವರ ಅನುಮತಿ ಮೇರೆಗೆ ನಿನ್ನೆ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹಿಂದೂ ಸಂಪ್ರದಾಯದಂತೆ ಪ್ರದೀಪನ ಮನೆಯ ಮುಂದೆ ಹಂದರ ಹಾಕಿ ಸಂಭ್ರಮದಿಂದ ಮದುವೆ ಮಾಡಲಾಗಿದೆ. ಮನೆಯ ಮುಂದೆ ಹಾಕಿದ್ದ ಹಂದರದಲ್ಲಿ ವಧು-ವರರಿಗೆ ಸುರಿಗೆ ನೀರು ಹಾಕಿ, ಬಾಸಿಂಗ ಕಟ್ಟಿ ತಾಳಿ ಕಟ್ಟಿಸಲಾಯಿತು. ವಿಯೆಟ್ನಾಂ ಯುವತಿ ಪುರೋಹಿತರ ಮಂತ್ರಘೋಷಗಳೊಂದಿಗೆ ಪ್ರದೀಪನ ಜೊತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಪ್ರೀತಿಗೆ ಓರ್ವ ಸಹೋದರಿ ಮತ್ತು ತಾಯಿ ಇದ್ದಾರೆ. ಆದರೆ ಸಹೋದರಿಗೆ ಹೆರಿಗೆ ಆಗಿದ್ದರಿಂದ ತಾಯಿ ಸಹೋದರಿ ಜೊತೆಗಿದ್ದಾರೆ. ಹೀಗಾಗಿ ಆಕೆಯ ಸಂಬಂಧಿಕರು ಮದುವೆಗೆ ಆಗಮಿಸಿಲ್ಲ.
ಹಿಂದೂ ಸಂಪ್ರದಾಯದಂತೆ ನಡೆದ ಮದುವೆ ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ನಡೆಯಿತು. ಪರಸ್ಪರ ಹಾರ ಬದಲಿಸಿಕೊಂಡು ದಾಂಪತ್ಯಕ್ಕೆ ಕಾಲಿಟ್ಟ ಇಬ್ಬರು ಅರುಂದತಿ ನಕ್ಷತ್ರ ತೋರಿಸಿ ಖುಷಿಪಟ್ಟರು. ಯುವಕನ ಸಂಬಂಧಿಕರು, ಸ್ನೇಹಿತರು ಹಾಗೂ ಗ್ರಾಮದ ನೂರಾರು ಜನರು ಮದುವೆಗೆ ಬಂದು ವಧುವರರಿಗೆ ಶುಭ ಹಾರೈಸಿದರು.
ಮದುವೆಗೆ ಬಂದವರಿಗೆ ಹಲ್ವಾ, ಬೂಂದಿ ಲಾಡು, ರೊಟ್ಟಿ, ಚಪಾತಿ, ಬದನೆಕಾಯಿ ಪಲ್ಯ, ಭಜಿ, ಅನ್ನ ಸಾಂಬಾರಿನ ಊಟ ಹಾಕಿಸಲಾಯಿತು. ಮದುವೆಗೆ ಬಂದ ನೂರಾರು ಜನರು ವಿಯೆಟ್ನಾಂ ಯುವತಿಯನ್ನು ನೋಡಿ ಸಂತಸಪಟ್ಟರು. ವಿಯೆಟ್ನಾಂ ಯುವತಿ ಪ್ರೀತಿಗೆ ಇಲ್ಲಿನ ಭಾಷೆ ಅರ್ಥವಾಗದಿದ್ದರೂ ಹಿಂದೂ ಸಂಪ್ರದಾಯದಂತೆ ಪ್ರದೀಪನ ಕೈಹಿಡಿದು ಮದುವೆ ಸಂಪ್ರದಾಯಗಳಲ್ಲಿ ಭಾಗಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು. ರಾಮತೀರ್ಥಹೊಸಕೊಪ್ಪ ಎನ್ನುವ ಪುಟ್ಟ ಗ್ರಾಮದ ಯುವಕ ವಿಯೆಟ್ನಾಂ ದೇಶದ ಯುವತಿ ಜೊತೆ ಮದುವೆ ಆಗಿದ್ದು, ಮದುವೆಗೆ ಬಂದಿದ್ದ ಎಲ್ಲರಲ್ಲೂ ಖುಷಿ ಇಮ್ಮಡಿಸುವಂತೆ ಮಾಡಿತ್ತು.
ವರದಿ: ಪ್ರಭುಗೌಡ.ಎನ್.ಪಾಟೀಲ
ಇದನ್ನೂ ಓದಿ: ವಧುವಿಗೆ 58, ವರನಿಗೆ 65: ಫಲಿಸಿತು 35 ವರ್ಷಗಳ ಪ್ರೇಮ- ಮೇಲುಕೋಟೆ ಗುರುಪೀಠದಲ್ಲಿ ಅಪರೂಪದ ಮದುವೆ
Kaiwara: ಕೈವಾರದಲ್ಲಿ ಗಮನ ಸೆಳೆದ ಕುಬ್ಜರ ಅಪರೂಪದ ಮದುವೆ -ಜೋಡಿ ಶ್ರೀ ಕ್ಷೇತ್ರದಲ್ಲಿಯೇ ವಿವಾಹವಾಗಿದ್ದು ಏಕೆ!?
Published On - 9:34 am, Wed, 15 December 21