ಗ್ಯಾಂಗ್ ರೇಪ್ ಆಗಿದೆ ಎಂದು ಪೊಲೀಸರನ್ನೇ ಬೇಸ್ತು ಬೀಳಿಸಿದ ಮಹಿಳೆ! ನಿಜಕ್ಕೂ ನಡೆದಿದ್ದೇನು?
ಸಾಲದ ವಿಚಾರಕ್ಕೆ ನಡೆದ ಗಲಾಟೆಗೆ ಮಹಿಳೆ ಅತ್ಯಾಚಾರದ ಕಥೆಕಟ್ಟಿದ್ದ ಘಟನೆಯೊಂದು ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರದಲ್ಲಿ ನಡೆದಿದೆ. ಮಹಿಳೆ ಸೃಷ್ಟಿಸಿದ ಹೈಡ್ರಾಮಾದಿಂದ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಆ ಮೂಲಕ ಬ್ಯಾಡಗಿ ಠಾಣೆ ಪೊಲೀಸರು ನಿರಾಳರಾಗಿದ್ದಾರೆ.

ಹಾವೇರಿ, ಏಪ್ರಿಲ್ 17: ಸಾಲದ ವಿಚಾರಕ್ಕೆ ನಡೆದ ಗಲಾಟೆಗೆ ಓರ್ವ ಮಹಿಳೆ (woman) ಅತ್ಯಾಚಾರದ ಕಥೆಕಟ್ಟಿ ಹೈಡ್ರಾಮಾ ಸೃಷ್ಟಿಸಿದ್ದ ಘಟನೆ ಜಿಲ್ಲೆಯ ಬ್ಯಾಡಗಿ (Byadagi) ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರದಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ಪೊಲೀಸರ ಬಳಿ ಬಂದಿದ್ದ ಗಾಯಗೊಂಡಿದ್ದ ಮಹಿಳೆ ಫೀರಾಂಬಿ, ನನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಆರೋಪಿಸಿದ್ದರು. ಆದರೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅದು ಸುಳ್ಳು ಎಂಬುದು ಪತ್ತೆ ಆಗಿದೆ.
ಬ್ಯಾಡಗಿ ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರದ ನಿವಾಸಿ ಫೀರಾಂಬಿ, ಅತ್ಯಾಚಾರದ ಕಥೆಕಟ್ಟಿ ಪೊಲೀಸರಿಗೆ ಟೆನ್ಷನ್ ಕೊಟ್ಟಿದ್ದರು. ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಆರೋಪಿಸಿದ್ದರು. ಅವರ ಮುಖ, ಕುತ್ತಿಗೆ ಭಾಗದಲ್ಲಿ ಆಗಿದ್ದ ಗಾಯವನ್ನು ಕಂಡ ಪೊಲೀಸರು, ಫೀರಾಂಬಿ ಹೇಳಿಕೆಯಂತೆ ತನಿಖೆ ಆರಂಭಿಸಿದ್ದರು.
ಇದನ್ನೂ ಓದಿ: ಕರ್ನಾಟಕ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದ ರೈಲ್ವೆ: ಈ ನಿಲ್ದಾಣದಲ್ಲಿ ವಂದೇ ಭಾರತ್ ನಿಲುಗಡೆಗೆ ಆದೇಶ
ಬಳಿಕ ಮಹಿಳೆಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಪೊಲೀಸರು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಇದೇ ವೇಳೆ ಮಾಧ್ಯಮಗಳ ಬಳಿಯೂ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಫೀರಾಂಬಿ ಹೇಳಿದ್ದಾರೆ. ಆದರೆ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಹಿಳೆಯ ಕಳ್ಳಾಟ ಬಯಲಾಗಿದೆ.
ವಿಚಾರಣೆ ವೇಳೆ ಫೀರಾಂಬಿ, ಯಾವುದೇ ಗ್ಯಾಂಗ್ರೇಪ್ ಆಗಿಲ್ಲ ಎಂದು ಹೇಳಿದ್ದಾರೆ. ಸಾಲದ ವಿಚಾರಕ್ಕೆ ಫರಿದಾಬಾನು ಹಾಗೂ ಗುಡ್ಡಪ್ಪ ಎಂಬುವರರ ಸೊಸೆ ಜೊತೆ ಜಗಳವಾಗಿದೆ. ಈ ವೇಳೆ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು. ಹೀಗಾಗಿ ನಾನು ಅತ್ಯಾಚಾರ ಆಗಿದೆ ಎಂದು ಕಥೆ ಕಟ್ಟಿದ್ದಾಗಿ ಹೇಳಿದ್ದಾರೆ. ಸದ್ಯ ಮಹಿಳೆ ಸತ್ಯ ಬಾಯ್ಬಿಟ್ಟ ಕಾರಣ ಬ್ಯಾಡಗಿ ಠಾಣೆ ಪೊಲೀಸರು ನಿರಾಳರಾಗಿದ್ದಾರೆ.
ಪ್ರಕರಣಕ್ಕೆ ಹೊಸ ಟ್ವಿಸ್ಟ್
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯನ್ನು ಭೇಟಿ ಮಾಡಿರುವ ಬ್ಯಾಡಗಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ನಡೆದಿಲ್ಲ ಎಂದು ಹೇಳುವಂತೆ ಮಹಿಳೆಗೆ ಪೊಲೀಸರು ಒತ್ತಡ ಹಾಕಿದ್ದಾರೆ. ಪೊಲೀಸರಿಗೆ ರಾಜಕೀಯ ಒತ್ತಡ ಇದೆ. ತಮ್ಮ ಮೇಲೆ ಎರಡು ಬಾರಿ ಅತ್ಯಾಚಾರ ಆಗಿರುವುದಾಗಿ ಹೇಳಿದ್ದಾರೆ. ಖುದ್ದು ಮಹಿಳೆ ನನ್ನ ಬಳಿ ಹೇಳಿದ ವಿಡಿಯೋ ಇದೆ ಎಂದು ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದ್ದಾರೆ.
ಮಹಿಳೆ ಮೇಲೆ ಗ್ಯಾಂಗ್ ರೇಪ್ ಆಗಿಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್
ಘಟನೆ ಬಗ್ಗೆ ಹಾವೇರಿ ಎಸ್ಪಿ ಅಂಶುಕುಮಾರ್ ಪ್ರತಿಕ್ರಿಯಿಸಿದ್ದು, ಕೆಲವು ಮಾಧ್ಯಮಗಳಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂಬ ವರದಿ ಪ್ರಸಾರ ಆಗಿದೆ. ಮಹಿಳೆ ಮೇಲೆ ಗ್ಯಾಂಗ್ ರೇಪ್ ಆಗಿಲ್ಲ. ಯಾವುದೇ ಲೈಂಗಿಕ ದೌರ್ಜನ್ಯ ಕೂಡ ಆಗಿಲ್ಲ. ಇದು ಅವರ ವೈಯಕ್ತಿಕ ವಿಚಾರಗಳಿಗೆ ಜಗಳ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ: ಹಾಲು ಉತ್ಪಾದಕರ ಆಕ್ರೋಶಕ್ಕೆ ಮಣಿದ ಹಾಲು ಒಕ್ಕೂಟ: ಲೀಟರ್ ಹಾಲಿನ ದರ ಏರಿಕೆ
ಫರಿದಾಬಾನು, ನಬಿವುಲ್ಲಾ ಹಾಗೂ ಓರ್ವ ಮಹಿಳೆಯಿಂದ ಹಲ್ಲೆ ಮಾಡಲಾಗಿದೆ. ನಮ್ಮ ಮಹಿಳಾ ಪೊಲೀಸ್ ಅಧಿಕಾರಿಗಳು ವಿಸ್ತಾರವಾಗಿ ವಿಚಾರಣೆ ಮಾಡಿದ್ದರು. ಈ ವೇಳೆ ತಮ್ಮ ಮೇಲೆ ಗ್ಯಾಂಗ್ ರೇಪ್ ಆಗಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆದಿದೆ. ವೈದ್ಯಕೀಯ ತಪಾಸಣೆ ಕೂಡ ಮಾಡಲಾಗಿದೆ. ವರದಿ ಬರುವುದು ಬಾಕಿಯಿದೆ. ವರದಿ ಆಧರಿಸಿ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:19 am, Thu, 17 April 25